ಸಾರಾಂಶ
ಮಂಗಳೂರು: ಕುದ್ರೋಳಿ ಕ್ಷೇತ್ರದ ನವೀಕರಣ ರೂವಾರಿ ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ವಿಶ್ವವಿಖ್ಯಾತ ಮಂಗಳೂರು ದಸರಾ ಸೆ.22ರಿಂದ ಅ.2ರವರೆಗೆ ನಡೆಯಲಿದ್ದು, ಈ ಪ್ರಯುಕ್ತ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದ್ರೋಳಿ ಕ್ಷೇತ್ರದ ದಸರಾ ಕೇವಲ ಹಬ್ಬವಲ್ಲ, ಆಧ್ಯಾತ್ಮಿಕತೆ, ಸಂಸ್ಕೃತಿ, ಕಲೆ ಮತ್ತು ಸಮಾಜ ಸೇವೆಯ ಸಮಾಗಮ. ಈ ಹಿನ್ನೆಲೆಯಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.ಸ್ಪರ್ಧೆಗಳು ಯಾವುವು?: ಬಹುಭಾಷಾ ಕವಿಗೋಷ್ಠಿ (ತುಳು ಮತ್ತು ಕನ್ನಡ), ಮಕ್ಕಳ ದಸರಾದಲ್ಲಿ ಒಂದು ದಿನ ಕಿನ್ನಿಪಿಲಿ ಸ್ಪರ್ಧೆ (4 ವರ್ಷದೊಳಗಿನ, 4-8 ವರ್ಷದ ಮಕ್ಕಳಿಗೆ), ಭಕ್ತಿಗೀತೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮುದ್ದು ಶಾರದೆ ಸ್ಪರ್ಧೆ ನಡೆಯಲಿದೆ. ಪ್ರತಿದಿನ ವಿವಿಧ ತಂಡಗಳ ಕಲಾ ಪ್ರದರ್ಶನ, ಹಬ್ಬದ ಪ್ರತಿ ದಿನ ಜಾನಪದ, ಯಕ್ಷಗಾನ, ಸಂಗೀತ, ಸಾಹಿತ್ಯ, ನೃತ್ಯ ಇತ್ಯಾದಿ ಎಲ್ಲ ಕಲಾ ಪ್ರಕಾರಗಳ ಸಂಕಲನ ಗಮನ ಸೆಳೆಯಲಿದೆ. ಒಟ್ಟಾರೆ 31 ತಂಡಗಳಲ್ಲಿ 700ಕ್ಕೂ ಅಧಿಕ ಕಲಾವಿದರು ತಮ್ಮ ಕಲೆ ಪ್ರದರ್ಶಿಸಲಿದ್ದಾರೆ. ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಕಲಾವಿದರ ತಂಡಗಳು ಆಗಮಿಸುತ್ತಿದ್ದು, ಮಂಗಳೂರು ದಸರಾ ಅಂತಾರಾಜ್ಯ ಮಟ್ಟದ ಸಾಂಸ್ಕೃತಿಕ ಸೇತುವಾಗಲಿದೆ ಎಂದು ತಿಳಿಸಿದರು.ಜತೆಗೆ ಭರತನಾಟ್ಯ, ವೀಣಾ ವಾದನ, ಜನಪದ ಕಲಾಪ್ರಕಾರಗಳು, ಹರಿಕಥೆ, ತಾಳಮದ್ದಳೆ, ಯಕ್ಷಗಾನ, ಯಕ್ಷಗಾನ ನಾಟ್ಯ ಪುಂಡು ವೇಷ ವೈಭವ, ನೃತ್ಯ ರೂಪಕಿ, ಜಾದು ಪ್ರದರ್ಶನ, ಆಳ್ವಾಸ್ ಸಾಂಸ್ಕೃತಿಕ ವೈಭವ, ಎಸ್‌ಡಿಎಂ ಕಲಾ ವೈಭವ ಮೆರುಗು ನೀಡಲಿವೆ ಎಂದರು.ಅಸಾಮಾನ್ಯ ಸ್ತ್ರೀ ಪ್ರಶಸ್ತಿ: ದಸರಾದ ಈ ಅಪೂರ್ವ ಸಂದರ್ಭದಲ್ಲಿ ಎಲೆಮರೆ ಕಾಯಿಯಾಗಿ, ಸೇವೆಯೇ ಪರಮ ಗುರಿಯೆಂದು ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಾಧಕರನ್ನು ಸನ್ಮಾನಿಸಲಾಗುವುದು. ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಪದ್ಮರಾಜ್ ಹೇಳಿದರು.ಹಾಫ್ ಮ್ಯಾರಥಾನ್:ಕಳೆದ ವರ್ಷ ನಡೆದ ಹಾಫ್ ಮ್ಯಾರಥಾನ್‌ನಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ವರ್ಷವೂ ಹಾಫ್ ಮ್ಯಾರಥಾನ್ ನಡೆಯಲಿದೆ. ಸ್ಪರ್ಧಿಗಳ ಸಂಖ್ಯೆ ನೋಡಿಕೊಂಡು ಅತಿ ಕನಿಷ್ಠ ದರ ವಿಧಿಸುವ ಕುರಿತು ಚರ್ಚಿಸಲಾಗುವುದು ಎಂದರು.ಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರ್, ಪ್ರಧಾನ ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಟ್ರಸ್ಟಿ ಕೃತಿನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ. ಸುವರ್ಣ, ಸದಸ್ಯರಾದ ಚಂದನ್‌ದಾಸ್, ವಾಸುದೇವ ಕೋಟ್ಯಾನ್ ಇದ್ದರು.