ಮಂಗಳೂರು: 10ರಂದು ಇಸ್ಕಾನ್ ೨೦ನೇ ವಾರ್ಷಿಕ ಶ್ರೀ ಕೃಷ್ಣ - ಬಲರಾಮ ರಥಯಾತ್ರೆ

| Published : Feb 08 2024, 01:30 AM IST

ಮಂಗಳೂರು: 10ರಂದು ಇಸ್ಕಾನ್ ೨೦ನೇ ವಾರ್ಷಿಕ ಶ್ರೀ ಕೃಷ್ಣ - ಬಲರಾಮ ರಥಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ರಥಯಾತ್ರೆಯ ಮೆರವಣಿಗೆಯ ಚಾಲನೆ ಸಂಜೆ 4.30ರ ಮಹಾಪೂಜಾ ವಿಧಿ-ವಿಧಾನಗಳ ಬಳಿಕ ಪಿ.ವಿ.ಎಸ್ ಇಸ್ಕಾನ್ ಮಂದಿರದಿಂದ ಆರಂಭಗೊಳ್ಳುವುದು. ಶ್ರೀ ಕೃಷ್ಣ ಬಲರಾಮರ ವಿಗ್ರಹ, ಮೂರ್ತಿಗಳನ್ನು ಹೊತ್ತ ವೈವಿಧ್ಯಮಯ ಪುಷ್ಪಗಳಿಂದ ಅಲಂಕೃತಗೊಂಡ ದೀಪಗಳಿಂದ ಶೃಂಗಾರ ರಥೋತ್ಸವದ ಮೆರವಣಿಗೆ ಹೊರಡಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ ಕೊಡಿಯಾಲ್ ಬೈಲ್ ಮಂಗಳೂರು ಶಾಖೆಯ ಆಶ್ರಯದಲ್ಲಿ ೨೦ನೇ ವಾರ್ಷಿಕ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರಾ ಉತ್ಸವ ಫೆ.10ರಂದು ನಗರದ ಪಿ.ವಿ.ಎಸ್. ಮಂದಿರದಲ್ಲಿ ಸಂಜೆ ೪.೩೦ ರಿಂದ ನಡೆಯಲಿದೆ ಎಂದು ಇಸ್ಕಾನ್ ಅಧ್ಯಕ್ಷ ಗುಣಕರ ರಾಮದಾಸ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಉತ್ಸವ ಶ್ರೀ ಕೃಷ್ಣ ಬಲರಾಮ ಸಹೋದರರು ದ್ವಾಪರಯುಗದಲ್ಲಿ ವೃಂದಾವನದ ಮಥುರಾ ನಗರದಲ್ಲಿ ರಥದಲ್ಲಿ ಆಸೀನರಾಗಿ ತಮ್ಮೂರಿನ ಸರ್ವ ಭಕ್ತಾಭಿಮಾನಿಗಳಿಗೆ ದರ್ಶನ ನೀಡಿದ ಸನ್ನಿವೇಶವನ್ನು ಪುನರ್ ರಚಿಸಲಾಗುವುದು. ಶ್ರೀ ಕೃಷ್ಣ ಭಗವನಂತನನ್ನು ನಮ್ಮ ಹೃದಯದೆಡೆಗೆ ಎಳೆಯುವ ಶೃಂಗಾರಪೂರ್ಣ ಅಲಂಕಾರದ ರಥಯಾತ್ರೆ ನಡೆಯಲಿದೆ ಎಂದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್, ಮಂಗಳೂರು ನಗರಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ, ಎ.ಕೆ. ಬನ್ಸಲ್ ಸಂಸ್ಥೆ ನಿರ್ದೇಶಕ ಅಭಿನವ್‌ ಬನ್ಸಲ್‌ ಅತಿಥಿಗಳಾಗಿ ಪಾಲ್ಗೊಳಲಿರುವರು ಎಂದರು.

ಈ ರಥಯಾತ್ರೆಯ ಮೆರವಣಿಗೆಯ ಚಾಲನೆ ಸಂಜೆ 4.30ರ ಮಹಾಪೂಜಾ ವಿಧಿ-ವಿಧಾನಗಳ ಬಳಿಕ ಪಿ.ವಿ.ಎಸ್ ಇಸ್ಕಾನ್ ಮಂದಿರದಿಂದ ಆರಂಭಗೊಳ್ಳುವುದು. ಶ್ರೀ ಕೃಷ್ಣ ಬಲರಾಮರ ವಿಗ್ರಹ, ಮೂರ್ತಿಗಳನ್ನು ಹೊತ್ತ ವೈವಿಧ್ಯಮಯ ಪುಷ್ಪಗಳಿಂದ ಅಲಂಕೃತಗೊಂಡ ದೀಪಗಳಿಂದ ಶೃಂಗಾರ ರಥೋತ್ಸವದ ಮೆರವಣಿಗೆ ಹೊರಡಲಿದೆ. ಪಿವಿಎಸ್ ಮಂದಿರದಿಂದ, ಶಾರದ ವಿದ್ಯಾಲಯ ರಸ್ತೆ, ಟಿ.ವಿ. ರಮಣ ಪೈ ಸಭಾಂಗಣ ವೃತ್ತ, ಮಹಾಮಯಿ ದೇವಸ್ಥಾನ ರಸ್ತೆ, ವೆಂಕಟರಮಣ ದೇವಸ್ಥಾನ ವೃತ್ತ ರಥಬೀದಿ, ಬಿ.ಇ.ಎಂ. ಶಾಲೆ ರಸ್ತೆ,ಕುದ್ರೋಳಿ ದೇವಸ್ಥಾನ ರಸ್ತೆ, ಮಣ್ಣಗುಡ್ಡ ರಸ್ತೆ, ಬಲ್ಲಾಳ್ ಭಾಗ್ ರಸ್ತೆ, ಮಹಾತ್ಮ ಗಾಂಧಿ ರಸ್ತೆ ಮೂಲಕ ಇಸ್ಕಾನ್ ಪಿ.ವಿ.ಎಸ್ ರಸ್ತೆಯ ಮೂಲಕ ರಾತ್ರಿ 7.೩೦ಕ್ಕೆ ಇಸ್ಕಾನ್ ಮಂದಿರದಲ್ಲಿ ಸಮಾಪನಗೊಳ್ಳಲಿರುವುದು. ನಂತರ ವೈಭವಯುತ ಸಂಕೀರ್ತನೆ, ಮಹಾಮಂಗಳ ಆರತಿಯೊಂದಿಗೆ ರಥಯಾತ್ರೋತ್ಸವ ಸಮಾಪ್ತಿಗೊಳ್ಳುವುದು. ಭೋಜನ, ನೈವೇದ್ಯ ಪ್ರಸಾದದ ವಿತರಣೆ ನಡೆಯಲಿದೆ. ಮೆರವಣೆಗೆಯುದ್ದಕ್ಕೂ ‘ಹರೇಕೃಷ್ಣ ಹರೇರಾಮ’ ಹರಿನಾಮ ಜಪ, ಭಜನೆ ಮತ್ತು ಸಂಕೀರ್ತನೆಯು ವಿವಿಧ ಸಾಂಸ್ಕೃತಿಕ ಸಂಗೀತ, ವಾದ್ಯಗಳ ಮೇಳದಿಂದ ಶೋಭಿಸಲ್ಪಡಲಿದೆ. ಭಕ್ತಾಭಿಮಾನಿಗಳು ಉತ್ಸವದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ರಥವನ್ನು ಎಳೆಯುವುದರೊಂದಿಗೆ, ಭಜನೆ-ಕೀರ್ತನೆಗಳೊಂದಿಗೆ, ನೃತ್ಯದೊಂದಿಗೆ, ರಥ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಎಂದರು.ಭಕ್ತಾದಿಗಳು ಫಲ-ಪುಷ್ಪ ಮಂಗಳಾರತಿಯನ್ನು ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ರಥಯಾತ್ರೆ ಸಾಗುವ ರಸ್ತೆಯಲ್ಲಿ ತಮ್ಮ ಗೃಹ, ಮಾರಾಟ ಮಳಿಗೆಗಳ ಮುಂಭಾಗದ ಹಾದಿಯನ್ನು ಸ್ವಚ್ಛಗೊಳಿಸಿ, ವರ್ಣಮಯ ರಂಗೋಲಿಯನ್ನು ರಚಿಸಲು ಸಂಸ್ಥೆ ಅವಕಾಶ ಒದಗಿಸಿದೆ. ಈ ರಥೋತ್ಸವದಲ್ಲಿ ಕರ್ನಾಟಕ ರಾಜ್ಯದಿಂದ ನೂರಾರು ಭಕ್ತಾಧಿಗಳು, ಅನುಯಾಯಿಗಳು ಸಕ್ರಿಯರಾಗಿ ಭಾಗವಹಿಸಲಿದ್ದಾರೆ ಎಂದರು.

ರಥೋತ್ಸವ ವೇಳೆ 5 ಸಾವಿರ ಮಂದಿಗೆ ಉಚಿತ ಪ್ರಸಾದ ಹಂಚಲಾಗುವುದು. ರಥೋತ್ಸವ ಬಳಿಕ ಪಿವಿಎಸ್‌ ಕಲಾಕುಂಜದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ರಾಜ್ಯದಿಂದ ನೂರಾರು ಭಕ್ತಾದಿಗಳು, ಅನುಯಾಯಿಗಳು ಸಕ್ರಿಯರಾಗಿ ಭಾಗವಹಿಸಲಿದ್ದಾರೆ ಎಂದರು.ಈ ಸಂದರ್ಭ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಜತೆ ಕಾರ್ಯದರ್ಶಿ ರಾಧ ವಲ್ಲಭದಾಸ, ಜತೆ ಕಾರ್ಯದರ್ಶಿ ಸುಂದರ ಗೌರ ದಾಸ, ಮಾಧ್ಯಮ ಸಲಹೆಗಾರ ಎಂ.ವಿ. ಮಲ್ಯ ಇದ್ದರು.