ಇಸ್ರೇಲ್‌ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸುವ ಮೂಲಕ ಇಸ್ರೇಲ್‌- ಮಂಗಳೂರಿನ ಬಾಂಧವ್ಯ ಆರಂಭಗೊಂಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಇಸ್ರೇಲ್‌ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸುವ ಮೂಲಕ ಇಸ್ರೇಲ್‌- ಮಂಗಳೂರಿನ ಬಾಂಧವ್ಯ ಆರಂಭಗೊಂಡಿದೆ. ಇದು ಭವಿಷ್ಯದಲ್ಲಿ ವ್ಯಾಪಾರ, ತಂತ್ರಜ್ಞಾನ ಮತ್ತು ಉದ್ಯಮ ಸಹಕಾರದ ದಿಕ್ಕಿನಲ್ಲಿ ವಿಸ್ತಾರಗೊಳ್ಳುವ ನಿರೀಕ್ಷೆಯಿದೆ.

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಮುಂದಾಳತ್ವದಲ್ಲಿ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಕೆಸಿಸಿಐ) ಆಶ್ರಯದಲ್ಲಿ ಇಸ್ರೇಲ್‌ನ ಬೆಂಗಳೂರು (ದಕ್ಷಿಣ ಭಾರತ ವ್ಯಾಪ್ತಿ) ಕಾನ್ಸುಲ್ ಜನರಲ್ ಓರ್ಲಿ ವೈಟ್ಸ್‌ಮನ್ ಅವರೊಂದಿಗೆ ಮಂಗಳೂರಿನ ಉದ್ಯಮಪತಿಗಳ ಮಹತ್ವದ ಸಂವಾದ ಗುರುವಾರ ನಡೆಯಿತು.ಮಂಗಳೂರು- ಇಸ್ರೇಲ್‌ ಪಾಲುದಾರಿಕೆಯ ಮೊದಲ ಹಂತವಾಗಿ ಇಸ್ರೇಲ್ ಸರ್ಕಾರವು ದ.ಕ. ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಡಿಜಿಟಲ್ ಬೋರ್ಡ್‌ಗಳನ್ನು ಕೊಡುಗೆಯಾಗಿ ನೀಡಿದೆ. ಇದು ಪ್ರಥಮ ಹೆಜ್ಜೆ. ಮುಂದಿನ ದಿನಗಳಲ್ಲಿ ಈ ಪಾಲುದಾರಿಕೆಯು ವ್ಯಾಪಾರ, ತಂತ್ರಜ್ಞಾನ ಮತ್ತು ಉದ್ಯಮ ಸಹಕಾರ ಕ್ಷೇತ್ರದಲ್ಲೂ ಮುಂದುವರಿಯಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ತಿಳಿಸಿದರು.ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಾಸಿರ್ ಮಾತನಾಡಿ, ಮಂಗಳೂರು- ಇಸ್ರೇಲ್ ನಡುವಿನ ಈ ಸಂಬಂಧ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಸಂವಾದದಲ್ಲಿ ಎರಡು ದೇಶಗಳ ನಡುವಿನ ವ್ಯಾಪಾರ ಮತ್ತು ತಂತ್ರಜ್ಞಾನ ಸಹಕಾರದ ಕುರಿತು ಆಳವಾದ ಚರ್ಚೆ ನಡೆಯಿತು. ಇಸ್ರೇಲ್ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಹೆಸರಾಗಿದ್ದು, ಭಾರತವು ದೊಡ್ಡ ಮಾರುಕಟ್ಟೆ ಹೊಂದಿರುವ ದೇಶವಾಗಿರುವುದರಿಂದ, ಇಸ್ರೇಲ್‌ನ ತಂತ್ರಜ್ಞಾನಗಳನ್ನು ಭಾರತದಲ್ಲಿ ಸ್ಕೆಲ್‌ಅಪ್ ಮಾಡುವ ಅಪಾರ ಅವಕಾಶಗಳಿವೆ ಎಂದು ಸಭೆಯಲ್ಲಿ ವಿವರಿಸಲಾಯಿತು. ಭಾರತದಲ್ಲಿ ಇಸ್ರೇಲ್‌ನ ತಂತ್ರಜ್ಞಾನಗಳನ್ನು ವಾಣಿಜ್ಯೀಕರಣ ಮಾಡಿ ದೊಡ್ಡ ಮಟ್ಟದಲ್ಲಿ ಉಪಯೋಗಿಸುವ ಅವಕಾಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂವಾದದಲ್ಲಿ ಎಂಆರ್‌ಪಿಎಲ್‌, ಕ್ಯಾಂಪ್ಕೊ, ಮತ್ಸ್ಯೋದ್ಯಮ, ಆಹಾರ ಸಂಸ್ಕರಣೆ, ಮಸಾಲೆ ಉದ್ಯಮ, ಐಸ್ ಕ್ರೀಮ್ ಉತ್ಪಾದನೆ, ವಿಮಾನ ನಿಲ್ದಾಣ ಪ್ರಾಧಿಕಾರ, ನಿಟ್ಟೆ ಮತ್ತು ಮಾಹೆ ವಿಶ್ವವಿದ್ಯಾಲಯಗಳು, ನವಮಂಗಳೂರು ಬಂದರು ಸೇರಿದಂತೆ ಸುಮಾರು 30- 40 ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಉದ್ಯಮ ವಲಯದ ಪ್ರತಿನಿಧಿಗಳಿಂದ ಅವರ ಸಮಸ್ಯೆಗಳು ಮತ್ತು ನಿರೀಕ್ಷೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಅದನ್ನು ಇಸ್ರೇಲ್ ಕಾನ್ಸುಲೇಟ್‌ಗೆ ಒಪ್ಪಿಸುವ ನಿರ್ಧಾರ ಕೈಗೊಳ್ಳಲಾಗಿದೆ.