ಮಂಗಳೂರು: ಜಗದ್ಗುರು ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ‘ಮಂಗಳೋತ್ಸವ’ ಕಾರ್ಯಕ್ರಮ ಕಾಶೀಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜ.11ರಂದು ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.

ಮಂಗಳೂರು: ಜಗದ್ಗುರು ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ‘ಮಂಗಳೋತ್ಸವ’ ಕಾರ್ಯಕ್ರಮ ಕಾಶೀಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜ.11ರಂದು ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.

ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಸಿಎ ಜಗನ್ನಾಥ ಕಾಮತ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಜ. 11 ರಂದು ಜನ್ಮಶತಾಬ್ದಿಯ ಮಂಗಳೋತ್ಸವ ನಡೆಯಲಿದ್ದು, ಸಂಜೆ 3.30ಕ್ಕೆ ಶ್ರೀ ಕಾಶೀಮಠ ಸಂಸ್ಥಾನದ ಕೊಂಚಾಡಿಯ ಶಾಖಾಮಠದಿಂದ ಭಜನಾ ಸಂಕೀರ್ತನಾ ವ್ಯಾಸಧ್ವಜ ಮತ್ತು ಸ್ವಾಮೀಜಿಯವರ ಪಾದುಕಾ ದಿಗ್ವಿಜಯ ಪಾದಯಾತ್ರೆ ಆರಂಭವಾಗಲಿದೆ. ಕೊಂಚಾಡಿಯಿಂದ ಮೇರಿಹಿಲ್‌, ಯೆಯ್ಯಾಡಿ, ಕೆಪಿಟಿ, ಬಿಜೈ, ಕೆಎಸ್‌ಆರ್‌ಟಿಸಿ, ಲಾಲ್‌ಭಾಗ್‌, ಎಂ.ಜಿ.ರಸ್ತೆ, ಪಿ.ವಿ.ಎಸ್‌ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಮೂಲಕ ಕೆನರಾ ಹೈಸ್ಕೂಲ್‌ನಲ್ಲಿ ಸೇರಲಿದೆ. ಅಲ್ಲಿ 10 ಸಾವಿರ ಮಂದಿಗೆ ಫಲಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ದಾರಿಯುದ್ದಕ್ಕೂಯೆಯ್ಯಾಡಿ, ಬಿಜೈ, ಲಾಲ್‌ ಭಾಗ್‌ನ ನಿರ್ದಿಷ್ಟ ಜಾಗಗಳಲ್ಲಿ ಪಾನೀಯದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ಪಾದಯಾತ್ರೆಯಲ್ಲಿ ವಿವಿಧ ಊರ ಭಜನಾ ಮಂಡಳಿಗಳು ದೇವರ, ಸ್ವಾಮೀಜಿಯವರ ಭಜನೆಯನ್ನು ಹಾಡುತ್ತಾ, ಪಾದಯಾತ್ರೆಯಲ್ಲಿ ಸಾಗಲಿವೆ. ಚೆಂಡೆ, ಬ್ಯಾಂಡ್‌ ಸೆಟ್‌, ದೇವರ, ಮಹಾಪುರುಷರ ವೇಷಭೂಷಣಗಳನ್ನು ಧರಿಸಿದ ಮಕ್ಕಳ ಟ್ಯಾಬ್ಲೋಗಳು, ವೇದಘೋಷ, ವಾದ್ಯಗಳೊಂದಿಗೆ ಸ್ವಾಮೀಜಿಯವರ ಭಾವಚಿತ್ರ ಇರುವ ಟ್ಯಾಬ್ಲೊ, ಸ್ವಾಮೀಜಿಯವರ ಪಾದುಕೆ ಇರುವ ಟ್ಯಾಬ್ಲೊ ಸಹಿತ ವಿವಿಧ ಕಲಾಪ್ರಕಾರಗಳು ಪಾದಯಾತ್ರೆಯ ಶೋಭೆಯನ್ನು ಹೆಚ್ಚಿಸಲಿವೆ. ಕೆನರಾ ಹೈಸ್ಕೂಲ್‌ನಲ್ಲಿ ಭಕ್ತರು ಆಹಾರ ಸೇವಿಸಿದ ಬಳಿಕ ಪಾದಯಾತ್ರೆ ಡೊಂಗರಕೇರಿ, ನ್ಯೂಚಿತ್ರಾ, ಶ್ರೀನಿವಾಸ ಥಿಯೇಟರ್‌, ಸ್ವದೇಶಿ ಸ್ಟೋರ್‌ ತಲುಪಲಿದೆ. ಈ ಸಂದರ್ಭ ಪಾದಯಾತ್ರೆಯಲ್ಲಿ ಕಾಶೀಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ಇರಲಿದೆ. ಸ್ವದೇಶಿ ಸ್ಟೋರ್‌ ಬಳಿಯಿಂದ ಸ್ವರ್ಣ ಲಾಲಕಿಯಲ್ಲಿ ದೇವರೊಂದಿಗೆ ಪಾದಯಾತ್ರೆ ಶ್ರೀ ವೆಂಕಟರಮಣ ದೇವಸ್ಥಾನ ತಲುಪಲಿದೆ. ಅಲ್ಲಿ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.ಶಾಸಕ ವೇದವ್ಯಾಸ ಕಾಮತ್‌, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಪ್ರಮುಖರಾದ ಕೋಟೇಶ್ವರ ದಿನೇಶ್‌ ಕಾಮತ್‌, ವಾಸುದೇವ್‌ ಕಾಮತ್‌, ರಘುವೀರ್‌ ಭಂಡಾರಕಾರ್‌, ಟಿ. ಗಣಪತಿ ಪೈ, ಪ್ರಶಾಂತ್‌ ಪೈ ಇದ್ದರು.

ಪಾರ್ಕಿಂಗ್‌ ವ್ಯವಸ್ಥೆ

ಕೊಂಚಾಡಿಯಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ವಾಹನಗಳನ್ನು (ಬಸ್ಸು, ಕಾರು, ಜೀಪು, ವ್ಯಾನ್‌, ದ್ವಿಚಕ್ರವಾಹನ) ಕೊಂಚಾಡಿ ಕಾಶೀಮಠದ ಬಳಿಯಿರುವ ಕೆನರಾ ವಿಕಾಸ್‌ ಕಾಲೇಜಿನ ಮೈದಾನದಲ್ಲಿ ಪಾರ್ಕಿಂಗ್‌ ಮಾಡಬೇಕು. ಕೊಂಚಾಡಿ ಕಾಶೀಮಠದ ಬಳಿ ಜನರನ್ನು ಇಳಿಸಿ, ಹಂಪನಕಟ್ಟೆಯ ಬಳಿಯಿಂದ ಮೂಲ್ಕಿ ಸುಂದರರಾಮ್‌ ಶೆಟ್ಟಿರಸ್ತೆಯ ಮೂಲಕ ಅಲೋಶಿಯಸ್‌ ಕಾಲೇಜಿನ ಗೇಟ್‌ ನಂಬರ್‌ 1 ಒಳಗೆ ಹಾಗೂ ಗೇಟ್‌ ಸಿ ಒಳಗೆ ಪಾರ್ಕ್ ಮಾಡಬಹುದು. ಕಾರುಗಳನ್ನು ಕೊಡಿಯಾಲ್‌ಬೈಲ್‌ ಎಸ್‌ಸಿಡಿಸಿಸಿ ಬ್ಯಾಂಕಿನ ಪಕ್ಕದಲ್ಲಿರುವ ಅಲೋಶಿಯಸ್‌ ಕಾಲೇಜಿನ ಗೇಟ್‌ ಮೂಲಕ ಹೋಗಿ ಲೊಯಲಾ ಸಭಾಂಗಣದ ಮೈದಾನದಲ್ಲಿ ಪಾರ್ಕಿಂಗ್‌ ಮಾಡಬಹುದು. ಬೆಸೆಂಟ್‌ ಕಾಲೇಜಿನಲ್ಲಿಯೂ ಬಸ್‌, ಕಾರುಗಳನ್ನು ಪಾರ್ಕಿಂಗ್‌ ಮಾಡಬಹುದು. ಕೆನರಾ ವಿಕಾಸ್‌ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್‌ ಮಾಡಿದ ವಾಹನಗಳನ್ನು ರಾತ್ರಿ 10 ಗಂಟೆಯ ಬಳಿಕ ಸಿಟಿಪಾಯಿಂಟ್‌, ಪಾಸ್‌ಪೋರ್ಟ್‌ ಆಫೀಸಿನ ಬಳಿ ತಂದು ನಿಲ್ಲಿಸಬೇಕು. ಅಲೋಶಿಯಸ್‌, ಬೆಸೆಂಟ್‌ನಲ್ಲಿ ಪಾರ್ಕಿಂಗ್‌ ಮಾಡಿದ ವಾಹನಗಳು ಅಲ್ಲಿಯೇ ಇದ್ದು ಭಕ್ತಾದಿಗಳು ಅಲ್ಲಿಗೆ ತೆರಳಿ ತಾವು ಆಗಮಿಸಿದ ವಾಹನಗಳ ಮೂಲಕ ತೆರಳಬೇಕು.ರಾತ್ರಿ ಭೋಜನ ಪ್ರಸಾದದ ವ್ಯವಸ್ಥೆ: ಊರ, ಪರವೂರ ಭಕ್ತರಿಗೆ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ರಾತ್ರಿ 8.30ರ ಬಳಿಕ ಮಹಾಮಾಯಾ ದೇವಸ್ಥಾನದ ಬಳಿ, ಉಮಾಮಹೇಶ್ವರ ದೇವಸ್ಥಾನದ ಬಳಿ, ಭವಂತಿ ಸ್ಟ್ರೀಟ್‌ನಲ್ಲಿರುವ ಹಿಂದಿನ ನ್ಯೂ ಮಂಗಳೂರು ಹೆಲ್ತ್‌ ಕೇರ್‌ ಸೆಂಟರ್‌ ಜಾಗಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಮಂಗಳೋತ್ಸವ ಸಭಾ ಕಾರ್ಯಕ್ರಮ

ಜ. 11 ರಂದು ರಾತ್ರಿ 8.30ರಿಂದ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳೋತ್ಸವದ ಸಭಾ ಕಾರ್ಯಕ್ರಮದಲ್ಲಿ ಕಾಶೀಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆರ್ಶೀವಚನ ನೀಡಲಿದ್ದಾರೆ. ಈ ಸಂದರ್ಭ ಸಾಧಕರಿಗೆ ಸನ್ಮಾನ ನಡೆಯಲಿದೆ.

ಶ್ರೀಮತ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸ್ವರ್ಣ ಪಾದುಕೆಯ ದಿಗ್ವಿಜಯ ಯಾತ್ರೆ ಹಿಮಾಲಯದ ತಪ್ಪಲಲ್ಲಿರುವ ಬದ್ರಿಯಿಂದ 2024ರ ಜುಲೈನಲ್ಲಿ ಆರಂಭಿಸಿ ದಕ್ಷಿಣದಲ್ಲಿ ರಾಮೇಶ್ವರ, ತಿರುವನಂತಪುರದ ತನಕ ನಡೆದಿದೆ. ದೇಶದ ಉದ್ದಗಲಕ್ಕೂ ಇರುವ ಸಮಾಜ ಬಾಂಧವರ ಅಪೇಕ್ಷೆಯಂತೆ ಮನೆ, ಮಠ, ಮಂದಿರ, ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ಪಾದುಕಾ ದಿಗ್ವಿಜಯ ರಥಯಾತ್ರೆ ಮಂಗಳೂರನ್ನು ತಲುಪಿದೆ. ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮಶತಮಾನೋತ್ಸವ ಮಂಗಳೋತ್ಸವ, ಪಾದುಕಾ ದಿಗ್ವಿಜಯ ರಥಯಾತ್ರೆಯನ್ನು ಭಕ್ತರು ಯಶಸ್ವಿಗೊಳಿಸಬೇಕು.- ವೇದವ್ಯಾಸ ಕಾಮತ್‌, ಶಾಸಕರು