ಮಂಗಳೂರು: ಸುಳ್ಳು ಸುದ್ದಿಗಳನ್ನು ಹರಡಿಸುವ ಮನೋಭಾವ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು, ಇದು ಜನರ ನಡುವೆ ಅಪನಂಬಿಕೆಗೆ ಕಾರಣವಾಗುತ್ತಿದೆ. ಇದೇ ಮುಂದೆ ಜನಾಂಗೀಯ ಘರ್ಷಣೆಗೆ ಕಾರಣವಾಗಬಹುದು. ನಮ್ಮ ದೇಶಕ್ಕೆ ಅಂತಹ ಪರಿಸ್ಥಿತಿ ಬರಬಾರದು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.ನಗರದ ಸಹೋದಯ ಸಭಾಂಗಣದಲ್ಲಿ ಭಾನುವಾರ, ಲೇಖಕ, ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ. ಹೆಗಡೆ ಅವರ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಪುಸ್ತಕ ಬಿಡುಗಡೆ ಮತ್ತು ‘ಗಾಂಧಿ ಮನೆಯ ಅವಲಕ್ಕಿ ಸರ’ ಕಾದಂಬರಿ ಪರಿಚಯ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸುಳ್ಳು ಸುದ್ದಿ ಹರಡಿಸುವುದು ಅಪಾಯಕಾರಿ. ಅಂಥವರು ದೇಶದ್ರೋಹಿಗಳು. ಇದರಿಂದ ಜನಾಂಗೀಯ ಘರ್ಷಣೆ ಉಂಟಾದರೆ ಯಾವ ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸುಳ್ಳು ಸುದ್ದಿ, ಅಪಪ್ರಚಾರಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಸ್ವಸ್ಥ ಸಮಾಜ ಮಾಡಬೇಕು ಎಂದು ರಮಾನಾಥ ರೈ ಕರೆ ನೀಡಿದರು.ದೇಶದಲ್ಲೀಗ 100- 110 ಕೋಟಿಯಷ್ಟು ಹಿಂದೂಗಳ ಜನಸಂಖ್ಯೆ ಇದ್ದರೆ ಉಳಿದೆಲ್ಲ ಧರ್ಮಗಳ ಜನಸಂಖ್ಯೆ ಇರುವುದು ಕೇವಲ 30 ಕೋಟಿ ಆಸುಪಾಸು. ಆದರೆ ಕೆಲವರು ಸುಳ್ಳು ಲೆಕ್ಕಾಚಾರಗಳನ್ನು ಮುಂದಿಡುತ್ತಾ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ ಎನ್ನುತ್ತಾರೆ. ಇಂಥ ಪರಾಕಾಷ್ಠೆಯ ಭಾವನೆಗಳು, ಸುಳ್ಳುಗಳಿಗೆ ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಎಂಬ ಪುಸ್ತಕ ಕಡಿವಾಣ ಹಾಕಲಿದೆ ಎಂದು ಹೇಳಿದರು.10 ಮಕ್ಕಳ ಹುಟ್ಟಿಸಿದರೆ ಉದ್ಯೋಗ ಎಲ್ಲಿ?:

ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಕೆಲವರು ಹತ್ತು ಮಕ್ಕಳನ್ನು ಹುಟ್ಟಿಸಿ ಎಂದು ಕರೆ ನೀಡುತ್ತಾರೆ. ಆದರೆ ಇರುವ ಮಕ್ಕಳಿಗೆ ಸರ್ಕಾರ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ? ಉದ್ಯೋಗ ನೀಡಲು ಸಾಧ್ಯವಾಗದೆ ಇರುವ ಪರಿಸ್ಥಿತಿಯಲ್ಲಿ ಜನಸಂಖ್ಯೆ ಹೆಚ್ಚಾದರೆ ಇನ್ನೆಂಥ ಪರಿಸ್ಥಿತಿ ಉದ್ಭವಿಸೀತು ಎಂದು ಪ್ರಶ್ನಿಸಿದರು.

ಭಾರತದಲ್ಲಿ ಮೊಘಲರ ಕಾಲದಿಂದ ಮುಸ್ಲಿಮರ ಜನಸಂಖ್ಯೆ ಎಷ್ಟು ಏರಿಕೆಯಾಗಿದೆ ಎನ್ನುವ ಎಲ್ಲ ವಿವರಗಳು ಈ ಪುಸ್ತಕದಲ್ಲಿದೆ. ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ ವರ್ತಮಾನವನ್ನೂ, ಭವಿಷ್ಯವನ್ನೂ ಕಟ್ಟಲಾಗದು. ಈ ನಿಟ್ಟಿನಲ್ಲಿ ಜನರ ಚಿಂತನೆ ಬದಲಾವಣೆ ಆಗಬೇಕಾಗಿದೆ. ಬದಲಾವಣೆ ನಮ್ಮಿಂದಲೇ ಶುರುವಾಗಲಿ ಎಂದರು.


ಸುಳ್ಳುಗಳ ವಿರುದ್ಧ ಬರೆಯೋಣ:

ಕೃತಿಕಾರ ಎಂ.ಜಿ. ಹೆಗಡೆ ಮಾತನಾಡಿ, ಭಾರತದ ಜನಗಣತಿ ಪ್ರಕಾರ ಮುಸ್ಲಿಮರ ಜನಸಂಖ್ಯೆ ಇರೋದು 25 ಕೋಟಿ. ಮುಂದಿನ 25 ವರ್ಷಗಳಲ್ಲಿ ಭಾರತ ಮುಸ್ಲಿಂ ರಾಷ್ಟ್ರ ಆಗಲಿದೆ ಎಂದು ಕೆಲವರು ಹೇಳುತ್ತಾರೆ. ಅದು ಸಾಧ್ಯವಾಗಬೇಕಾದರೆ ಮುಸ್ಲಿಮರ ಜನಸಂಖ್ಯೆ 125 ಕೋಟಿ ಆಗಬೇಕು. ನೂರಾರು ವರ್ಷಗಳಲ್ಲೇ ಇದು ಸಾಧ್ಯವಾಗಿಲ್ಲ, ಕೇವಲ 25 ವರ್ಷಗಳಲ್ಲಿ ಸಾಧ್ಯವಾ? ಈ ರೀತಿಯ ಸುಳ್ಳು ನರೇಟಿವ್‌ಗಳನ್ನು ಸೃಷ್ಟಿಸುವ ಮೂಲಕ ಧರ್ಮಗಳ ನಡುವೆ ದ್ವೇಷ, ಸಂಶಯ ಹುಟ್ಟು ಹಾಕುತ್ತಿದ್ದಾರೆ. ಇದನ್ನು ನಿಲ್ಲಿಸಬೇಕಾದರೆ ನಾವೆಲ್ಲರೂ ಮಾತನಾಡಬೇಕು, ಬರೆಯಬೇಕು. ಇದು ಚಳವಳಿಯ ರೂಪದಲ್ಲಿ ಮುಂದುವರಿಯಬೇಕು ಎಂದು ಆಶಿಸಿದರು.

ಪತ್ರಕರ್ತ, ಚಿಂತಕ ಎ.ಕೆ. ಕುಕ್ಕಿಲ ಅವರು ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಕೃತಿಯ ಕುರಿತು ಹಾಗೂ ಕಾದಂಬರಿಕಾರ ಪ್ರಭಾಕರ ನೀರುಮಾರ್ಗ ಅವರು ‘ಗಾಂಧಿ ಮನೆಯ ಅವಲಕ್ಕಿ ಸರ’ ಕಾದಂಬರಿಯ ಕುರಿತು ಮಾತನಾಡಿದರು.