ಮಂಗ್ಳೂರು ಪಾಲಿಕೆಯ ಚುನಾಯಿತ ಆಡಳಿತ ಅವಧಿ ಫೆ.27ಕ್ಕೆ ಮುಗಿದರೂ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ನಿರಾಸಕ್ತಿ!

| Published : Mar 12 2025, 12:49 AM IST

ಮಂಗ್ಳೂರು ಪಾಲಿಕೆಯ ಚುನಾಯಿತ ಆಡಳಿತ ಅವಧಿ ಫೆ.27ಕ್ಕೆ ಮುಗಿದರೂ ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರ ನಿರಾಸಕ್ತಿ!
Share this Article
  • FB
  • TW
  • Linkdin
  • Email

ಸಾರಾಂಶ

ಫೆಬ್ರವರಿ ಅಂತ್ಯಕ್ಕೆ ಮಂಗಳೂರು ಮಹಾನಗರ ಪಾಲಿಕೆ ಚುನಾಯಿತ ಆಡಳಿತದ ಅವಧಿ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲೇ ಪಾಲಿಕೆ ಆಯುಕ್ತರು ಆಡಳಿತಾಧಿಕಾರಿ ನೇಮಕ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಈಗ ಚುನಾಯಿತ ಆಡಳಿತದ ಅವಧಿ ಮುಕ್ತಾಯಗೊಂಡು ದಿನಗಳೇ ಕಳೆದರೂ ಕ್ರಮ ಕೈಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತದ ಅವಧಿ ಫೆ.27ಕ್ಕೆ ಮುಕ್ತಾಯಗೊಂಡಿದ್ದು, 12 ದಿನ ಕಳೆದರೂ ಇನ್ನೂ ಆಡಳಿತಾಧಿಕಾರಿ ನೇಮಕ ನಡೆದಿಲ್ಲ.

ಫೆಬ್ರವರಿ ಅಂತ್ಯಕ್ಕೆ ಚುನಾಯಿತ ಆಡಳಿತದ ಅವಧಿ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲೇ ಪಾಲಿಕೆ ಆಯುಕ್ತರು ಆಡಳಿತಾಧಿಕಾರಿ ನೇಮಕ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು. ಈಗ ಚುನಾಯಿತ ಆಡಳಿತದ ಅವಧಿ ಮುಕ್ತಾಯಗೊಂಡು ದಿನಗಳೇ ಕಳೆದಿದೆ. ಆದರೂ ಆಡಳಿತಾಧಿಕಾರಿ ನೇಮಕದ ಬಗ್ಗೆ ಸರ್ಕಾರ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಮಹಾನಗರ ಪಾಲಿಕೆಗಳಿಗೆ ಈ ಹಿಂದೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನೇಮಕ ಮಾಡಲಾಗುತ್ತಿತ್ತು. ಕಳೆದ ಅವಧಿಯಿಂದ ಆಯಾ ವಿಭಾಗಗಳ ಆಯುಕ್ತರೇ ಆಡಳಿತಾಧಿಕಾರಿಗಳಾಗಿರುತ್ತಾರೆ. ಹಾಗಾಗಿ ಮಂಗಳೂರು ಪಾಲಿಕೆಗೆ ಮೈಸೂರು ವಿಭಾಗದ ಆಯುಕ್ತರು ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿದೆ.

ಆಡಳಿತಾಧಿಕಾರವೋ\ ಚುನಾವಣೆಯೋ?:

ಚುನಾಯಿತ ಅವಧಿ ಮುಕ್ತಾಯಗೊಂಡ ಮಂಗಳೂರು ಪಾಲಿಕೆಗೆ ಆಡಳಿತಾಧಿಕಾರಿ ನೇಮಕವೋ ಅಥವಾ ಶೀಘ್ರವೇ ಚುನಾವಣೆಯೇ ಎಂಬ ಗೊಂದಲ ಏರ್ಪಟ್ಟಿದೆ.

ಇದುವರೆಗೂ ಆಡಳಿತಾಧಿಕಾರಿ ನೇಮಕಗೊಳಿಸದ ಕಾರಣ ಸರ್ಕಾರ ಬಾಕಿ ಇರುವ ಪಾಲಿಕೆ ಜೊತೆಗೆ ಮಂಗಳೂರು ಪಾಲಿಕೆಗೂ ಚುನಾವಣೆ ನಡೆಸುತ್ತದೆಯೇ ಎಂಬ ಅನುಮಾನವೂ ರಾಜಕೀಯ ಪಕ್ಷಗಳಿಗೆ ಕಾಡತೊಡಗಿದೆ. ಈ ಕುರಿತಂತೆ ಸರ್ಕಾರ ಯಾವುದೇ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ.

ಆಡಳಿತಾಧಿಕಾರಿ ನೇಮಕಗೊಳಿಸದಿದ್ದರೂ ಪಾಲಿಕೆಯಲ್ಲಿ ಕಡತಗಳ ವಿಲೇವಾರಿ, ಆಡಳಿತ ಎಂದಿನಂತೆ ನಡೆಯುತ್ತಿದೆ. 50 ಲಕ್ಷ ರು. ನಿಂದ 1 ಕೋಟಿ ರು. ವರೆಗಿನ ಕಾಮಗಾರಿಗಳಿಗೆ ವಿಭಾಗೀಯ ಆಯುಕ್ತರ ಅನುಮತಿ ಬೇಕು, ಇದನ್ನು ಹೊರತುಪಡಿಸಿದರೆ ಬೇರೆ ಎಲ್ಲ ಕಾಮಗಾರಿಗಳು, ಯೋಜನೆಗಳನ್ನು ಕಾರ್ಯಗತಗೊಳಿಸುವ ಅಧಿಕಾರ ಪಾಲಿಕೆ ಆಯುಕ್ತರಿಗೆ ಇದೆ. ಹಾಗಾಗಿ ಸದ್ಯದ ಮಟ್ಟಿಗೆ ಪಾಲಿಕೆ ಆಡಳಿತ ನಿರಾತಂಕವಾಗಿ ನಡೆಯುತ್ತಿರುವುದರಿಂದ ಸರ್ಕಾರ ತಕ್ಷಣವೇ ಆಡಳಿತಾಧಿಕಾರಿ ನೇಮಕಕ್ಕೆ ಮನಸ್ಸು ಮಾಡುತ್ತಿಲ್ಲ ಎಂದೇ ತರ್ಕಿಸಲಾಗುತ್ತಿದೆ.

ಚುನಾಯಿತ ಆಡಳಿತದ ಅವಧಿ ಮುಕ್ತಾಯಗೊಂಡ ಬಳಿಕ ಸಹಜವಾಗಿಯೇ ಆಡಳಿತಾಧಿಕಾರಿಗಳ ಆಡಳಿತ ಎಂಬುದು ಜನಜನಿತ. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡುವಲ್ಲಿ ವಿಳಂಬವಾದರೂ ಕಾರುಭಾರು ಪೂರ್ತಿ ಅಧಿಕಾರಿಗಳದ್ದೇ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಮಾಜಿ ಹಿರಿಯ ಸದಸ್ಯರು.