ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ‌ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರು ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಕೃಷ್ಣ ಪ್ರಕಾಶ್ ಉಳಿತ್ತಾಯ ಅವರ ಬಲಿಪ ಮಾರ್ಗ ಹಾಗೂ ಅಗರಿಮಾರ್ಗ ಕೃತಿಯು ಆಯ್ಕೆಯಾಗಿದೆ.

ಯಕ್ಷಮಂಗಳ ಪ್ರಶಸ್ತಿಯು 25,000 ರು. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10,000 ರು. ನಗದು,‌ ಪ್ರಶಸ್ತಿ, ಸ್ಮರಣಿಕೆಗಳನ್ನೊಳಗೊಂಡಿದೆ. ಜಾನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಅವರ ನೇತೃತ್ವದಲ್ಲಿ ಪ್ರೊ.ಪಾದೆಕಲ್ಲು ವಿಷ್ಣುಭಟ್, ಯಕ್ಷಗಾನ ಸಂಘಟಕ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೆಶಕರಾದ‌ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಈ ಹೆಸರನ್ನು ಸರ್ವಾನುಮತದಿಂದ ಶಿಫಾರಸ್ಸು ಮಾಡಲಾಯಿತು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ‌ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ ನಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ ಮತ್ತು ಕೃತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ವಿವಿ ಕುಲಸಚಿವರಾದ ಪ್ರೊ.ಗಣೇಶ್ ಸಂಜೀವ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೋಟಿ ರು. ಅನುದಾನ:

ಮಂಗಳೂರು‌ ವಿಶ್ವವಿದ್ಯಾಲಯದ ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಸಂಬಂಧಿ ಅಧ್ಯಯನ ಸಂಶೋಧನೆಯನ್ನು ವಿಸ್ತರಿಸುವ ಉದ್ದೇಶಕ್ಕಾಗಿ ಬೆಂಗಳೂರಿನ ಡಾ.ದಯಾನಂದ ಪೈಗಳು ಒಂದು ಕೋಟಿಯ ವಿಶೇಷ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್ ಧರ್ಮ ತಿಳಿಸಿದ್ದಾರೆ. ಯಕ್ಷಮಂಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಯಾನಂದ ಪೈಗಳು ಭಾಗವಹಿಸಲಿದ್ದು ಆ ದಿನ ಈ ಮೊತ್ತವನ್ನು ಹಸ್ತಾಂತರಿಸಲಿದ್ದಾರೆ. ವಿವಿಯ ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸಿದ ಪೈಗಳನ್ನು ಕುಲಪತಿಗಳು ಅಭಿನಂದಿಸಿದ್ದಾರೆ.