ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು: ತಾಲೂಕಿನ ಮಂಗಳೂರು ಗ್ರಾಮದ ಆರಾಧ್ಯ ದೈವ ಭಾವೈಕ್ಯತೆಯ ಪ್ರತೀಕವಾದ ಶ್ರೀ ಮಂಗಳೇಶ್ವರ ರಥೋತ್ಸವ ಫೆ. 26ರಂದು ವಿಜೃಂಭಣೆಯಿಂದ ಜರುಗಲಿದೆ.

ಫೆ. 26ರಂದು ಬೆಳಗ್ಗೆ ಮಂಗಳೇಶ್ವರನಿಗೆ ಅಭಿಷೇಕ, ಮಧ್ಯಾಹ್ನ ಗಣಾರಾಧನೆ, ಅನ್ನಸಂತರ್ಪಣೆ, ಸಂಜೆ ರಥೋತ್ಸವ ಜರುಗಲಿದೆ. ಜಾತ್ರೆಗೆ ನಾನಾ ಜಿಲ್ಲೆಯಿಂದ ಭಕ್ತರು ಆಗಮಿಸಲಿದ್ದಾರೆ. ಜಾತ್ರೆಯಲ್ಲಿ ಪಾಲ್ಗೊಂಡು ಮಂಗಳೇಶ್ವರನಿಗೆ ಪೂಜೆ ಸಲ್ಲಿಸಿದರೆ ಒಳಿತಾಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ರಥೋತ್ಸವದಲ್ಲಿ ನವದಂಪತಿ ಪಾಲ್ಗೊಂಡರೆ ಶುಭವಾಗಲಿದೆ ಅನ್ನುವ ಪ್ರತೀತಿಯೂ ಇದೆ.

ಐತಿಹ್ಯ: ಮೊದಲು ಅಂಬಳಿ- ಕಂಬಳಿ ಎಂಬ ಸಣ್ಣ ಹಳ್ಳಿಯಿಂದ ಕೂಡಿದ್ದ ಮಂಗಳೂರು 17ನೇ ಶತಮಾನದಲ್ಲಿ ಎರಡು ಹಳ್ಳಿಗಳಿಂದ ಸೇರಿ ದೊಡ್ಡ ಗ್ರಾಮವಾಯಿತು. ಮಂಗಳೇಶ್ವರ ದೇವಸ್ಥಾನದ ಜಾಗವು ಶತಮಾನದ ಹಿಂದೆ ದಟ್ಟ ಕಾನನದಿಂದ ಕೂಡಿತ್ತು. ದನ-ಕರುಗಳನ್ನು ಮೇಯಿಸಲು ಇಲ್ಲಿಗೆ ದನಗಾಹಿಗಳು ಬರುತ್ತಿದ್ದರು. ಒಂದು ದಿನ ಹುತ್ತದ ಪಕ್ಕದಲ್ಲಿ ಹಸು ಹುಲ್ಲು ಮೇಯುತ್ತಿದ್ದಾಗ ಹಸು ಹುತ್ತದ ಮೇಲೆ ತಾನೇ ಹಾಲನ್ನು ಸುರಿಸುತ್ತಿತ್ತು. ಇದನ್ನು ಕಂಡ ದನಗಾಹಿಗಳು ಬೆರಗಾದರು. ಆಗ ಊರಿಗೆಲ್ಲ ಸುದ್ದಿ ಹರಡಿದ್ದು, ಆ ಸ್ಥಳವು ಅಂದಿನಿಂದ ದೈವಿ ಸ್ವರೂಪ ಪಡೆಯಿತು. ಆ ಸಂದರ್ಭದಲ್ಲಿ ಹುತ್ತ ಅಗೆಯಲಾಗಿ ಅಲ್ಲಿದ್ದ ಮೂರ್ತಿ ಮಹಾಮಂಗಳೇಶ್ವರ, ಶಿವನೆಂದು ಕರೆಯಲಾಯಿತು. ಈಶ್ವರ ಮೂರ್ತಿ ಪೂಜಿಸುತ್ತಾ ಭಕ್ತರು ಧನ್ಯತೆ ಮೆರೆಯುತ್ತಿದ್ದಾರೆ ಎನ್ನುವುದು ಐತಿಹ್ಯ.

ಅಲ್ಲಿದ್ದ ಶಿವಲಿಂಗಕ್ಕೆ ಮೂರ್ತ ಸ್ವರೂಪವನ್ನು ಕಲ್ಯಾಣ ಚಾಲುಕ್ಯರ ಇಮ್ಮಡಿ ಪುಲಿಕೇಶಿಯ ಚಿಕ್ಕಪ್ಪ ಮಂಗಳೇಶ ನೀಡಿದ್ದನು. ಅಂದಿನಿಂದ ಮಂಗಳೇಶ್ವರ, ಮಂಗಳೂರು ಎಂಬ ಇತಿಹಾಸ ಮಾತುಗಳು ಸಹ ಇವೆ. ಪಠಾಣರ ಹಾವಳಿ ಭೀತಿ ಇದ್ದ ಸಮಯದಲ್ಲಿ ಗ್ರಾಮಕ್ಕೆ ಪಠಾಣರು ಆಗಮಿಸಿದ್ದಾಗ ಶ್ರೀಮಂಗಳೇಶ್ವರ ದೇವಸ್ಥಾನದ ಗೂಳಿ ಗುದ್ದಿ, ಪಠಾಣರು ಮತ್ತೆ ಈ ಕಡೆ ಬರಲಿಲ್ಲ ಎಂಬ ಇತಿಹಾಸ ಇದೆ. 1855ರಲ್ಲಿ ಮಂದಿರ ನಿರ್ಮಾಣ, 1868 ಮಹಾದ್ವಾರ, 2018-19ರಲ್ಲಿ ಗೋಪುರ ಉದ್ಘಾಟನೆ ಆಯಿತು. ಧಾರ್ಮಿಕ ಆಚರಣೆಗೆ ಮಂಗಳೇಶ್ವರ ದೇವಸ್ಥಾನ ಹೆಸರುವಾಸಿ. ಸರ್ವಧರ್ಮದವರು ಶ್ರೀ ಮಂಗಳೇಶ್ವರ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇಂಥ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಮಂಗಳೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತ ವೃಂದ ಪುನೀತರಾಗುತ್ತಾರೆ.


ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗುತ್ತಿದ್ದು, ಸಂಜೆ ಸಕಲ ವಾದ್ಯ ಮೇಳದೊಂದಿಗೆ ಹರಗುರುಚರಮೂರ್ತಿಗಳ ಸಾನ್ನಿಧ್ಯದಲ್ಲಿ ರಥೋತ್ಸವ ಜರುಗಲಿದೆ.

ಮಂಗಳೂರು ಗ್ರಾಮ ಭಾವೈಕ್ಯತೆ ಕೇಂದ್ರ: ಸರ್ವಧರ್ಮದವರಿಗೂ ಶ್ರದ್ಧಾ, ಭಕ್ತಿಯ ಆರಾಧಕ ಶ್ರೀ ಮಂಗಳೇಶ್ವರ ಸ್ವಾಮಿ. ಇಷ್ಟಾರ್ಥ ಈಡೇರಿಸುವ ಗ್ರಾಮದ ಆರಾಧ್ಯ ದೈವ. ಶ್ರೀ ಮಂಗಳೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಜಾತ್ರೆ ವೈಭವಕ್ಕೆ ಗ್ರಾಮದ ಭಕ್ತರು ಟೊಂಕ ಕಟ್ಟಿ ನಿಂತಿದ್ದಾರೆ.

ಮಂಗಳೇಶ್ವರ ಸ್ವಾಮಿ ಈ ಭಾಗದ ಆರಾಧ್ಯದೈವ. ಭಕ್ತಿಯಿಂದ ಆರಾಧನೆ ಮಾಡಿದರೆ ಇಷ್ಟಾರ್ಥ ಕಲ್ಪಿಸುವ ದೇವರಾಗಿದ್ದಾನೆ. ಈ ಜಾತ್ರೆ ಭಾವೈಕ್ಯತೆ ಜಾತ್ರೆ ಆಗಿದೆ. ಮಂಗಳೇಶ್ವರ ಸ್ವಾಮಿ ಜಾತ್ರೆಗೆ ಶ್ರದ್ಧಾ, ಭಕ್ತಿಯ ಪ್ರತೀಕ. ಜಾತ್ರೆಯ ಯಶಸ್ಸು ಇಡೀ ಗ್ರಾಮಸ್ಥರ ಭಕ್ತಿಗೆ ಸಲ್ಲುತ್ತದೆ. ಮಂಗಳೇಶ್ವರ ಸ್ವಾಮಿಯ ಜಾತ್ರೆಗೆ ಅಪಾರ ಭಕ್ತವೃಂದ ನಾನಾ ಕಡೆಯಿಂದ ಆಗಮಿಸಲಿದೆ ಎಂದು ಮಂಗಳೂರು ಗ್ರಾಮದ ಭಕ್ತ ರವಿ ನಿಂಗಪ್ಪ ಆಗೋಲಿ ಹೇಳಿದರು.