ಚುನಾವಣಾ ಸಿಬ್ಬಂದಿ ಆತ್ಮಹತ್ಯೆ ಯತ್ನ

| Published : Apr 03 2024, 01:33 AM IST

ಸಾರಾಂಶ

ವೈಯಕ್ತಿಕ ಕಾರಣಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಮಂಗಳವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್‌ ಹೆಗಡೆ (54) ಆತ್ಮಹತ್ಯೆಗೆ ಯತ್ನಿಸಿದವರು. ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಕಚೇರಿಯಲ್ಲಿ ವಿಷ ಸೇವಿಸಿ ಅವರು ಅಸ್ವಸ್ಥರಾಗಿದ್ದರು. ಉಳಿದ ಸಿಬ್ಬಂದಿ ನೋಡಿ ತಕ್ಷಣ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ 2019ರಿಂದ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಧರ್‌ ಹೆಗಡೆ ಅವರ ಜಾಗಕ್ಕೆ ಮತ್ತೊಬ್ಬರು ವರ್ಗಾವಣೆಯಾಗಿ ಬಂದ ಹಿನ್ನೆಲೆಯಲ್ಲಿ ಹೆಗಡೆ ಅವರು ಕಳೆದ ಫೆಬ್ರವರಿ, ಮಾರ್ಚ್‌ನಿಂದ ಸ್ಥಳ ನಿರೀಕ್ಷಣೆಯಲ್ಲಿದ್ದರು. ವೈಯಕ್ತಿಕ ಕಾರಣಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಸ್ಪತ್ರೆಗೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್‌, ಅಪರ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ, ಜಿ.ಪಂ. ಲೆಕ್ಕಾಧೀಕ್ಷಕ ಬಾಲು ಡಿ.ಎಂ ಸೇರಿದಂತೆ ಅಧಿಕಾರಿಗಳು ತೆರಳಿ ವೈದ್ಯರೊಂದಿಗೆ ಚಿಕಿತ್ಸೆಯ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಶ್ರೀಧರ್‌ ಹೆಗಡೆ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬದ ಇತರ ಸದಸ್ಯರ ಜತೆ ಮಾತುಕತೆ ನಡೆಸಿದರು.