ಸಾರಾಂಶ
ಮಾವಿನ ತೋಟಗಳಲ್ಲಿ ಈ ಬಾರಿ ಒಳ್ಳೆಯ ಹೂ ಬಿಟ್ಟಿದೆ. ಆದರೆ, ವಿಪರೀತ ಬಿಸಿಲು ಶುರುವಾಗಿದೆ. ಹೀಗಾಗಿ ಬಂದಿರುವ ಹೂ ಫಸಲಾಗಿ ಮಾರ್ಪಟ್ಟರೆ ಅಷ್ಟೇ ಸಾಕು. ಆದರೆ, ಮುಂದೆ ವಾತಾವರಣ ಏನಾಗುತ್ತೋ ನೋಡಬೇಕು. ಈ ಬಾರಿ ಮಾವು ರೈತರ ಕೈ ಹಿಡಿಯುವು ವಿಶ್ವಾಸವಿದೆ. ಕಳೆದ ವರ್ಷ ಯುಗಾದಿ ಬರುತ್ತಿದ್ದಂತೆ ಮಳೆ, ಗಾಳಿ, ಸಿಡಿಲಿಗೆ ಮಾವು ನೆಲಕಚ್ಚಿತ್ತು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ಮಾವಿನ ಗಿಡಗಳಲ್ಲಿ ಭರಪೂರ ಹೂವು ಕಾಣಿಸುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿವೆ. ಮಾವಿನ ಮರಗಳು ಜನವರಿ ಎರಡನೇ ಹಾಗೂ ಫೆಬ್ರವರಿ ಆರಂಭದಲ್ಲಿ ಉತ್ತಮ ಹೂ ಬಿಟ್ಟಿವೆ. ಲೆಕ್ಕಾಚಾರಕ್ಕಿಂತ ಮೊದಲೇ ಫಸಲು ಕೈಗೆಟುಕುವ ನಿರೀಕ್ಷೆ ಮಾವಿನ ಬೆಳೆಗಾರರಲ್ಲಿ ಗರಿಗೆದರಿದೆ.ಕಳೆದ ವರ್ಷವೂ ಕೂಡ ಜಿಲ್ಲೆಯ ಬಹುತೇಕ ಮಾವಿನ ಮರಗಳು ಚಿಗುರಿ ಉತ್ತಮ ಹೂವು ಬಿಟ್ಟಿದ್ದವು. ಯುಗಾದಿ ಬರುತ್ತಿದ್ದಂತೆ ಮುಂಗಾರು ಮಳೆಯ ಗಾಳಿ, ಮಳೆ, ಸಿಡಿಲಿನ ಹೊಡೆತಕ್ಕೆ ಮಾವಿನ ಕಾಯಿ ನೆಲಕ್ಕುರುಳಿ ನಷ್ಟ ಉಂಟಾಗಿತ್ತು. ಈ ಬಾರಿ ಅಂತಹ ನಷ್ಟ ಸಂಭವಿಸಲಿಕ್ಕಿಲ್ಲ ಎಂದೇ ರೈತರು ಲೆಕ್ಕ ಹಾಕುತ್ತಿದ್ದಾರೆ.ಫಸಲು ರಕ್ಷಣೆಗೆ ಎಚ್ಚರ ವಹಿಸಿ
ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚೇಳೂರು, ಗೌರಿಬಿದನೂರು, ಮಂಚೇನಹಳ್ಳಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ಈ ಬಾರಿ ಆಗಲೇ ಹೂ ಬಿಟ್ಟು, ಕೆಲವೆಡೆ ಕಾಯುವ ಕಚ್ಚುವ ಹಂತವನ್ನೂ ತಲುಪಿದೆ. ಹೀಗಾಗಿ ರೈತರು ಈಗಿನಿಂದಲೇ ಎಚ್ಚರಿಕೆಯಿಂದ ಮಾವಿನ ಬೆಳೆಯನ್ನು ನೋಡಿಕೊಂಡರೆ ಉತ್ತಮ ಫಸಲು ಪಡೆಯಬಹುದಾಗಿದೆ.ಜಿಲ್ಲೆಯಲ್ಲಿ ಪ್ರಸಕ್ತ ಮಾವಿನ ಬೆಳೆಯಲ್ಲಿ ತಳಿವಾರು ನೋಡುವುದಾದರೆ ಬಾದಾಮಿ ತಳಿಯಲ್ಲಿ ಶೇ.70, ಮಲ್ಲಿಕಾ ತಳಿಯಲ್ಲಿ ಶೇ.80, ನೀಲಂ, ತಳಿಯಲ್ಲಿ ಶೇ.70, ತೋತಾಪುರಿ ತಳಿಯಲ್ಲಿ ಶೇ.80, ಬ್ಯಾನಿಷಾ ತಳಿಯಲ್ಲಿ ಶೇ.80, ಮತ್ತು ಇತರೆ ತಳಿಗಳಲ್ಲಿ ಶೇ.75ರಷ್ಟು ಹೂ ಬಿಟ್ಟಿದ್ದು, ಮುಂದಿನ ಹಂತಗಳಲ್ಲಿ ಬರುವ ಯಾವುದೇ ರೋಗಳು ಬೆಳೆಗೆ ತಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ.
ಮುನ್ನೆಚ್ಚರಿಕೆ ವಹಿಸಲು ಸಲಹೆಜಿಲ್ಲೆಯಲ್ಲಿ ಬೆಳೆಯಲಾಗುವ ಮಾವಿಗೆ ಪ್ರತಿವರ್ಷ ಒಂದಿಲ್ಲೊಂದು ರೋಗಗಳು ಕಂಡು ಬರುತ್ತವೆ. ಮಾವು ಹೂವು ಬಿಟ್ಟಾಗ ಮತ್ತು ಮಾವು ಸಣ್ಣವಿದ್ದಾಗ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತೋಟಗಾರಿಕೆ ಅಧಿಕಾರಿಗಳು ಹೇಳಬೇಕು.
ಮಾವಿನ ತೋಟಗಳಲ್ಲಿ ಈ ಬಾರಿ ಒಳ್ಳೆಯ ಹೂ ಬಿಟ್ಟಿದೆ. ಆದರೆ, ವಿಪರೀತ ಬಿಸಿಲು ಶುರುವಾಗಿದೆ. ಹೀಗಾಗಿ ಬಂದಿರುವ ಹೂ ಫಸಲಾಗಿ ಮಾರ್ಪಟ್ಟರೆ ಅಷ್ಟೇ ಸಾಕು. ಆದರೆ, ಮುಂದೆ ವಾತಾವರಣ ಏನಾಗುತ್ತೋ ನೋಡಬೇಕು. ಈ ಬಾರಿಯಾದರೂ ಮಾವು ಕೈಗೆ ಸಿಗುತ್ತಾ ನೋಡಬೇಕು ಎನ್ನುತ್ತಾರೆ ಜಾತವಾರ ಹೊಸಹಳ್ಳಿಯ ಮಾವಿನ ತೋಟದ ಮಾಲಿಕ ಜೆ.ಅಂತೋನಿ.