ಡಿಸೆಂಬರ್‌ನಲ್ಲಿ ಪ್ರತಿಯೊಂದು ಮಾವಿನ ಗಿಡಗಳಲ್ಲಿ ಬಿಟ್ಟಿದ್ದ ಹೂವಿನ ಗೊಂಚಲು, ನೋಡಿದವರ ಕಣ್ಮನ ಸೆಳೆಯುವಂತಿತ್ತು. ದುರಾದೃಷ್ಟವಶಾತ್ ಜನವರಿ-ಫೆಬ್ರುವರಿಯಲ್ಲಿ ಹವಾಮಾನ ವೈಪರೀತ್ಯದಿಂದ ಗಿಡದಲ್ಲೊಂದು ಮಾವು ಸಹ ಸಿಗದ ಸ್ಥಿತಿ ಉಂಟಾಗಿದೆ.
ಬಸವರಾಜ ಹಿರೇಮಠ
ಧಾರವಾಡ:ಹಣ್ಣುಗಳ ರಾಜಾ ಎಂದೇ ಹೆಸರು ಪಡೆದಿರುವ ಮಾವಿನ ಹಣ್ಣಿನ ಹಂಗಾಮು ಶುರುವಾಗಿದ್ದು, ಧಾರವಾಡದ ಮಾರುಕಟ್ಟೆಗೆ ತರಹೇವಾರಿ ಮಾವಿನ ಹಣ್ಣುಗಳು ಆಗಮಿಸುತ್ತಿವೆ. ಆದರೆ, ಬೆಲೆಯಲ್ಲಿ ಮಾತ್ರ ರಾಜಿ ಇಲ್ಲ...!
ಹೌದು. ಈ ಬಾರಿ ಮಾವು ಬಲು ದುಬಾರಿಯಾಗಿಯೇ ಮಾರುಕಟ್ಟೆ ಪ್ರವೇಶಿಸಿದೆ. ಒಂದು ಡಜನ್ (12 ಹಣ್ಣುಗಳ) ಹಣ್ಣಿಗೆ ಬರೋಬ್ಬರಿ ₹ 1400ರಿಂದ ₹ 2000ರ ವರೆಗೂ (ಒಂದು ಹಣ್ಣಿಗೆ ಸುಮಾರು ₹ 150) ದಾಖಲೆ ಮಾರಾಟವಾಗುತ್ತಿದೆ. ಎಂತಹ ಹವಾಮಾನ ವೈಪರೀತ್ಯದಲ್ಲೂ ತಕ್ಕಮಟ್ಟಿಗೆ ಇಳುವರಿ ಇರುತ್ತಿತ್ತು. ಹಂಗಾಮಿನ ಆರಂಭದಲ್ಲಿ ಡಜನ್‌ಗೆ ಸಾವಿರ ವರೆಗೂ ಮಾರಾಟ ಮಾಡಿದ್ದು ತೀರಾ ಕಡಿಮೆ.ಬೆಲೆ ಏರಿಕೆಗೆ ಕಾರಣ:
ಡಿಸೆಂಬರ್‌ನಲ್ಲಿ ಪ್ರತಿಯೊಂದು ಮಾವಿನ ಗಿಡಗಳಲ್ಲಿ ಬಿಟ್ಟಿದ್ದ ಹೂವಿನ ಗೊಂಚಲು, ನೋಡಿದವರ ಕಣ್ಮನ ಸೆಳೆಯುವಂತಿತ್ತು. ದುರಾದೃಷ್ಟವಶಾತ್ ಜನವರಿ-ಫೆಬ್ರುವರಿಯಲ್ಲಿ ಹವಾಮಾನ ವೈಪರೀತ್ಯದಿಂದ ಗಿಡದಲ್ಲೊಂದು ಮಾವು ಸಹ ಸಿಗದ ಸ್ಥಿತಿ ಉಂಟಾಗಿದೆ. ಇದು ಬರೀ ಧಾರವಾಡ ಮಾತ್ರವಲ್ಲದೇ ಮಾವು ಬೆಳೆಯುವ ಪ್ರದೇಶದಲ್ಲಿ ಇದೇ ಸ್ಥಿತಿ ಹಿನ್ನೆಲೆಯಲ್ಲಿ ಮಾವಿಗೆ ಬೇಡಿಕೆ ಹೆಚ್ಚಾಗಿದೆ. ಧಾರವಾಡ ಆಪೂಸ್ ಹಣ್ಣಿಗೆ ₹ 1400ರಿಂದ ₹ 2000 ಸಾವಿರ ದರ ಇದ್ದರೆ, ಚೈತ್ರಾಪೈರಿ, ಕಲಮಿ ಸೇರಿದಂತೆ ಇತರೆ ತಳಿ ಹಣ್ಣುಗಳಿಗೆ ₹ 800ರಿಂದ ₹ 1000 ಸಾವಿರ ವರೆಗೆ ಮಾರಾಟವಾಗುತ್ತಿವೆ.ಹಣ್ಣು ತಿನ್ನಲು ವಿಚಾರ:
ಏಪ್ರಿಲ್ ಆರಂಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಮಾವು, ಈ ಬಾರಿ ಕೆಲವೇ ಕೆಲವು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೋಗೆಲ್ಲಾಪೂರದ ಯಲ್ಲಪ್ಪ ಬಂಗಾರಿ ಎಂಬುವರು ತಮ್ಮ ತೋಟದಲ್ಲಿಯ ಮಾವು ತಂದಿದ್ದು, ಗುಣಮಟ್ಟದ ಹಣ್ಣುಗಳಿಗೆ ತಕ್ಕಂತೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಬರೀ ಮಾವಿನ ದರ ಕೇಳುತ್ತಿದ್ದಾರೆಯೇ ಹೊರತು ದರ ಹೆಚ್ಚಾಗಿದ್ದರಿಂದ ಖರೀದಿ ಮಾಡುತ್ತಿಲ್ಲ. ತೋಟ ಇದ್ದವರೇ ತಮ್ಮ ತೋಟದ ಹಣ್ಣು ತಿನ್ನಲು ವಿಚಾರ ಮಾಡುವ ಸ್ಥಿತಿ ಉಂಟಾಗಿದೆ ಎಂದು ಯಲ್ಲಪ್ಪ ಹೇಳುತ್ತಾರೆ.ಮರುಗುತ್ತಿರುವ ರೈತರು:
ಮಾವು ಬೆಳೆಗಾರರು ಪ್ರತಿ ಬಾರಿ ಹವಾಮಾನ ವೈಪರೀತ್ಯದ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ, ಈ ವರ್ಷ ಮಾತ್ರ ಗಿಡಗಳಲ್ಲಿ ಒಂದೂ ಕಾಯಿ ಇಲ್ಲದ ಸ್ಥಿತಿ ಉಂಟಾಗಿದೆ. ಹೂ ಬಿಟ್ಟಿದ್ದ ದೃಶ್ಯ ನೆನಪಾದರೆ ಕಣ್ಣೀರು ಬರುತ್ತದೆ. ವರ್ಷವಿಡಿ ತೋಟದ ನಿರ್ವಹಣೆ, ಔಷಧಿ ಸಿಂಪಡಣೆ ಸೇರಿ ಲಕ್ಷಾಂತರ ವೆಚ್ಚ ಮಾಡಿದ್ದು, ಈಗ ಗಿಡಗಳಲ್ಲಿ ಬರೀ ಹಸಿರು ಎಲೆ ನೋಡುವ ಸ್ಥಿತಿ ಉಂಟಾಗಿದೆ ಎಂದು ಕೆಲಗೇರಿಯ ಮಾವು ಬೆಳೆಗಾರ ದೇವೇಂದ್ರ ಜೈನರ್ ತೀವ್ರ ಬೇಸರ ವ್ಯಕ್ತಪಡಿಸಿದರು.ಧಾರವಾಡದ ಕೆಲ ರೈತರು ಒಗ್ಗೂಡಿ ಮಾವು ಬೆಳೆಗಾರರ ಬಳಗ ಕಟ್ಟಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ಈ ಮಾವು ಬೆಳೆಗಾರರು ಸೇರಿ ಒಂದೆಡೆ ಮಾವು ಮೇಳ ಮಾಡುವುದು, ಗುಣಮಟ್ಟದ ಮಾವು ರಫ್ತು ಅಂತಹ ಕಾರ್ಯ ಮಾಡುತ್ತಿದ್ದಾರೆ. ಈ ಬಾರಿಯೂ ರಫ್ತು ಸೇರಿದಂತೆ ಇತರೆ ಚಟುವಟಿಕೆ ಮಾಡಲು ಸಿದ್ಧರಾಗಿದ್ದಾರೆ. ಆದರೆ, ಇಳುವರಿಯೇ ತೀರಾ ಕಡಿಮೆಯಾಗಿದ್ದು, ಮಾವು ಬೆಳೆಗಾರರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಒಂದು ಹೆಕ್ಟೇರ್‌ಗೆ ಕನಿಷ್ಠ ನಾಲ್ಕು ಟನ್ ಮಾವಿನ ಇಳುವರಿ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಈ ಬಾರಿ ಹೆಕ್ಟೇರ್‌ಗೆ ಒಂದು ಟನ್‌ಗೂ ಕಡಿಮೆ ಬರುವ ಸಾಧ್ಯತೆ ಇದೆ. ಹೀಗಾಗಿ ದರ ಏರಿಕೆಯಾಗಿದೆ. ಈ ಮಧ್ಯೆಯೂ ಮೇ ಮೊದಲ ವಾರದಲ್ಲಿ ಮಾವು ಮೇಳ ಮಾಡುವ ಮೂಲಕ ಗ್ರಾಹಕರಿಗೆ ಗುಣಮಟ್ಟದ ಮಾವು ಒದಗಿಸುವ ಕಾರ್ಯ ಇಲಾಖೆ ಮಾಡಲಾಗುವುದು.
ಕೆ.ಸಿ. ಬದ್ರನ್ನವರ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು