ತ್ರಿಫಲ ವೈವಿಧ್ಯತಾ ಮೇಳಕ್ಕೆ ಇಂದು ತೆರೆ

| Published : Jun 02 2024, 01:45 AM IST

ಸಾರಾಂಶ

ಮಾವು. ಹಲಸು, ಬಾಳೆ ಹಣ್ಣುಗಳ ‘ತ್ರಿಫಲ ವೈವಿಧ್ಯತಾ ಮೇಳ’ಕ್ಕೆ ಭಾನುವಾರ ತೆರೆಬೀಳಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೂರಾರು ತಳಿಯ ಮಾವು, ಬಗೆ ಬಗೆಯ ಬಣ್ಣ, ಸುವಾಸನೆ ಬೀರುತ್ತಿದ್ದ ಹಲಸಿನ ಹಣ್ಣು ಮತ್ತು ಬಾಳೆ ಹಣ್ಣಿನ ತಳಿಗಳು ಕೃಷಿ ವಿಜ್ಞಾನಿಗಳು, ರೈತರು ಮತ್ತು ಕೃಷಿ, ತೋಟಗಾರಿಕೆ ವಿದ್ಯಾರ್ಥಿಗಳ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹೆಸರುಘಟ್ಟದ ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆಯಲ್ಲಿ ನಡೆಯುತ್ತಿರುವ ಮಾವು. ಹಲಸು, ಬಾಳೆ ಹಣ್ಣುಗಳ ‘ತ್ರಿಫಲ ವೈವಿಧ್ಯತಾ ಮೇಳ’ಕ್ಕೆ ಭಾನುವಾರ (ಜೂ.2) ತೆರೆ ಬೀಳಲಿದೆ.

ಬಾಳೆ ದಿಂಡಿನ ಶಾಂಪೂ, ಜೆಲ್ಲಿ, ಸಾಬೂನು, ಫೇಸ್‌ಕ್ರೀಂ ಮುಂತಾದ ಸೌಂದರ್ಯ ವರ್ಧಕಗಳು, ಮಾವಿನ ಖಾದ್ಯಗಳು, ಉಪ್ಪಿನಕಾಯಿ, ಆಪ್ಪೆಮಿಡಿ ಉಪ್ಪಿನಕಾಯಿ, ಮಾವಿನ ರಸ, ಹಲಸಿನಹಣ್ಣಿನ ಚಿಪ್ಸ್‌, ಪಕೋಡ, ಹೋಳಿಗೆ, ಜ್ಯೂಸ್‌ ಇತ್ಯಾದಿಗಳು ಜನರಿಗೆ ಇಷ್ಟವಾದವು.

ಒಂದೇ ಸೂರಿನಡಿಯಲ್ಲಿ 300ಕ್ಕೂ ಹೆಚ್ಚು ತರೇವಾರಿ ಮಾವಿನ ಹಣ್ಣಿನ ತಳಿಗಳು, ಶಂಕರ ಸಿದ್ದು, ಚಂದ್ರ ಹಲಸು ಸೇರಿದಂತೆ 100ಕ್ಕೂ ಹೆಚ್ಚು ಹಲಸಿನ ತಳಿಗಳು ಹಾಗೂ ನೂರು ಬಾಳೆ ಹಣ್ಣಿನ ತಳಿಗಳು ರೈತರನ್ನು ಕಣ್ಣರಳಿಸುವಂತೆ ಮಾಡಿದ್ದವು. ಮಾವು, ಹಲಸು ಮತ್ತು ಬಾಳೆ ಹಣ್ಣಿನಿಂದ ತಯಾರಿಸಿದ ವಿವಿಧ ಬಗೆಯ ತಿಂಡಿ, ತಿನಿಸುಗಳು ಖಾದ್ಯ ಪ್ರಿಯರನ್ನು ಸೆಳೆದವು. ಈ ಹಣ್ಣುಗಳಿಂದ ತಯಾರಿಸಿದ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಹಿಳೆಯರು ಸಂಭ್ರಮದಿಂದಲೇ ವೀಕ್ಷಿಸಿ, ಖರೀದಿಸಿದರು.

ಮೇಳದಲ್ಲಿ ಭೌಗೋಳಿಕ ಮಾನ್ಯತೆ ಹೊಂದಿರುವ (ಜಿಐ ಟ್ಯಾಗ್) ನಂಜನಗೂಡಿನ ರಸಬಾಳೆ, ಕಮಲಾಪುರದ ಕೆಂಪುಬಾಳೆ, ಕನ್ಯಾಕುಮಾರಿಯ ಮಟ್ಟಿ ಸಿರುಮಲೈ, ತಮಿಳುನಾಡಿನ ವಿರೂಪಾಕ್ಷಿ ಬಾಳೆ, ಗೋವಾದ ಮೈನಡೋಲಿ, ಕೇರಳದ ತ್ರಿಶೂರನ ಚಂಗಲಿಕೊಡನ್ ಬಾಳೆ, ಮಹಾರಾಷ್ಟ್ರದ ಜಲಗಾಂವ್‌ ಜಿಐ ಟ್ಯಾಗ್ ಪಡೆದ ಬಾಳೆ ಹಣ್ಣುಗಳ ದರ್ಬಾರ ಜೋರಾಗಿದೆ. 100ಕ್ಕೂ ಹೆಚ್ಚಿನ ಬಾಳೆ ಹಣ್ಣುಗಳ ಪ್ರದರ್ಶನ ನೋಡಗರ ಗಮನ ಸೆಳೆಯಿತು. ಮಹಾರಾಷ್ಟ್ರದ ಅಲ್ಫಾನ್ಸೊ, ಅಂಕೋಲಾದ ಕರಿ ಇಶಾದ್, ರತ್ನಗಿರಿ ಸೇರಿದಂತೆ 10ಕ್ಕೂ ಹೆಚ್ಚು ಬಗೆಯ ಜಿಐ ಟ್ಯಾಗ್ ಪಡೆದಿರುವ ಮಾವಿನ ಹಣ್ಣುಗಳಿವೆ.

ಅಪ್ಪೆಮಿಡಿ ತಳಿಗಳ ಪ್ರದರ್ಶನ

ಅಳಿವಿನ ಅಂಚಿನಲ್ಲಿರುವ ಮಲೆನಾಡು, ಉತ್ತರ ಕನ್ನಡದ ಪ್ರಮುಖ ಮಾವಿನ ತಳಿಗಳಲ್ಲಿ ಒಂದಾದ ಅಪ್ಪೆಮಿಡಿಯ ಹತ್ತಾರು ತಳಿಗಳು ಮೇಳದಲ್ಲಿ ಲಭ್ಯವಿದ್ದವು. ಬಾಳೆಕೊಪ್ಪ, ಸುಡೂರು ಅಪ್ಪೆಮಿಡಿ, ಮಾವಿನಕಟ್ಟೆ ಅಪ್ಪೆ, ಸಿರಿಅಪ್ಪೆ, ಪುರಪ್ಪೆ, ತುಡುಗುಣ ಅಪ್ಪೆ, ಮಾಳಂಜಿ ಅಪ್ಪದೆ, ನಂದಗಾರು ಅಪ್ಪೆ, ಜೀರಿಗೆ ಅಪ್ಪೆ, ನಾಡಿಮುಡಿ ಅಪ್ಪೆ ಹೀಗೆ ಸುಮಾರು 30ಕ್ಕೂ ಹೆಚ್ಚು ಅಪ್ಪೆಮಿಡಿ ತಳಿಗಳು ಇಲ್ಲಿದ್ದವು. ಮುಖ್ಯವಾಗಿ ಐಐಎಚ್‌ಆರ್‌ ಅಭಿವೃದ್ಧಿಪಡಿಸಿರುವ ಅಪ್ಪೆಮಿಡಿಗಳ ತಳಿಗಳನ್ನು ಪ್ರದರ್ಶನದ ವಿಶೇಷವಾಗಿದೆ.

ವಾರ್ಷಿಕ ಬೆಳೆಯಾಗಿರುವ ಅಪ್ಪೆಮಿಡಿ ಮಾವನ್ನು ರೈತರು ಬೆಳೆದರೆ, ವಿದೇಶಗಳಿಗೂ ಪೂರೈಕೆ ಮಾಡಬಹುದು. ಅಲ್ಲಿ ಸಹ ಈ ಮಾವಿಗೆ ಬೇಡಿಕೆ ಇದೆ. ಹೆಚ್ಚು ಆದಾಯವನ್ನು ಗಳಿಸಬಹುದು. ಒಂದು ಬಾರಿ ಎಕರೆವಾರು ಪ್ರದೇಶದಲ್ಲಿ ಮಾವು ಸಸಿಗಳನ್ನು ನಾಟಿ ಮಾಡಿದರೆ, ಸುಮಾರು 30 ರಿಂದ 40 ವರ್ಷಗಳ ಕಾಲ ಪ್ರತಿ ವರ್ಷ ಫಸಲು ಪಡೆಯಬಹುದು. ಮಾವಿನ ಸೀಸನ್‌ನಲ್ಲಿ ರೋಗ ಸಮಸ್ಯೆ ತಡೆಗೆ ನಿರ್ವಹಣೆಗೆ ಸ್ವಲ್ಪ ಹಣ ವ್ಯಯಿಸಬೇಕಾಗುತ್ತದೆ ಎನ್ನುತ್ತಾರೆ ಐಐಎಚ್‌ಆರ್‌ ವಿಜ್ಞಾನಿಗಳು.

ತ್ರಿಫಲ ಅಡುಗೆ ಸ್ಪರ್ಧೆ

ಮೇಳದಲ್ಲಿ ಮಾವು, ಹಲಸು, ಬಾಳೆ ಹಣ್ಣಿನ ವಿಷಯಾಧಾರಿತವಾಗಿ ಮೂರು ವಿಭಾಗದಲ್ಲಿ ನೂತನ ಖಾದ್ಯ ತಯಾರಿಸುವ ಅಡುಗೆ ಸ್ಪರ್ಧೆ ನಡೆಯಿತು. ಸುಮಾರು 20ಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಹಣ್ಣುಗಳನ್ನು ಬಳಸಿಕೊಂಡು ಸ್ಫರ್ಧಾಳುಗಳು ಬಗೆಬಗೆಯ ಖಾದ್ಯಗಳನ್ನು ತಯಾರು ಮಾಡಿದ್ದರು. ಈ ಪೈಕಿ ಮಾವಿನ ಖಟ್ಟ ತಯಾರಿಸಿದ ಜಾನಕಿ (ಮಾವು ವಿಭಾಗ), ಹಲಸಿನಹಣ್ಣಿನ ಬೀಜದ ಲಡ್ಡು ತಯಾರು ಮಾಡಿದ ಆರ್‌.ಪೂಜಾ (ಹಲಸಿನ ವಿಭಾಗ) ಹಾಗೂ ಬಾಳೆಹಣ್ಣಿನ ಪಾಯಸ ತಯಾರಿಸಿದ ಎಸ್‌.ವಿನೋದ ಅವರು(ಬಾಳೆಹಣ್ಣಿನ ವಿಭಾಗ) ಪ್ರಥಮ ಸ್ಥಾನ ಗಳಿಸಿದರು.