ಕನ್ನಡಪ್ರಭ ವಾರ್ತೆ ಕೋಲಾರ
ಕೊರೋನಾ ಕಾಲಘಟ್ಟದಿಂದ ಈಚೆಗೆ ನಿರಂತರವಾಗಿ ಮಾವಿಗೆ ಬೆಲೆ ಕುಸಿಯುತ್ತಾ ಬಂದಿರುವುದರಿಂದ ನಿರಾಸೆಗೊಂಡಿರುವ ರೈತರು ಮಾವಿನ ಮರಗಳನ್ನು ಕಟಾವು ಮಾಡಿ ಪರ್ಯಾಯ ಬೆಳೆ ಬೆಳೆಯಲು ಕೋಲಾರ ಜಿಲ್ಲಾ ಮಾವು ಬೆಳೆಗಾರರು ಮುಂದಾಗಿದ್ದಾರೆ.ಕಳೆದ ೫-೬ ವರ್ಷದಿಂದಲೂ ಮಾವಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ೫೭ ಸಾವಿರಕ್ಕೂ ಹೆಚ್ಚಿನ ಭೂ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದಾರೆ. ವಿಶೇಷವಾಗಿ ಶ್ರೀನಿವಾಸಪುರ ತಾಲೂಕು ಒಂದರಲ್ಲಿಯೇ ೪೫ ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದಾರೆ.
ಸುಮಾರು ೧೦ಕ್ಕೂ ಹೆಚ್ಚಿನ ವಿವಿಧ ತಳಿಗಳ ಮಾವನ್ನು ಕೋಲಾರ ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುತ್ತಿದ್ದಾರೆ, ಇದರಲ್ಲಿ ಶೇ.೬೦ಕ್ಕೂ ಹೆಚ್ಚು ತೋತಾಪುರಿ ಮಾವು ಬೆಳೆಯುತ್ತಿದ್ದಾರೆ. ತೋತಾಪುರಿ ಮಾವನ್ನು ಹೆಚ್ಚಾಗಿ ಜ್ಯೂಸ್ ಫ್ಯಾಕ್ಟರಿಗಳು ಖರೀದಿಸುತ್ತಾರೆ. ಕಳೆದ ೪-೫ ವರ್ಷದಿಂದ ನಾನಾ ಕಾರಣಗಳ ನೆಪವೊಡ್ಡಿ ಪ್ರತಿ ಕೆ.ಜಿಗೆ ೩ ರು.ಗಳಿಂದ ೧೦ ರು.ವರೆವಿಗೂ ಖರೀದಿ ಮಾಡುತ್ತಿದ್ದಾರೆ.ರೈತರ ನಿರಂತರ ಹೋರಾಟಗಳ ಪರಿಣಾಮ ಕಳೆದ ೨ ವರ್ಷದಿಂದ ಮಾವಿಗೆ ಬೆಂಬಲ ಬೆಲೆ ನೀಡುತ್ತಿದ್ದಾರೆ, ಅದು ಸರ್ಕಾರ ಕೊನೆ ಗಳಿಗೆಯಲ್ಲಿ ಬೆಂಬಲ ಬೆಲೆ ಘೋಷಣೆ ಮಾಡುತ್ತದೆ, ಹಲವಾರು ತೋಟಗಳಲ್ಲಿ ಮಾವು ಕೊಳೆತು ಹೋಗಿರುತ್ತದೆ ಮತ್ತು ಕೆಲವರು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ, ಆಗ ಬೆಂಬಲ ಬೆಲೆ ನಿಜವಾದ ಮಾವು ಬೆಳೆಗಾರರಿಗೆ ಹೊರೆತುಪಡಿಸಿ ಹೋರಾಟಗಾರರು ಎನಿಸಿಕೊಂಡವರಿಗೆ ಮತ್ತು ಅಧಿಕಾರದಲ್ಲಿರುವ ಬಲಾಢ್ಯರು ಮಾತ್ರ ಬೆಂಬಲ ಬೆಲೆಯ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.
ಮಾವಿನ ಸುಗ್ಗಿ ಪ್ರಾರಂಭಗೊಂಡ ಒಂದು ತಿಂಗಳ ನಂತರ ರೈತರ ಒತ್ತಾಯದ ನಡುವೆ ಮಂತ್ರಿ ಮಂಡಲದ ಸಭೆಯಲ್ಲಿ ಬೆಂಬಲ ಬೆಲೆ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದು ಕಾರ್ಯರೂಪಕ್ಕೆ ಬರಲು ಎಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಆ ಸಮಯಕ್ಕೆ ಮಾವಿನ ಫಸಲು ಮುಗಿಯುವ ಹಂತಕ್ಕೆ ತಲುಪುತ್ತದೆ. ಇದರಿಂದ ಕೆಲವರಿಗೆ ಮಾತ್ರ ಬೆಂಬಲ ಬೆಲೆ ಸಿಗುವಂತಾಗುತ್ತದೆ. ಇದರಿಂದ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸಿಗುವಂತಾಗುತ್ತದೆ ಎಂದು ರೈತರು ಆರೋಪಿಸಿದ್ದಾರೆ.
ಸತತ ಮಾವು ಬೆಲೆ ಕುಸಿತ, ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ, ಔಷಧಿಗಳ ದುಬಾರಿ, ಕೀಟನಾಶಕಗಳ ದುಬಾರಿಯಿಂದ ಬೇಸತ್ತಿರುವ ರೈತ ತೋತಾಪುರಿ ಸೇರಿದಂತೆ ಇತರೆ ಮಾವಿನ ಮರಗಳನ್ನು ತೆರವು ಮಾಡಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಶ್ರೀನಿವಾಸಪುರದ ರೈತರು ಮುಂದಾಗಿದ್ದಾರೆ.
ಈಗಾಗಲೇ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿಯ ಬಹುತೇಕ ರೈತರು ಕಳೆದ ವರ್ಷವೇ ಮರಗಳನ್ನು ತೆಗೆದು ಹಾಕಿದ್ದು, ಈ ವರ್ಷವೂ ಈಗಾಗಲೇ ಬಹುತೇಕರು ಮಾವಿನ ಮರಗಳನ್ನು ಕಟಾವು ಮಾಡಲು ಮುಂದಾಗಿದ್ದಾರೆ.ಕೋಟ್ಸತತ ಮಾವು ಬೆಲೆ ಕುಸಿತದಿಂದ ಪ್ರತಿ ವರ್ಷ ನಷ್ಟ ಅನುಭವಿಸಬೇಕಿತ್ತು. ಆದ ಕಾರಣ ಕಳೆದ ವರ್ಷ ೪ ಎಕರೆ ಭೂಮಿಯಲ್ಲಿ ಫಸಲಿಗೆ ಬಂದ ಮರಗಳನ್ನು ಕಟಾವು ಮಾಡಿ ತರಕಾರಿ ಬೆಳೆಗಳನ್ನು ಬೆಳೆಯಲಾಗಿದ್ದು ಉತ್ತಮ ಫಸಲಿನ ಜೊತೆಗೆ ಉತ್ತಮ ಬೆಲೆಯೂ ಸಿಕ್ಕಿದೆ, ಮಾವಿನ ಮರಗಳಿದ್ದ ಸಂದರ್ಭದಲ್ಲಿ ಮಾವಿನ ತೋಟದಲ್ಲಿ ಪರ್ಯಾಯ ಬೆಳೆಯಲು ಆಗುತ್ತಿರಲಿಲ್ಲ, ವರ್ಷಕ್ಕೊಮ್ಮೆ ಸಿಗುವ ಮಾವಿನ ಫಸಲು ವರ್ಷಪೂರ್ತಿ ತೋಟಕ್ಕೆ ಸಿಂಪಡಿಸುವ ಔಷಧಿ ಮತ್ತು ಗೊಬ್ಬರಗಳಿಗೆ ಮಾತ್ರ ಸರಿಹೋಗುತ್ತಿತ್ತು.- ಶಿವಪ್ರಸಾದ್, ರೈತ, ಶ್ರೀನಿವಾಸಪುರ.ಕೋಟ್ಕಳೆದ ೧೦ ವರ್ಷದಿಂದ ಮಾವು ಫಸಲಿನಿಂದ ನಷ್ಟ ಅನುಭವಿಸಿ ಸಾಕಾಗಿ ಹೋಗಿತ್ತು, ಪ್ರತಿ ವರ್ಷವೂ ಬೆಲೆ ಕುಸಿತದಿಂದ ರೋಸಿ ಹೋಗಿತ್ತು, ಆದ ಕಾರಣದಿಂದ ನಾಲ್ಕು ಎಕರೆ ಮಾವಿನ ಮರಗಳನ್ನು ಕಟಾವು ಮಾಡಲಾಗುತ್ತಿದೆ, ಒಣ ಬೇಸಾಯಕ್ಕೆ ರಾಗಿ ಬೆಳೆದುಕೊಂಡರೂ ಪ್ರತಿ ಕ್ವಿಂಟಲ್ ರಾಗಿಗೆ ೫೨೦೦ ರು. ಕೊಟ್ಟು ಸರ್ಕಾರ ಖರೀದಿಸುತ್ತದೆ, ಒಂದು ಎಕರೆಗೆ ಕನಿಷ್ಠ ೧೫-೨೦ ಕ್ವಿಂಟಲ್ ರಾಗಿ ಬೆಳೆಯಬಹುದು, ಒಂದು ಎಕರೆಗೆ ಸುಮಾರು ಒಂದು ಲಕ್ಷ ರು. ಬರುತ್ತದೆ. ಈ ಕಾರಣದಿಂದ ಮಾವಿನ ಸಹವಾಸ ಸಾಕಾಗಿ ಕಳೆದ ಒಂದು ವಾರದಿಂದ ಮರಗಳನ್ನು ಕಡಿಯಲಾಗುತ್ತಿದೆ.- ಶಿವಾಜಿ, ಚಲ್ದಿಗಾನಹಳ್ಳಿ, ಶ್ರೀನಿವಾಸಪುರ ತಾಲೂಕು