ಬಿರು ಬೇಸಿಗೆ ನಡುವೆಯೇ ಅಕಾಲಿಕ ಮಳೆಯ ತುಂತುರು ತಂಪಿನೊಂದಿಗೆ ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ ಕಾರ್ಕಳ ತಾಲೂಕು ಮಾರುಕಟ್ಟೆಗಳಲ್ಲಿ ಸಿಹಿ ಸಂಭ್ರಮ ಮೂಡಿದೆ. ಮಾವುಗಳು ಈಗ ಹಣ್ಣು ಪ್ರಿಯರ ಮನಸೂರೆಗೈಯುತ್ತಿವೆ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಬಿರು ಬೇಸಿಗೆ ನಡುವೆಯೇ ಅಕಾಲಿಕ ಮಳೆಯ ತುಂತುರು ತಂಪಿನೊಂದಿಗೆ ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ ಕಾರ್ಕಳ ತಾಲೂಕು ಮಾರುಕಟ್ಟೆಗಳಲ್ಲಿ ಸಿಹಿ ಸಂಭ್ರಮ ಮೂಡಿದೆ. ಮಾವುಗಳು ಈಗ ಹಣ್ಣು ಪ್ರಿಯರ ಮನಸೂರೆಗೈಯುತ್ತಿವೆ.ಕೇರಳ ಮತ್ತು ತಮಿಳುನಾಡಿನಿಂದ ಆಗಮಿಸುವ ರಸಪುರಿ ಸೇರಿದಂತೆ ವಿವಿಧ ತಳಿಯ ಮಾವುಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಂಗಡಿಗಳಲ್ಲಿ ಸರಿಯಾಗಿ ರಾಶಿ ಮಾಡಿರುವ ಮಾವಿನ ಹಣ್ಣುಗಳಿಂದ ಹರಡುವ ಸುವಾಸನೆ ಗ್ರಾಹಕರನ್ನು ಸೆಳೆಯುತ್ತಿದೆ. ಪ್ರತಿ ಕೆಜಿಗೆ 150ರಿಂದ 200ರವರೆಗೆ ಮಾರಾಟವಾಗುತ್ತಿರುವ ಈ ಹಣ್ಣುಗಳಿಗೆ ಉತ್ತಮ ಬೇಡಿಕೆ ಕಂಡುಬರುತ್ತಿದೆ.

ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಕಟಪಾಡಿ ಹಾಗೂ ಹೆಬ್ರಿ ಮಾರುಕಟ್ಟೆಗಳಲ್ಲಿ ಸಹ ಹೊರ ರಾಜ್ಯದ ಮಾವುಗಳು ಲಭ್ಯವಿವೆ.

ಹೆಬ್ರಿ ಭಾಗದಲ್ಲಿ ಈಗಾಗಲೇ ಕೊಯ್ಲು ಆರಂಭಗೊಂಡಿದ್ದು, ಮರದಿಂದ ಕಿತ್ತ ತಾಜಾ ಮಾವನ್ನು ಬಾಕ್ಸ್‌ಗಳಲ್ಲಿ ತುಂಬಿ ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ. ಇನ್ನುಕೆಲವೇ ದಿನಗಳಲ್ಲಿ ಕಾರ್ಕಳ ಮಾರುಕಟ್ಟೆಯಲ್ಲೂ ಸ್ಥಳೀಯ ಮಾವುಗಳು ಲಭ್ಯವಾಗಲಿವೆ.ಜಿಲ್ಲೆಯಲ್ಲಿ ಒಟ್ಟು 166 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದ್ದು, ವರ್ಷಕ್ಕೆ ಸರಾಸರಿ 3,000 ಟನ್‌ಗಳಷ್ಟು ಇಳುವರಿ ದೊರೆಯುತ್ತದೆ. ತಾಲೂಕುವಾರು ನೋಡಿದರೆ ಕುಂದಾಪುರದಲ್ಲಿ 59 ಹೆಕ್ಟೇರ್, ಕಾರ್ಕಳದಲ್ಲಿ 43 ಹೆಕ್ಟೇರ್, ಬ್ರಹ್ಮಾವರದಲ್ಲಿ 26 ಹೆಕ್ಟೇರ್, ಹೆಬ್ರಿಯಲ್ಲಿ 15.9 ಹೆಕ್ಟೇರ್, ಬೈಂದೂರಿನಲ್ಲಿ 11 ಹೆಕ್ಟೇರ್, ಕಾಪುವಿನಲ್ಲಿ 9 ಹೆಕ್ಟೇರ್ ಹಾಗೂ ಉಡುಪಿಯಲ್ಲಿ 3 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ.ಪ್ರತಿ ವರ್ಷ ಕೋಲಾರ, ತುಮಕೂರು, ಬೆಂಗಳೂರು ಹಾಗೂ ಹಾಸನ ಜಿಲ್ಲೆಗಳಿಂದ ಬರುವ ಅಲ್ಲೋನ್ಸ್, ಸಿಂಧೂರ, ಮಲ್ಲಿಕಾ ತಳಿಯ ಮಾವುಗಳು ತಮ್ಮ ವಿಶಿಷ್ಟ ರುಚಿ ಮತ್ತು ಪರಿಮಳದಿಂದ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದಿವೆ. ಈ ಬಾರಿ ಕೂಡ ಈ ತಳಿಗಳಿಗೆ ಉತ್ತಮ ಸ್ಪಂದನೆ ದೊರಕುತ್ತಿದೆ.

ಹೆಬ್ರಿ ಮತ್ತು ಕಾರ್ಕಳ ಭಾಗಗಳಲ್ಲಿ ಬೆಳೆಯುವ ಮಲಬಾರ್, ತೋತಾಪುರಿ, ಮುಂಡಪ್ಪ, ಬೆನೆಟಾ ಹಾಗೂ ಕಲೆಕ್ಟರ್ ತಳಿಯ ಮಾವುಗಳು ತಮ್ಮದೇ ಆದ ಸಿಹಿತನ, ರಸ ಮತ್ತು ಪರಿಮಳದಿಂದ ಖ್ಯಾತಿ ಪಡೆದಿವೆ.

ಮುನಿಯಾಲು, ಕಬ್ಬಿನಾಲೆ, ನಾಡ್ಪಾಲು, ಮುದ್ರಾಡಿ ಪ್ರದೇಶಗಳಲ್ಲಿ ಕೊಯ್ಲು ಆರಂಭವಾಗಿದ್ದು, ಬೆಳೆಗಾರರು ಮರ ಸಮೇತ ಗುತ್ತಿಗೆ ನೀಡುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಹಣ್ಣುಪ್ರಿಯರು ಈಗಾಗಲೇ ತಮ್ಮ ನೆಚ್ಚಿನ ಮಾವಿನ ತಳಿಗಳನ್ನು ಹುಡುಕುತ್ತ ಮಾರುಕಟ್ಟೆ ಕಡೆ ಮುಖ ಮಾಡಿದ್ದಾರೆ. ಇನ್ನೊಂದೆಡೆ ಕಾರ್ಮಿಕರ ಕೊರತೆ ಹಾಗೂ ಸಾಗಾಟ ವೆಚ್ಚ ಹೆಚ್ಚಳದಿಂದ ವ್ಯಾಪಾರ ನಡೆಸುವುದು ಸವಾಲಿನ ಕೆಲಸವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಮಾವಿನ ಮರಕ್ಕೆ ಹತ್ತಿ ಮಾವು ಕೀಳುವ ಕುಶಲಕರ್ಮಿ ಕಾರ್ಮಿಕರು ಸಿಗುತಿಲ್ಲ. ಕಾರ್ಮಿಕರ ಕೊರತೆ ಹೆಚ್ಚಿದೆ. ಸ್ಥಳೀಯ ಮಾವಿನ ಕೊಯ್ಲು ಆರಂಭವಾಗಿದೆ. ಕ್ರೈನ್ ಹಿಡಿದು ಮಾವು ಕೊಯ್ಯಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಮಾವಿನ ಹಣ್ಣಿನ ವ್ಯಾಪಾರಿ -ಅಹಮದ್ ಅಜೆಕಾರು.