ಸಾರಾಂಶ
ಜೆಡಿಎಸ್ ಸಭೆಯಲ್ಲಿ ಟೀಕೆ । ಭರವಸೆ ಈಡೇರಿಸಲು ಕಾಂಗ್ರೆಸ್ಸಲ್ಲಿ ಹಣವಿಲ್ಲ
ಕನ್ನಡಪ್ರಭ ವಾರ್ತೆ ಹಾಸನಲೋಕಸಭೆ ಚುನಾವಣೆಯಲ್ಲಿ ಅನೇಕ ಭರವಸೆಗಳನ್ನು ನೀಡಿರುವ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕೇವಲ ಸುಳ್ಳಿನ ಕಂತೆಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟೀಕಿಸಿದರು.
ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ಇತ್ತೀಚೆಗೆ ಕಾಂಗ್ರೆಸ್‌ನ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಸೇರಿ ಸುದ್ದಿಗೋಷ್ಠಿ ನಡೆಸಿ ಪ್ರಣಾಳಿಕೆ ಬಿಡುಗಡೆ ಮಾಡಿ ೨೫ ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದಾರೆ, ತಮ್ಮ ಸರ್ಕಾರ ಬಂದರೆ ದೇಶದಲ್ಲಿ ೮ ಸಾವಿರ ಕೋಟಿ ಮನೆಗಳನ್ನು ನಿರ್ಮಾಣ ಮಾಡಿ, ಎಲ್ಲಾ ರೀತಿಯ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ, ಇವರ ಈ ಎಲ್ಲಾ ಅಂಶಗಳನ್ನು ಭರವಸೆಗಳನ್ನು ಈಡೇರಿಸಲು ಹಣ ಎಲ್ಲಿದೆ, ಇಂತಹ ಸುಳ್ಳನ್ನು ಜನ ನಂಬಬಾರದು ಎಂದು ಅಣಕವಾಡಿದರು.‘ಕಾಂಗ್ರೆಸ್‌ಗೆ ಈವರೆಗೆ ಲೋಕಸಭೆಯಲ್ಲಿ ವಿಪಕ್ಷ ಸ್ಥಾನ ಕೂಡ ಸಿಕ್ಕಿಲ್ಲ. ಇಲ್ಲಸಲ್ಲದ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡಲು ಕಾಂಗ್ರೆಸ್ ಮುಂದಾಗಿದೆ’ ಎಂದು ಹೇಳಿದರು.
ಬಾಬು ಜಗಜೀವನ್ ರಾಂ ಜಯಂತಿ ನಡೆದಿದೆ. ಆದರೆ ಕಾಂಗ್ರೆಸ್‌ನ ಯಾವ ನಾಯಕರೂ ಬಾಬು ಜಗಜೀವನ್ ರಾಂ ಬಗ್ಗೆ ಮಾತನಾಡಿಲ್ಲ. ಇಂದಿರಾಗಾಂಧಿ, ನೆಹರು ಕಾಲದಲ್ಲಿ ಸಚಿವರಾಗಿದ್ದವರಿಗೆ ಸರಿಯಾಗಿ ಗೌರವ ಸಲ್ಲಿಸಿಲ್ಲ. ಕೆಲವರು ತೆಂಗಿನ ಮರದ ಕೆಳಗೆ ಮಲಗಿ ಪರಿಹಾರಕ್ಕಾಗಿ ನಾಟಕ ಆಡಿದ ವ್ಯಕ್ತಿಗಳನ್ನು ನೋಡಿದ್ದೇನೆ ಎಂದು ಶಾಸಕ ಕೆ.ಎಂ.ಶಿ ವಿರುದ್ದ ವಾಗ್ದಾಳಿ ನಡೆಸಿದರು.ಮಾಜಿ ಸಚಿವ ಎಚ್ಡಿ ರೇವಣ್ಣ ಮಾತನಾಡಿ, ‘ದೇವೇಗೌಡರ ಮುಖ ನೋಡಿ ಯಾರು ಮತ ಹಾಕಲ್ಲ, ಹಣ ಕೊಟ್ಟರೆ ಮಾತ್ರ ಮತ ಹಾಕುತ್ತಾರೆ ಎಂದು ಹೇಳುವ ಮೂಲಕ ಹಣದಲ್ಲಿ ಅಳೆಯುವ ವ್ಯಕ್ತಿಗಳಿಗೆ ಕ್ಷೇತ್ರದ ಜನ ಬುದ್ಧಿ ಕಲಿಸಬೇಕು, ೧೫ ವರ್ಷ ನಮ್ಮ ಬಳಿ ತಿಂದು ಹೋಗಿರುವ ಗಿರಾಕಿಗೆ ಈ ಬಾರಿಯ ಚುನಾವಣೆಯಲ್ಲೆ ತಕ್ಕ ಉತ್ತರ ನೀಡಬೇಕು’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಅರಸೀಕೆರೆ ತಾಲೂಕಿಗೆ ಕುಡಿಯುವ ನೀರು, ಗಂಡಸಿಯಲ್ಲಿ ವಿದ್ಯುತ್ ಕೇಂದ್ರ ನಿರ್ಮಾಣ, ರಸ್ತೆ, ಶಿಕ್ಷಣ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಕೆಲಸ ಮಾಡಿದೆ. ಕೈಗಾರಿಕೆ ಸ್ಥಾಪಿಸಿ ಸಾವಿರಾರು ಜನರಿಗೆ ಕೆಲಸ ಮಾಡಲು ಅನುಕೂಲ ಕಲ್ಪಿಸುವ ಜೆಡಿಎಸ್ ಬಗ್ಗೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅಂತವರಿಗೆ ದೇವರೇ ಶಿಕ್ಷೆ ಕೊಡುವ ಕಾಲ ಬರಲಿದೆ ಎಂದು ಹೇಳಿದರು.ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ, ಬಡವರ, ದೀನ ದಲಿತರ, ನೊಂದವರ ಪರವಾಗಿ ಕೆಲಸ ಮಾಡಿದ್ದಾರೆ. ಕಳೆದ ೩೦ ವರ್ಷ ಗಳಿಂದ ದೇವೇಗೌಡ ಹಾಗೂ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಈ ಭಾಗದ ಜನ ಮಾಡಿದ್ದಾರೆ. ಕಷ್ಟದ ಕಾಲದಲ್ಲಿ ದೇವೇಗೌಡರ ಕೈ ಹಿಡಿದು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಅವರಿಗೂ ಕೂಡ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
೯೧ರ ವಯಸ್ಸಿನಲ್ಲಿ ಕೂಡ ಜಿಲ್ಲೆಯ ಜನರ ಒಳಿತಿಗಾಗಿ ಕೆಲಸ ಮಾಡುತ್ತಿರುವ ದೇವೇಗೌಡ ವಿರುದ್ಧ ತುಮಕೂರಿನಲ್ಲಿ ಸಚಿವರೊಬ್ಬರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಸಚಿವ ಕೆ.ಎನ್.ರಾಜಣ್ಣ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಮುಖಂಡರಾದ ಹೆರಗು ವಾಸುದೇವ್ ಇತರರು ಉಪಸ್ಥಿತರಿದ್ದರು.
ಅರಸೀಕೆರೆಯ ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಎಚ್.ಡಿ.ದೇವೇಗೌಡ ಉದ್ಘಾಟಿಸಿದರು.