ಸ್ವಾತಂತ್ರ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಜ್ಜು : ಎಲ್ಲೆಲ್ಲಿ ಸಂಚಾರ ನಿರ್ಬಂಧ

| N/A | Published : Aug 14 2025, 01:00 AM IST / Updated: Aug 14 2025, 10:31 AM IST

ಸ್ವಾತಂತ್ರ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಜ್ಜು : ಎಲ್ಲೆಲ್ಲಿ ಸಂಚಾರ ನಿರ್ಬಂಧ
Share this Article
  • FB
  • TW
  • Linkdin
  • Email

ಸಾರಾಂಶ

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ತಯಾರಿಯ ಪರಿಶೀಲನೆ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ , ನಗರದ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.

 ಬೆಂಗಳೂರು :  ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಮಟ್ಟದ 79ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ.

ಸ್ವಾತಂತ್ರ್ಯಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಅದಕ್ಕಾಗಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಸ್ವಾತಂತ್ರ್ಯ ದಿನಾಚರಣೆಗೆ ಮಾಣಿಕ್ ಷಾ ಪರೇಡ್ ಮೈದಾನ ಸಂಪೂರ್ಣ ಸಜ್ಜಾಗಿದ್ದು ಆ.15ರ ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಮೈದಾನಕ್ಕೆ ಆಗಮಿಸಲಿದ್ದು, 9ಕ್ಕೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ 79ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ..

ಇನ್ನು ಕೆಎಸ್ಆರ್‌ಪಿ, ಸಿಆರ್‌ಪಿಎಫ್, ಬಿಎಸ್ಎಫ್, ಗೋವಾ ಪೊಲೀಸ್ ತಂಡ ಸೇರಿ ವಿವಿಧ ಇಲಾಖೆಯ 35 ತುಕಡಿಗಳಲ್ಲಿ 1,150 ಮಂದಿ ಪಥ ಸಂಚಲನ ನಡೆಸಲಿದ್ದಾರೆ. ನಗರದ ಸರ್ಕಾರಿ ಮತ್ತು ಬಿಬಿಎಂಪಿಯ 1,150 ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಪೊಲೀಸ್‌ ಸಮೂಹ ವಾದ್ಯಮೇಳದ 253 ಅಧಿಕಾರಿ, ಸಿಬ್ಬಂದಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಮೈದಾನದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಚಾರ ನಿರ್ವಹಣೆ ಹಾಗೂ ಆಚರಣೆಗೆ ಆಗಮಿಸುವ ಗಣ್ಯರು ಮತ್ತು ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಕೆ ಮಾಡಿಕೊಂಡು ಆಗಮಿಸಬೇಕೆಂದು ಮನವಿ ಮಾಡಿದರು.

ಭದ್ರತೆಗಾಗಿ ಡಿಸಿಪಿ, ಎಸಿಪಿ, ಪೊಲೀಸ್ ಅಧಿಕಾರಿಗಳು, ಪಿಎಸ್ಐ, ಎಎಸ್ಐ, ಎಚ್ಸಿ, ಪಿಸಿ, ಮಹಿಳಾ ಪೊಲೀಸರು, ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಡಿಸಿಪಿ, ಎಸಿಪಿ, ಪೊಲೀಸ್ ಅಧಿಕಾರಿಗಳು, ಮಹಿಳಾ ಪಿಎಸ್ಐ, ಎಎಸ್ಐ, ಎಚ್ಸಿ,ಪಿಸಿ ಸೇರಿ ಒಟ್ಟು 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಮೈದಾನ ಸುತ್ತ ಭದ್ರತೆ ಮತ್ತು ಸುರಕ್ಷತೆಗಾಗಿ ಹೆಚ್ಚುವರಿ 100 ಸಿಸಿ ಕ್ಯಾಮೆರಾ ವ್ಯವಸ್ಥೆ, ಬ್ಯಾಗೇಜ್ ಸ್ಕ್ಯಾನರ್, ಕೆಎಸ್ಆರ್‌ಪಿ ಮತ್ತು ಸಿಆರ್ ತುಕಡಿ, ಎರಡು ಅಗ್ನಿಶಾಮಕ ವಾಹನ, ಎರಡು ಆ್ಯಂಬುಲೆನ್ಸ್ ವಾಹನ, ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಬ್ ನಿಷ್ಕ್ರಿಯ ದಳ ತಂಡ ನಿಯೋಜಿಸಲಾಗಿದೆ.

ಒಟ್ಟು 8 ಸಾವಿರ ಆಸನ:

ಅತಿ ಗಣ್ಯರಿಗೆ ಸೇರಿ ಒಟ್ಟು 8 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಜಿ-2 ಪ್ರವೇಶ ದ್ವಾರದಲ್ಲಿ ಗಣ್ಯ ವ್ಯಕ್ತಿಗಳಿಗೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗಾಗಿ 3 ಸಾವಿರ ಆಸನ ಕಲ್ಪಿಸಲಾಗಿದೆ. ಜಿ-4 ಪ್ರವೇಶ ದ್ವಾರದಲ್ಲಿ ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಗಳಿಗೆ 2 ಸಾವಿರ ಆಸನ ಮೀಸಲಿಡಲಾಗಿದೆ. ಬರುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಹ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.ಮೊದಲ ಬಾರಿ ಇ-ಪಾಸ್‌ ವ್ಯವಸ್ಥೆ ಸ್ವಾತಂತ್ರ್ಯೋತ್ಸವ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಮೊಟ್ಟಮೊದಲ ಬಾರಿಗೆ ಇ-ಪಾಸ್‌ ವಿತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಒಟ್ಟು 3 ಸಾವಿರ ಇ-ಪಾಸ್‌ ವಿತರಣೆ ಮಾಡಲಾಗುತ್ತಿದ್ದು, ಸೇವಾ ಸಿಂಧು ಪೋರ್ಟಲ್‌ನಲ್ಲಿ www.sevasindhu.karnataka.gov.in ನಲ್ಲಿ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ ಇ-ಪಾಸ್ ಅನ್ನು ಪಡೆಯಬಹುದು. ಇದು ಸಂಪೂರ್ಣವಾಗಿ ಉಚಿತ. ಗೇಟ್‌ ಸಂಖ್ಯೆ5 ರಲ್ಲಿ ಮೊಬೈಲ್‌ ಮೂಲಕ ತೋರಿಸಿ ಅಥವಾ ಇ-ಪಾಸ್‌ ಮುದ್ರಣವನ್ನು ಸಹ ಭದ್ರತಾ ಸಿಬ್ಬಂದಿಗೆ ತೋರಿಸಿ ಪ್ರವೇಶಿಸಬಹುದು. ಒಂದು ಇ-ಪಾಸ್‌ ಒಬ್ಬರ ಪ್ರವೇಶಕ್ಕೆ ಮಾತ್ರ.

ಸಾರ್ವಜನಿಕರಿಗೆ ಇ-ಪಾಸ್‌ ವಿತರಣೆ ಮಾಡುತ್ತಿರುವುದರಿಂದ ಮುದ್ರಿತ ಪಾಸ್‌ ವಿತರಿಸುವುದಿಲ್ಲ. ಗುರುವಾರ ಮಧ್ಯಾಹ್ನದ ವರೆಗೆ ಇ-ಪಾಸ್‌ ವಿತರಣೆ ಸಂಖ್ಯೆ ಪರಿಶೀಲಿಸಿ ಮುದ್ರಿತ ಪಾಸ್‌ ವಿತರಣೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಮುದ್ರಿತ ಪಾಸ್‌ಗಳನ್ನು ನಗರ ಜಿಲ್ಲಾಧಿಕಾರಿ ಕಚೇರಿ, ಸಹಾಯಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

ಸಾಂಸ್ಕೃತಿ ಕಾರ್ಯಕ್ರಮ ವಿವರರಾಜೇಶ್‌, ಡಿ.ಆರ್‌.ನಿರ್ಮಲಾ ಮತ್ತು ತಂಡದಿಂದ ನಾಡಗೀತೆ ಮತ್ತು ರೈತಗೀತೆ. ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 650 ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಸಂಗ್ರಾಮದ ವೀರ ಕನ್ನಡತಿಯರು ಹಾಗೂ ಶೇಷಾದ್ರಿಪುರ ಪದವಿ ಪೂರ್ವ ಕಾಲೇಜಿನ 500 ವಿದ್ಯಾರ್ಥಿಗಳಿಂದ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಕುರಿತು ನೃತ್ಯ ರೂಪಕಗಳ ಪ್ರದರ್ಶನ ನಡೆಯಲಿದೆ.

ಮಳೆ ಕಾರಣ ಸಾಹಸ ಪ್ರದರ್ಶನ ರದ್ದು

ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸೇನಾ ಪಡೆಯ ವೀರರಿಂದ ಪ್ಯಾರಾ ಮೋಟರ್ ಪ್ರದರ್ಶನ, ಮಲ್ಲಕಂಬ ಹಾಗೂ ಮೋಟರ್ ಸೈಕಲ್ ಪ್ರದರ್ಶನ ಸೇರಿದಂತೆ ಮೊದಲಾದ ವಿವಿಧ ರೀತಿಯ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಮಳೆ ಹಿನ್ನೆಲೆಯಲ್ಲಿ ಸಾಹಸ ಪ್ರದರ್ಶನ ರದ್ದು ಪಡಿಸಲಾಗಿದೆ.

ಮೈದಾನಕ್ಕೆ ಬರುವ ಸಾರ್ವಜನಿಕರಿಗೆ ಸೂಚನೆಗಳು* 15ರ ಬೆಳಗ್ಗೆ 8.30ರ ಒಳಗಾಗಿ ತಮ್ಮ ಆಸನದಲ್ಲಿ ಆಸೀನರಾಗಬೇಕು.*ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆಯಲ್ಲಿ ಆಗಮಿಸಿ ಗೇಟ್ 5.ರ ಮೂಲಕ ಪ್ರವೇಶ* ಯಾವುದೇ ಲಗೇಜ್ ಹಾಗೂ ಇತರೆ ವಸ್ತು ತರುವಂತಿಲ್ಲ* ಪರೇಡ್ ವೀಕ್ಷಣೆಗೆ ಆಗಮಿಸುವ ಆಹ್ವಾನಿತರು ಹಾಗೂ ಸಾರ್ವಜನಿಕರು ಮೊಬೈಲ್, ಹೆಲ್ಮೆಟ್, ಕ್ಯಾಮೆರಾ, ರೇಡಿಯೋ, ಕೊಡೆ ತರುವಂತಿಲ್ಲ.* ಸೆಲ್ಫಿ ತೆಗೆಯುವಂತಿಲ್ಲ* ಬಿಎಂಟಿಸಿ ಹಾಗೂ ಮೆಟ್ರೋ ಸೇವೆ ಬಳಸಬೇಕು* ಸಹಾಯಕ್ಕೆ112ಗೆ ಕರೆ ಮಾಡಿ ಅಥವಾ ಸ್ಥಳದಲ್ಲಿನ ಪೊಲೀಸರ ಸಂಪರ್ಕಿಸಿ* ಕುಡಿಯುವ ನೀರಿನ ವ್ಯವಸ್ಥೆಯಿದೆ

ನಿಷೇದಿಸಲಾದ ವಸ್ತುಗಳುಸಿಗರೇಟ್, ಬೆಂಕಿ ಪಟ್ಟಿಗೆ, ಕರಪತ್ರಗಳು, ಚಾಕು-ಚೂರಿ, ಹರಿತವಾದ ವಸ್ತುಗಳು, ತ್ರಿವರ್ಣ ಧ್ವಜ ಹೊರತು ಪಡಿಸಿ ಇತರೆ ಬಾವುಟ, ತಿಂಡಿ, ತಿನಿಸು, ಮದ್ಯದ ಬಾಟಲಿ, ಮಾದಕ ವಸ್ತು, ಶಸ್ತ್ರಾಸ್ತ್ರಗಳು, ಪಟಾಕಿ, ಸ್ಫೋಟಕ ವಸ್ತುಗಳು, ಬಣ್ಣದ ದ್ರವ, ವಿಡಿಯೋ ಹಾಗೂ ಸ್ಟಿಲ್‌ ಕ್ಯಾಮರಾ, ನೀರಿನ ಬಾಟಲಿ ಹಾಗೂ ಕ್ಯಾನ್‌ಗಳು.

ಅಂತಿಮ ಹಂತದ ತಾಲೀಮುಕಳೆದ ಮೂರು ದಿನಗಳಿಂದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪಥ ಸಂಚಲನದಲ್ಲಿ ಭಾಗವಹಿಸುವ ತಂಡಗಳು ತಾಲೀಮು ನಡೆಸುತ್ತಿವೆ. ಮಳೆಯ ನಡುವೆಯೇ ಕೆಲ ಸಮಯ ಮಕ್ಕಳು ತಾಲೀಮು ನಡೆಸಿದರು.

ಈ ರಸ್ತೆಗಳಲ್ಲಿ ಅಂದು ವಾಹನ ನಿಲುಗಡೆ ನಿಷೇಧ

* ಸೆಂಟ್ರಲ್ ಸ್ಟ್ರೀಟ್- ಅನಿಲ್‌ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣವರೆಗೆ

* ಕಬ್ಬನ್ ರಸ್ತೆ-ಸಿಟಿಓ ವೃತ್ತದಿಂದ ಕೆಆರ್‌ರಸ್ತೆ, ಕಬ್ಬನ್ ರಸ್ತೆ ಜಂಕ್ಷನ್ ವರೆಗೆ

* ಎಂಜಿ ರಸ್ತೆ- ಅನಿಲ್‌ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ

ಎಲ್ಲೆಲ್ಲಿ ಸಂಚಾರ ನಿರ್ಬಂಧ

* ಕಬ್ಬನ್ ರಸ್ತೆ-ಬಿಆರ್‌ವಿ ಜಂಕ್ಷನ್ - ಕಾಮರಾಜ ರಸ್ತೆ ಜಂಕ್ಷನ್ ಎರಡೂ ಬದಿ

* ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್‌ ಜಂಕ್ಷನ್ ಕಡೆ ವಾಹನಗಳ ಸಂಚಾರ ನಿರ್ಬಂಧ

ಪರ್ಯಾಯ ಸಂಚಾರ ವ್ಯವಸ್ಥೆ

* ಇನ್ ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆ ಸಂಚರಿಸುವ ವಾಹನಗಳು ನೇರವಾಗಿ ಇನ್ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾ ಬಳಿ ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ ಮೂಲಕ ಡಿಕನ್ಸನ್ ರಸ್ತೆ ಜಂಕ್ಷನ್ ಮೂಲಕ ಕಾಮರಾಜ ರಸ್ತೆ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆ ಮಣಿಪಾಲ್ ಸೆಂಟರ್ ಕಡೆಗೆ ಸಾಗುವುದು.

*ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್‌ ಜಂಕ್ಷನ್ ಕಡೆ ವಾಹನಗಳು, ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂಜಿ ರಸ್ತೆ ಮೂಲಕ ಮೆಯೋಹಾಲ್, ಕಾವೇರಿ ಎಂಪೋರಿಯಂ, ಅನಿಲ್‌ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಸಾಗುವುದು.

* ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆ ಕಡೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್‌ ಸ್ಟ್ರೀಟ್‌ನಲ್ಲಿ ಸಾಗಿ ಬಲಕ್ಕೆ ತಿರುವು ಪಡೆದು ಇನ್‌ಫಂಟ್ರಿ ರಸ್ತೆ- ಸಫೀನಾ ಪ್ಲಾಜಾ ಬಳಿ ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ ಮೂಲಕ ಡಿಕನ್ಸನ್ ರಸ್ತೆ ಜಂಕ್ಷನ್ ಮೂಲಕ ಕಾಮರಾಜ ರಸ್ತೆ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆ ಮಣಿಪಾಲ್ ಸೆಂಟರ್ ಕಡೆಗೆ ಸಾಗುವುದು.

Read more Articles on