ಮಣಿಪಾಲ ಕಾಲೇಜ್‌ ಆಫ್ ನರ್ಸಿಂಗ್‌: ಅಂತಾರಾಷ್ಟ್ರೀಯ ಸಮ್ಮೇಳನ

| Published : Jul 10 2025, 12:46 AM IST

ಸಾರಾಂಶ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಇದರ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ (ಎಂಸಿಒಎನ್) ಮತ್ತು ಕೆನಡದ ಯುನಿವರ್ಸಿಟಿ ಆಫ್ ನ್ಯೂ ಬ್ರನ್ಸ್‌ವಿಕ್ (ಯುಎನ್‌ಬಿ) ಸಹಯೋಗದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಇದರ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ (ಎಂಸಿಒಎನ್) ಮತ್ತು ಕೆನಡದ ಯುನಿವರ್ಸಿಟಿ ಆಫ್ ನ್ಯೂ ಬ್ರನ್ಸ್‌ವಿಕ್ (ಯುಎನ್‌ಬಿ) ಸಹಯೋಗದಲ್ಲಿ ‘ಆರೋಗ್ಯದಲ್ಲಿ ಸಮಾನತೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ : ಶಿಕ್ಷಣ, ಸಂಶೋಧನೆ ಮತ್ತು ಅಧ್ಯಯನದಲ್ಲಿ ಜಾಗತಿಕ ಸಹಭಾಗಿತ್ವದ ಭವಿಷ್ಯವನ್ನು ಚಿತ್ರಿಸುವುದು’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ನಡೆಯಿತು. ಮಾಹೆಯ ಉಪಕುಲಪತಿ ಲೆ.ಜ. ಡಾ. ಎಂ.ಡಿ. ವೆಂಕಟೇಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿಯ ಗುರಿ, ಶಿಕ್ಷಣದಲ್ಲಿ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಮಾಹೆಯ ಬದ್ಧತೆಯನ್ನು ಒತ್ತಿ ಹೇಳುತ್ತಾ, ಎಂಸಿಒಎನ್ ಮತ್ತು ಯುಎನ್‌ಬಿ ನಡುವೆ ದೀರ್ಘಕಾಲದ ಪರಿಣಾಮಕಾರಿ ಸಹಭಾಗಿತ್ವವನ್ನೂ ಪ್ರಶಂಸಿಸಿದರು.ಸಮ್ಮೇಳನದ ಸಂಘಟನಾ ಅಧ್ಯಕ್ಷೆ ಹಾಗೂ ಯುಎನ್‌ಬಿ ನರ್ಸಿಂಗ್ ಫ್ಯಾಕಲ್ಟಿಯ ಡೀನ್ ಡಾ. ಲೋರ್ನಾ ಬಟ್ಲರ್ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಗಳಲ್ಲಿ ಪ್ರತಿಸ್ಪಂದಿಸುವ ಮತ್ತು ಒಳಗೊಳ್ಳುವಿಕೆ ಅಗತ್ಯವಿದೆ ಎಂದು ಹೇಳಿ ನರ್ಸಿಂಗ್‌ ಕ್ಷೇತ್ರಕ್ಕೆ ಜಾಗತಿಕ ದೃಷ್ಟಿಕೋನದ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದರು.

ಸಮ್ಮೇಳನದ ಸಂಯೋಜಕಿ, ಎಂಸಿಓಎನ್ ಇದರ ಫಂಡಮೆಂಟಲ್ ಆಫ್ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಡಾ. ಲಿನು ಸಾರಾ ಜಾರ್ಜ್ ಸಮ್ಮೇಳನದ ಉದ್ದೇಶ ವಿವರಿಸಿದರು. ಸಮ್ಮೇಳನದ ಆಯೋಜನಾ ಅಧ್ಯಕ್ಷೆ ಹಾಗೂ ಎಂಸಿಒಎನ್‌ನ ಡೀನ್ ಡಾ. ಜ್ಯುಡಿತ್ ಎ. ನೋರೋನ್ಹಾ ಸ್ವಾಗತಿಸಿದರು. ಸಹ ಸಂಯೋಜಕಿ ಡಾ. ರಾಧಿಕಾ ಆರ್. ಪೈ ವಂದಿಸಿದರು.ಎರಡು ದಿನಗಳ ಸಮ್ಮೇಳನದಲ್ಲಿ ಭಾರತದಿಂದ ಮತ್ತು ವಿದೇಶಗಳಿಂದ 230ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಜ್ಞರಿಂದ ಉಪನ್ಯಾಸ, ವಿಚಾರಗೋಷ್ಠಿಗಳು ನಡೆದವು.