ಉಡುಪಿ: ಸಾಮಾಜಿಕ ಜಾಗೃತಿ ಉದ್ದೇಶದಿಂದ ಕೆನರಾ ಬ್ಯಾಂಕ್ ಆಯೋಜಿಸುತ್ತಿರುವ 5ನೇ ಆವೃತ್ತಿಯ ಸ್ವಾತಂತ್ರ್ಯ ಓಟ (ಫ್ರೀಡಂ ರನ್) ಸ್ಪರ್ಧೆಯ ಆ. 9ರಂದು (ಭಾನುವಾರ) ಮಣಿಪಾಲದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಸಚಿನ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಫ್ರೀಡಂ ರನ್ ಅನ್ನು ‘ಗೋ ಗ್ರೀನ್’ ಎಂಬ ವಿಷಯದಡಿ ಆಯೋಜಿಸಲಾಗಿದ್ದು, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ 21 ಕಿ.ಮೀ., 10 ಕಿ.ಮೀ., 5 ಕಿ.ಮೀ., 3ಕಿ.ಮೀ. ಹಾಗೂ ಫನ್ ರನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಬೆಳಿಗ್ಗೆ 5 ಗಂಟೆಗೆ ಮಣಿಪಾಲದಲ್ಲಿ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಆವರಣದಲ್ಲಿ ಫ್ರೀಡಂ ರನ್‌ಗೆ ಚಾಲನೆ ನೀಡಲಾಗುವುದು, ವಿಜೇತರಿಗೆ ಒಟ್ಟು 5 ಲಕ್ಷ ರು. ನಗದು ಬಹುಮಾನಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಸ್ಥಳದಲ್ಲಿಯೂ ನೋಂದಣಿಗೆ ಅವಕಾಶ ಇದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. ಅಧಿಕಾರಿಗಳಾದ ದುರ್ಗಾಪ್ರಸಾದ್, ಸೂರಜ್ ಉಪ್ಯೂರು, ಸಿದ್ದಾರ್ಥ್ ಮೊದಲಾದವರು ಉಪಸ್ಥಿತರಿದ್ದರು.