ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.ಸಂಸ್ಥೆಯ ಸ್ಥಾಪಕರಾದ ಮೇರು ವ್ಯಕ್ತಿತ್ವದ ದಿ. ಶಾರದಾ ಟಿ. ಪೈ ಮತ್ತು ದಿ. ಡಾ. ಟಿಎಂಎ ಪೈ ಅವರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಂತರ ವಿವಿಧ ಚರ್ಚಾ ಗೋಷ್ಠಿಗಳು, ಸಮ್ಮಾನ, ಅಭಿನಂದನೆಗಳು ಮತ್ತು ಆಕರ್ಷಕ ಪ್ರದರ್ಶನಗಳು ನಡೆದವು.ಇದೇ ಸಂದರ್ಭದಲ್ಲಿ ಕ್ರೀಡೆಯೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳಿಗೆ ಉತ್ತೇಜನ ನೀಡುವ ಮಾಹೆ ವಿಶ್ವವಿದ್ಯಾಲಯದ ಬದ್ಧತೆಯ ಸಂಕೇತವಾಗಿ ‘ಹರ್ ವರ್ಲ್ಡ್ ಹರ್ ರೂಲ್ಸ್’ ಮತ್ತು ‘ವುಮೆನ್ಸ್ ಬಾಸ್ಕೆಟ್ ಬಾಲ್ ಕ್ಲಿನಿಕ್’ಗಳಿಗೆ ಚಾಲನೆ ನೀಡಲಾಯಿತು.ಮುಖ್ಯ ಅತಿಥಿ ಬೆಂಗಳೂರಿನ ಇಸ್ರೋ ಕೇಂದ್ರದ ವಿಜ್ಞಾನಿ ಡಾ.ಶ್ಯಾಮ ನರೇಂದ್ರನಾಥ್ ಕೆ.ಸಿ. ಅವರ ಸಾಧನೆಗಾಗಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ಸಮಾಜಕ್ಕೆ ಕೊಡುಗೆ ನೀಡಿದ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಶ್ಲಾಘಿಸಬೇಕು. ಅಡೆತಡೆಗಳಿದ್ದರೂ ಮಹಿಳೆಯು ಸಾಧನೆಯ ಮೂಲಕ ತನ್ನ ಗುರುತು ಸಮಾಜದಲ್ಲಿ ಉಳಿಸಿಕೊಳ್ಳಬೇಕು ಎಂದು ಆಶಿಸಿದರು.ಮಾಹೆಯ ಉಪಕುಲಪತಿ ಲೆ. ಜ. (ಡಾ) ಎಂ.ಡಿ. ವೆಂಕಟೇಶ್, ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಉಪಸ್ಥಿತರಿದ್ದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ ಅಧ್ಯಕ್ಷತೆ ವಹಿಸಿದ್ದರು.ಎಂಐಟಿ ವಿದ್ಯಾರ್ಥಿಗಳಿಂದ ಮನಮೋಹಕ ನೃತ್ಯ ಪ್ರದರ್ಶನಗಳು ಮತ್ತು ಡಾ. ಎಲ್ಸಾ ಮತ್ತು ಅವರ ತಂಡದಿಂದ ಈಶಾನ್ಯ ಭಾರತೀಯ ಸಂಸ್ಕೃತಿಯ ರೋಮಾಂಚಕ ಕಲಾ ಪ್ರದರ್ಶನದ ಮೂಲಕ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು.
ಅಲುಮ್ನಿ ರಿಲೇಶನ್ಸ್ ನಿರ್ದೇಶಕ ಡಾ. ರೋಹಿತ್ ಸಿಂಗ್ ವಂದಿಸಿದರು. ಮಣಿಪಾಲ ಕೆಎಂಸಿಯ ಡಾ.ರೀನಾ ಶೆರಿನ್ ಪರ್ವೀನ್ ಅವರು ಕಾರ್ಯಕ್ರಮ ನಿರೂಪಿಸಿದರು.