ಮಣಿಪಾಲ: ವಿಶ್ವ ಪರಿಸರ ದಿನ 2026 ರ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಶುಕ್ರವಾರ ರೋಗಿಗಳು ಮತ್ತು ಅವರ ಸಹಾಯಕರಿಗೆ 5,000 ಕ್ಕೂ ಹೆಚ್ಚು ಹಣ್ಣು ಬಿಡುವ ಮತ್ತು ಔಷಧೀಯ ಸಸ್ಯಗಳ ಸಸಿಗಳನ್ನು ವಿತರಿಸುವ ಮೂಲಕ ವಿಶಿಷ್ಟ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿತು.ವಿಶ್ವಸಂಸ್ಥೆ ಈ ಬಾರಿಯ ವಿಶ್ವ ಪರಿಸರ ದಿನಾಚರಣೆಗೆ ಪ್ರಕೃತಿಯಿಂದ ಪ್ರೇರಿತ ಪರಿಸರ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬ ಧ್ಯೇಯವಾಕ್ಯ ನೀಡಿದೆ. ಅದರಂತೆ, ಕಸ್ತೂರ್ಬಾ ಆಸ್ಪತ್ರೆಯು ಪ್ರತಿಯೊಬ್ಬ ರೋಗಿಯ ಕೈಯಲ್ಲಿ ಪರಿಸರ ಜವಾಬ್ದಾರಿಯ ಜೀವಂತ ಸಂಕೇತ ವಾದ ಗಿಡಗಳನ್ನು ನೀಡುವ ಮೂಲಕ ಆರೋಗ್ಯ ರಕ್ಷಣೆಯನ್ನು ಮೀರಿ ಸಮುದಾಯ ಯೋಗಕ್ಷೇಮದ ಕಾಳಜಿ ಸಾಕಾರಗೊಳಿಸಿತು.
ಗಿಡಗಳನ್ನು ವಿತರಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಆಸ್ಪತ್ರೆಗಳು ಮನುಷ್ಯರನ್ನು ರಕ್ಷಿಸುವುದಕ್ಕಾಗಿ ಇವೆ. ಇಂದು ನಾವು ಪ್ರಕೃತಿಯನ್ನು ಪೋಷಿಸುವ ಮೂಲಕ ನಮ್ಮ ಕರ್ತವ್ಯವನ್ನು ನಿಭಾಯಿಸಿದ್ದೇವೆ. ವಿತರಿಸಲಾದ ಪ್ರತಿಯೊಂದು ಸಸಿಯೂ ಭರವಸೆ, ಬೆಳವಣಿಗೆ ಮತ್ತು ಪರಿಸರದ ಬಗ್ಗೆ ನಮ್ಮ ಜವಾಬ್ದಾರಿಯನ್ನು ಪ್ರತಿನಿಧಿಸುತ್ತದೆ ಎಂದರು.ರೋಗಿಗಳಲ್ಲಿ ಅನೇಕರು ಆರೋಗ್ಯ, ಸುಸ್ಥಿರತೆ ಮತ್ತು ಜನರ ಪಾಲ್ಗೊಳ್ಳುವುದಕ್ಕೆ ಆಸ್ಪತ್ರೆಯ ಚಿಂತನಶೀಲ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಒಂದೇ ದಿನದಲ್ಲಿ 5,000 ಸಸಿಗಳನ್ನು ವಿತರಿಸುವ ಮೂಲಕ, ಕಸ್ತೂರ್ಬಾ ಆಸ್ಪತ್ರೆಯು ಪರಿಸರ ಪರಿಸರ ಸಂರಕ್ಷಣೆಗೆ ತನ್ನ ಬದ್ಧತೆಯನ್ನು ಬಲಪಡಿಸಿತು.