ಮಣಿಪಾಲ ಕೆಎಂಸಿ: ಪುರುಷರ ಬಂಜೆತನ ಪರಿಹಾರೋಪಾಯ ಸಮ್ಮೇಳನ

| Published : Mar 01 2025, 01:03 AM IST

ಮಣಿಪಾಲ ಕೆಎಂಸಿ: ಪುರುಷರ ಬಂಜೆತನ ಪರಿಹಾರೋಪಾಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಕೆಎಂಸಿ) ಕ್ಲಿನಿಕಲ್ ಎಂಬ್ರಿಯಾಲಜಿ ಕೇಂದ್ರವು ಜರ್ಮನಿಯ ಮೂಯೆನ್ಸ್ಟರ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಕೇಂದ್ರದ ಸಹಯೋಗದಲ್ಲಿ ಟ್ರಾನ್ಸ್ಲೇಷನಲ್ ಆಂಡ್ರಾಲಜಿ ಕುರಿತ 2ದಿನಗಳ ಇಂಡೋ-ಜರ್ಮನ್ ಸಮ್ಮೇಳನ ಶುಕ್ರವಾರ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಕೆಎಂಸಿ) ಕ್ಲಿನಿಕಲ್ ಎಂಬ್ರಿಯಾಲಜಿ ಕೇಂದ್ರವು ಜರ್ಮನಿಯ ಮೂಯೆನ್ಸ್ಟರ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಕೇಂದ್ರದ ಸಹಯೋಗದಲ್ಲಿ ಟ್ರಾನ್ಸ್ಲೇಷನಲ್ ಆಂಡ್ರಾಲಜಿ ಕುರಿತ 2ದಿನಗಳ ಇಂಡೋ-ಜರ್ಮನ್ ಸಮ್ಮೇಳನ ಶುಕ್ರವಾರ ಆರಂಭವಾಯಿತು.

ಈ ಸಂದರ್ಭದಲ್ಲಿ ಮಾಹೆಯ ಸಹಉಪಕುಲಪಚಿ ಡಾ. ಶರತ್‌ರಾವ್ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.

ಈ ಕಾರ್ಯಾಗಾರವು ಮುಖ್ಯವಾಗಿ ಪುರುಷರ ಬಂಜೆತನದ ಪರಿಹಾರೋಪಾಯಗಳ ಬಗ್ಗೆ ನಡೆಯಲಿದ್ದು, ಇಂತಹ ಕಾರ್ಯಾಗಾರವು ಪ್ರಥಮ ಬಾರಿಗೆ ನಡೆಯುತ್ತಿದೆ. ಇದರಲ್ಲಿ ಭಾರತ ಮತ್ತು ಜರ್ಮನಿಯ ಸುಮಾರು 40 ಮಂದಿ ಸಂಶೋಧಕರು ತಮ್ಮ ಅನುಭವ ತಜ್ಞತೆಯನ್ನು ಹಂಚಿಕೊಳ್ಳಲಿದ್ದಾರೆ.

ವಿಶ್ವದಾದ್ಯಂತ ಇನ್ನೂ ಬಂಜೆತನವನ್ನು ಒಪ್ಪಿಕೊಳ್ಳಲು ಪುರುಷರು ಮಾನಸಿಕವಾಗಿ ಸಿದ್ಧರಾಗಿಲ್ಲ. ಭಾರತದಲ್ಲಿ ಪುರುಷ ಬಂಜೆತನ ಕಡಿಮೆ ಇದ್ದರೂ ವಿಶ್ವದಾದ್ಯಂತ ಶೇ 15ಕ್ಕೂ ಹೆಚ್ಚಿದೆ. ಮಾನಸಿಕ ಒತ್ತಡ, ಮದ್ಯಪಾನ, ಧೂಮಪಾನ, ಮಾದರ ದ್ರವ್ಯ ಸೇವನೆ, ಹಾರ್ಮೋನ್‌ಗಳಲ್ಲಿ ವ್ಯತ್ಯಯ, ವಿಪರೀತ ಕಂಪ್ಯೂಟರ್ ಬಳಕೆ, ತಡವಾಗಿ ವಿವಾಹ, ಚಿಕ್ಕ ವಯಸ್ಸಿನಲ್ಲಿ ಕ್ಯಾನ್ಸರ್‌ ಮತ್ತದರ ಚಿಕಿತ್ಸೆ ಇತ್ಯಾದಿ ಕಾರಣದಿಂದ ಪುರುಷರಲ್ಲಿ ಬಂಜೆತನ ಹೆಚ್ಚುತ್ತಿದೆ ಮತ್ತು ಮತ್ತು ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಈ ಸಮಸ್ಯೆಯ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಈ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.

ಈ ಸಮಸ್ಯೆಯ ಪರಿಹಾರಕ್ಕೆ ಮೊದಲ ಹೆಜ್ಜೆಯಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮತ್ತು ಜರ್ಮಿನಿಯ ಮೂಯೆನ್ಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ವೀರ್ಯಗಳನ್ನು ಸಂರಕ್ಷಿಸುವ ಕೇಂದ್ರ ಸ್ಥಾಪಿಸಲಾಗಿದೆ ಎಂದವರು ಹೇಳಿದರು.

ಮಣಿಪಾಲದ ಕೆಎಂಸಿಯ ಕ್ಲಿನಿಕಲ್ ಎಂಬ್ರಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಸತೀಶ್‌ ಅಡಿಗ ಅವರು ಮಾತನಾಡಿ, ಭಾರತದಲ್ಲಿ ಸುಮಾರು 2 ಕೋಟಿ ದಂಪತಿಗಳಿಗೆ ಸಂತಾನೋತ್ಪತ್ತಿಗೆ ವೈದ್ಯಕೀಯ ನೆರವಿನ ಅಗತ್ಯವಿದೆ. ನಮ್ಮ ದೇಸದಲ್ಲಿ ಪುರುಷರ ಬಂಜೆನತದ ಬಗ್ಗೆ ಅಧ್ಯಯನ ಸೀಮಿತವಾಗಿದ್ದು, ಅದಕ್ಕೆ ಈ ಕಾರ್ಯಾಗಾರ ನೆರವಾಗಲಿದೆ ಎಂದರು.

ಜರ್ಮನಿಯ ಮುಯೆನ್‌ಸ್ಟರ್ ನ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಕೇಂದ್ರದ ನಿರ್ದೇಶಕ ಪ್ರೊ ಡಾ. ಸ್ಟೀಫನ್ ಶ್ಲಾಟ್, ಜಸ್ಟಸ್ ಲೀಬಿಗ್ ವಿಶ್ವವಿದ್ಯಾಲಯದ ಪ್ರೊ. ಡಾ ಆಂಡ್ರಿಯಾಸ್ ಮೈನ್ಹಾರ್ಡ್, ಜರ್ಮನಿಯ ಸೆಂಟರ್ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಮತ್ತು ಆಂಡ್ರಾಲಜಿಯ ಲೈಂಗಿಕ ಔಷಧದಲ್ಲಿ ತಜ್ಞರಾದ ಡಾ. ಕ್ಲೌಡಿಯಾ ಕ್ರಾಲ್ಮನ್ ಇದ್ದರು.