ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ರಕ್ತಶಾಸ್ತ್ರ ಮತ್ತು ರಕ್ತ ವರ್ಗಾವಣೆ ವಿಭಾಗ ಹಾಗೂ ಕ್ವಿಡೆಲ್ ಆರ್ಥೋ ಕೇಂದ್ರದ ಸಹಯೋಗದಲ್ಲಿ ‘ಲೀನ್ ಸಿಕ್ಸ್ ಸಿಗ್ಮಾ ಇನ್ ಟ್ರಾನ್ಸ್‌ಫ್ಯೂಷನ್ ಮೆಡಿಸಿನ್’ ಕುರಿತು ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು. ಇದು ಭಾರತದಲ್ಲಿ ರಕ್ತ ವರ್ಗಾವಣೆ ಕ್ಷೇತ್ರದಲ್ಲಿ ನಡೆದ ಮೊದಲ ಕಾರ್ಯಾಗಾರವಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಆರೋಗ್ಯ ಸೇವೆಯಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸುವ ಸಂಸ್ಥೆಯ ಬದ್ಧತೆ ಒತ್ತಿ ಹೇಳಿದರು. ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಮೋಹನ್ ಸ್ವಾಗತಿಸಿ, ಪ್ರಯೋಗಾಲಯ ಮತ್ತು ರಕ್ತ ವರ್ಗಾವಣೆ ಪದ್ಧತಿಗಳಲ್ಲಿ ನಿರಂತರ ಕಲಿಕೆ ಹಾಗೂ ಗುಣಮಟ್ಟ ಸುಧಾರಣೆಯ ಮಹತ್ವದ ಕುರಿತು ಮಾತನಾಡಿದರು.ಆಸ್ಪತ್ರೆಯ ರಕ್ತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಸಂಯೋಜಕಿ ಡಾ. ಶಮೀ ಶಾಸ್ತ್ರಿ, ಈ ಕಾರ್ಯಾಗಾರವು ಲೀನ್ ಸಿಕ್ಸ್ ಸಿಗ್ಮಾ ತತ್ವಗಳನ್ನು ರಕ್ತ ವರ್ಗಾವಣೆ ವಿಜ್ಞಾನದಲ್ಲಿ ಬಳಸುವ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಈ ಕಾರ್ಯಾಗಾರವು ಕೈಗಾರಿಕೆ ಮತ್ತು ಶೈಕ್ಷಣಿಕ ಸಹಯೋಗದ ಫಲಿತಾಂಶವಾಗಿದ್ದು, ದಕ್ಷತೆಯನ್ನು ಹೆಚ್ಚಿಸಲು, ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ರಕ್ತ ವರ್ಗಾವಣೆ ಸೇವೆಗಳಲ್ಲಿ ನಿಖರತೆ ಖಚಿತಪಡಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಅಮೇರಿಕನ್ ಸೊಸೈಟಿ ಫಾರ್ ಕ್ವಾಲಿಟಿಯ ಪ್ರಮಾಣೀಕೃತ ತರಬೇತುದಾರ ಅಭಿಷೇಕ್ ಬುಧರಾಜ ತರಬೇತಿ ನಡೆಸಿಕೊಟ್ಟರು. ಅವರು ರಕ್ತ ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಅನ್ವಯವಾಗುವ ಲೀನ್ ಸಿಕ್ಸ್ ಸಿಗ್ಮಾದ ಕುರಿತು ಪ್ರಾಯೋಗಿಕ ಪರಿಕರಗಳು ಮತ್ತು ವಿಧಾನಗಳ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಕ್ವಿಡೆಲ್ ಆರ್ಥೋದ ಡಾ. ಶಿಖಾ ಮಲ್ಹೋತ್ರಾ ಮತ್ತು ಕಮಲ್ ಕಾರ್ಯ ಉಪಸ್ಥಿತರಿದ್ದರು. ಡಾ. ದೀಪಿಕಾ ಚೆನ್ನಾ ವಂದಿಸಿದರು.ಭಾರತದಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರದ ಭಾಗವಹಿಸಿದವರು ತಂತಮ್ಮ ಕೇಂದ್ರಗಳಲ್ಲಿ ಲೀನ್ ಸಿಕ್ಸ್ ಸಿಗ್ಮಾ ಪರಿಕಲ್ಪನೆಗಳನ್ನು ಕಾರ್ಯಗತಗೊಳಿಸಲು 100 ದಿನಗಳ ಯೋಜನೆ ಕೈಗೊಳ್ಳಲಿದ್ದಾರೆ ಎಂದು ಕೆಎಂಸಿ ಪ್ರಕಟಣೆ ತಿಳಿಸಿದೆ.