ಬೇಲೂರು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮಂಜುನಾಥ್

| Published : Nov 18 2024, 12:04 AM IST

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಆರ್‌.ಮಂಜುನಾಥ್, ರಾಜ್ಯ ಪರಿಷತ್ತು ಸದಸ್ಯ ಪಶುಪಾಲನಾ ಇಲಾಖೆಯ ಜಿ.ಆರ್.ರವಿ ಚುನಾಯಿತರಾದರು. ಖಜಾಂಚಿ ಸ್ಥಾನಕ್ಕೂ ಚುನಾವಣೆ ನಡೆಯಬೇಕಿತ್ತಾದರೂ, ಶಿಕ್ಷಕ ಎಚ್.ಆರ್‌.ಪೂರ್ಣೇಶ್ ಅವರು ಅವಿರೋಧ ಆಯ್ಕೆಯಾಗಿದ್ದರು. ಉಳಿದ ಸ್ಥಾನಗಳ ಪದಾಧಿಕಾರಿಗಳ ಆಯ್ಕೆ ಮಾಡಿಕೊಳ್ಳಲು ಅಧ್ಯಕ್ಷರಿಗೆ ಅವಕಾಶ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಆರ್‌.ಮಂಜುನಾಥ್, ರಾಜ್ಯ ಪರಿಷತ್ತು ಸದಸ್ಯ ಪಶುಪಾಲನಾ ಇಲಾಖೆಯ ಜಿ.ಆರ್.ರವಿ ಚುನಾಯಿತರಾದರು.

ಚುನಾವಣೆಯಲ್ಲಿ ೩೩ ನಿರ್ದೇಶಕರ ಪೈಕಿ ಶಿಕ್ಷಕ ಆರ್.ಮಂಜುನಾಥ್ ೨೪ ಮತಗಳನ್ನು ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಖಜಾನೆ ಇಲಾಖೆಯ ಕೃಷ್ಣೇಗೌಡ ಅವರು, ೯ ಮತಗಳನ್ನು ಪಡೆದರು. ರಾಜ್ಯ ಪರಿಷತ್ತು ಚುನಾವಣೆಯಲ್ಲಿ ಪಶುಪಾಲನ ಇಲಾಖೆಯ ಜಿ.ಆರ್.ರವಿ, ೧೯ ಮತಗಳನ್ನು ಪಡೆದು ಜಯಗಳಿಸಿದರೆ, ಕಂದಾಯ ಇಲಾಖೆಯ ರಮೇಶ್ ೧೪ ಮತಗಳನ್ನು ಪಡೆದುಕೊಂಡರು.ಖಜಾಂಚಿ ಸ್ಥಾನಕ್ಕೂ ಚುನಾವಣೆ ನಡೆಯಬೇಕಿತ್ತಾದರೂ, ಶಿಕ್ಷಕ ಎಚ್.ಆರ್‌.ಪೂರ್ಣೇಶ್ ಅವರು ಅವಿರೋಧ ಆಯ್ಕೆಯಾಗಿದ್ದರು. ಉಳಿದ ಸ್ಥಾನಗಳ ಪದಾಧಿಕಾರಿಗಳ ಆಯ್ಕೆ ಮಾಡಿಕೊಳ್ಳಲು ಅಧ್ಯಕ್ಷರಿಗೆ ಅವಕಾಶ ನೀಡಲಾಗಿದೆ. ಚುನಾವಣಾಧಿಕಾರಿಯಾಗಿ ಮುಳ್ಯಯ್ಯ ಅವರು ಕಾರ್ಯ ನಿರ್ವಹಿಸಿದರು.ಜಯಗಳಿಸಿದ ನಂತರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದಲ್ಲದೆ, ಬಸವೇಶ್ವರರ ಪುತ್ಥಳಿ, ಡಾ.ಅಂಬೇಡ್ಕರ್‌ ಪುತ್ಥಳಿ, ಮಾಗಡಿ ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಧ್ಯಕ್ಷ ಆರ್‌.ಮಂಜುನಾಥ್ ತಂಡದವರು ಗೌರವ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷ ಆರ್‌.ಮಂಜುನಾಥ್, ಜಯಗಳಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿ, ಸರ್ಕಾರಿ ನೌಕರರ ಸಂಘ ಹಾಗೂ ನೌಕರರ ಹಿತ ಕಾಯಲು ಬದ್ಧನಾಗಿದ್ದೇನೆ. ಪ್ರಮುಖವಾಗಿ ೭ನೇ ವೇತನ ಆಯೋಗದಲ್ಲಿ ಇರುವ ನ್ಯೂನ್ಯತೆಗಳು ಹಾಗೂ ನೂತನ ಪಿಂಚಣಿ ಯೋಜನೆ ರದ್ದತಿಗೆ ರಾಜ್ಯ ಸಂಘದ ಸೂಚನೆಯಂತೆ ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು. ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಲೋಕೇಗೌಡ ಮಾತನಾಡಿದರು.