ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ವೇಳೆ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಪಾರ್ಥಿವ ಶರೀರವನ್ನು ಗುರುವಾರ ತವರೂರಿಗೆ ಬರಮಾಡಿಕೊಂಡು ಗೌರವ ಸಲ್ಲಿಸಲಾಯಿತು.

ಶಿವಮೊಗ್ಗ: ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ವೇಳೆ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಪಾರ್ಥಿವ ಶರೀರವನ್ನು ಗುರುವಾರ ತವರೂರಿಗೆ ಬರಮಾಡಿಕೊಂಡು ಗೌರವ ಸಲ್ಲಿಸಲಾಯಿತು.

ಬಳಿಕ ರೋಟರಿ ಚಿತಗಾರದಲ್ಲಿ ಮಂಜುನಾಥ್ ರಾವ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಪುತ್ರ ಅಭಿಜೇಯ್ ಬ್ರಾಹ್ಮಣ ಸಂಪ್ರದಾಯದಂತೆ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಮಂಜುನಾಥ್‌ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಆಂಬುಲೆನ್ಸ್ ಮೂಲಕ ನಗರಕ್ಕೆ ತರಲಾಯಿತು. ನಗರದ ಹೊಳೆ ಬಸ್ ನಿಲ್ದಾಣದಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರ ನೇತೃತ್ವದಲ್ಲಿ ಬೈಕ್ ರ್‍ಯಾಲಿಯಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ವಿಜಯನಗರ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು.

ಪ್ರಾರ್ಥಿವ ಶರೀರದೊಂದಿಗೆ ಅವರ ಪುತ್ರ ಅಭಿಜೇಯ್‌ ಮತ್ತು ಪತ್ನಿ ಪಲ್ಲವಿ ಅಂಬ್ಯುಲೆನ್ಸ್‌ನಲ್ಲಿ ಜೊತೆಗಿದ್ದರು. ಬರುವ ಹಾದಿ ಮಧ್ಯೆ ಅಲ್ಲಲ್ಲಿ ಮಂಜುನಾಥ್ ಅವರ ಪಾರ್ಥಿವ ಶರೀರಕ್ಕೆ ಸಾರ್ವಜನಿಕರು ಹೂವಿನ ಹಾರ ಹಾಕಿ ಗೌರವ ಸಮರ್ಪಿಸಿ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ದೇಶ ಪ್ರೇಮವನ್ನು ಮೆರೆದರು.

ಶಿವಮೊಗ್ಗಕ್ಕೆ ಅವರ ಮನೆಗೆ ಮೃತ ಮಂಜುನಾಥ್‌ ರಾವ್‌ ಅವರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಮೊದಲಿಗೆ ಮೃತ ಮಂಜುನಾಥ್‌ ಅವರ ತಾಯಿ ದರ್ಶನ ಮಾಡಿದ ಬಳಿಕ ಕೆಲವು ವಿಧಿ-ವಿಧಾನಗಳನ್ನು ಪೂರೈಸಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮನೆಯ ಸುತ್ತಮುತ್ತ ಪೊಲೀಸ್‌ ಬ್ಯಾರಿಕೇಡ್‌:

ಇದಕ್ಕೂ ಮೊದಲು ಮನೆಯ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು.

ನಗರದ ಸಹಸ್ರಾರು ಜನರು ಪಾರ್ಥಿವಶರೀರದ ದರ್ಶನಕ್ಕೆ ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಧಿಕಾರಿಗಳು ಅಂತಿಮ ದರ್ಶನ ಪಡೆದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್, ಧನಂಜಯಸರ್ಜಿ, ಬಲ್ಕೀಶ್ ಭಾನು ಹಾಗೂ ಪ್ರಮುಖರಾದ ಎಸ್.ದತ್ತಾತ್ರಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೂರ್ವವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ಜಿ.ಕೆ.ಮಿಥುನ್‍ಕುಮಾರ್, ಎಎಸ್ಪಿ ಕಾರ್ಯಪ್ಪ, ಅನಿಲ್‍ಕುಮಾರ್, ಆರ್‌ಎಸ್‍ಎಸ್ ಪ್ರಮುಖರಾದ ಪಟ್ಟಾಭಿರಾಮ್, ವಿಎಚ್‍ಪಿ ಅಧ್ಯಕ್ಷ ವಾಸುದೇವ್ ಸೇರಿದಂತೆ ಇತರೆ ಗಣ್ಯರು, ಹಿಂದೂಪರ ಸಂಘಟನೆಗಳ ಪ್ರಮುಖರು, ಎಲ್ಲಾ ಪಕ್ಷದ ಪ್ರಮುಖರು ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ:

ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿದ್ದಂತೆ ಮೃತ ಮಂಜುನಾಥ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಪ್ರವಾಸಕ್ಕೆ ಹೋದ ಮಗ ಶವವಾಗಿ ಬಂದದ್ದನ್ನು ಕಂಡು ತಾಯಿ ಬಿಕ್ಕಿಬಿಕ್ಕಿ ಅಳತೊಡಗಿದರು. ಇತ್ತ ಪತಿಯನ್ನು ಕಳೆದುಕೊಂಡ ಪತ್ನಿ, ತಂದೆಯನ್ನು ಕಳೆದುಕೊಂಡ ಮಗ ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿತ್ತು. ಮೃತ ಮಂಜುನಾಥ್ ಮನೆಯಲ್ಲಿ ನಿರವಮೌನ ಆವರಿಸಿತ್ತು.

ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು:

ಮೃತ ಮಂಜುನಾಥ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಸರದಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದುಕೊಂಡರು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೆ ಧಿಕ್ಕಾರ, ಮುರ್ದಾಬಾದ್ ಮುರ್ದಾಬಾದ್ ಪಾಕಿಸ್ತಾನ್ ಮುರ್ದಾಬಾದ್, ಅಮರ್ ರಹೇ.. ಅಮರ್ ರಹೇ ಮಂಜುನಾಥ್ ಅಮರ್ ರಹೇ ಎಂಬ ಘೋಷಣೆಯನ್ನು ಕೂಗಿದರು.

ಅಂತಿಮ ಯಾತ್ರೆ:

ಮಂಜುನಾಥ್ ಅವರ ಮೃತದೇಹಕ್ಕೆ ಅವರ ನಿವಾಸದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಕುಟುಂಬಸ್ಥರು ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಂತಿಮ ಯಾತ್ರೆ ನಡೆಸಲಾಯಿತು. ಪುಷ್ಪಾಲಂಕೃತ ವಾಹನದಲ್ಲಿ ಮೃತ ದೇಹವನ್ನು ಮೆರವಣಿಗೆ ಮೂಲಕ ಕೊಡೊಯ್ಯಲಾಯಿತು. ಮೆರವಣಿಗೆಯು ಐಬಿ ಸರ್ಕಲ್ ಮೂಲಕ, ಕುವೆಂಪು ರಸ್ತೆಗೆ ಬಂದು, ಜೈಲ್ ಸರ್ಕಲ್‌ನಲ್ಲಿ ತಿರುವು ಪಡೆದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಾದು, ಸೀನಪ್ಪ ಶೆಟ್ಟಿ ಸರ್ಕಲ್‌ಗೆ ತಲುಪಿತು. ಅಲ್ಲಿಂದ ಅಮೀರ್ ಅಹಮದ್ ಸರ್ಕಲ್ ಮೂಲಕ ಬಿ.ಎಚ್.ರೋಡ್‌ನಲ್ಲಿ ಸಾಗಿ, ರೋಟರಿ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.

ಅರ್ಧ ದಿನ ಸ್ವಯಂ ಪ್ರೇರಿತ ಬಂದ್‌:

ಮೃತರ ಗೌರವಾರ್ಥ ವ್ಯಾಪಾರಸ್ಥರು ತಮ್ಮ ವಾಣಿಜ್ಯ ವಹಿವಾಟು ಬಂದ್ ಮಾಡಿ ಸಹಾನುಭೂತಿ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಕೇಸರಿ ಬಾವುಟ ಹಿಡಿದು ಭಾರತ್ ಮಾತಾ ಕೀ ಜೈ, ಮಂಜುನಾಥ್ ಅಮರ್ ರಹೇ ಘೋಷಣೆ ಮೊಳಗಿಸುತ್ತಾ ರೋಟರಿ ಚಿತಾಗಾರದವರೆಗೂ ಸಾಗಿದರು.

ರೋಟರಿ ಚಿತಾಗಾರಕ್ಕೆ ಮೃತದೇಹ ತಲುಪುತ್ತಲೇ ಶಾಸಕ ಎಸ್.ಎನ್.ಚನ್ನಬಸಪ್ಪ ಹಾಗೂ ವಿವಿಧ ರಾಜಕೀಯ ಮುಖಂಡರು ಮೃತದೇಹವನ್ನು ಚಿತಾಗಾರದೊಳಗೆ ತರಲು ಹೆಗಲು ನೀಡಿದರು. ಆ ಬಳಿಕ ಶಿವಮೊಗ್ಗ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಿಂದ ಸರ್ಕಾರಿ ಗೌರವ ನೀಡಲಾಯಿತು.

ಬಳಿಕ ಗುಂಡಾಭಟ್ಟರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ಇನ್ನು ಪುತ್ರ ಅಭಿಜಯ್ ಕಣ್ಣೀರಿಡುತ್ತಲೇ ತನ್ನ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ಪಲ್ಲವಿ ಸೇರಿದಂತೆ ಕುಟುಂಬಸ್ಥರ ದುಃಖ ಮಡುಗಟ್ಟಿತ್ತು. ಸಚಿವ ಮಧು ಬಂಗಾರಪ್ಪರವರು ಸ್ಥಳದಲ್ಲಿದ್ದು ಮೃತ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.

ಉಗ್ರರನ್ನು ನೇಣು ಹಾಕಿ ಅಣಕು ಪ್ರದರ್ಶನ:

ಮಂಜುನಾಥ್‌ರಾವ್‌ ಪಾರ್ಥಿವ ಶರೀರವನ್ನು ನೋಡಲು ಸಾವಿರಾರು ಜನರು ಮನೆಯ ಮುಂಭಾಗದಲ್ಲಿ ಜಮಾಯಿಸಿದ್ದರೆ, ಇತ್ತ ನಗರದಲ್ಲಿ ಉಗ್ರರ ಕೃತ್ಯ ಖಂಡಿಸಿ ಜೆಸಿಬಿಯ ಕೊಕ್ಕೆಯಲ್ಲಿ ಉಗ್ರರನ್ನು ನೇಣು ಹಾಕಿದ ರೀತಿಯಲ್ಲಿ ಅಣಕು ಪ್ರದರ್ಶನ ನಡೆಸಲಾಯಿತು.

ಅಂತಿಮ ಸಂಸ್ಕಾರ ಪೂರೈಸಿದ ಪಲ್ಲವಿ, ಅಭಿಜೇಯ

ಪಹಲ್ಗಾಮ್‌ನಲ್ಲಿ ಉಗ್ರರು ಪತಿಯನ್ನು ನಿರ್ದಯತೆಯಿಂದ ಗುಂಡಿಕ್ಕಿ ಕೊಂದಿರುವ ದೃಶ್ಯ ತಮ್ಮ ಕಣ್ಣೆದುರೇ ಇದ್ದರೂ ಪತ್ನಿ ಪಲ್ಲವಿ, ತಮ್ಮ ಮಗ ಅಭಿಜೇಯನೊಂದಿಗೆ ತಮ್ಮಲ್ಲಿರುವ ನೋವನ್ನು ನುಂಗಿಕೊಂಡೇ ಅಂತಿಮ ಸಂಸ್ಕಾರವನ್ನು ಪೂರೈಸಿದರು.

ನಾನು ತಿರುಗಿ ನೋಡುವುದರೊಳಗೆ ನನ್ನ

ಗಂಡನ ಹಣೆಗೆ ಹೊಡೆದಿದ್ದರು: ಪಲ್ಲವಿ

ಶಿವಮೊಗ್ಗ: ಮಗ ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕಪಡೆದಿದ್ದು, ಆ ಖುಷಿಯಿಂದ ಪತಿ ಮತ್ತು ಮಗನೊಂದಿಗೆ ನಾವು ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದೇವು. ಮೂರು ದಿನಗಳ ಕಾಲ ಪ್ರವಾಸ ಚೆನ್ನಾಗಿತ್ತು. ಮಗನಿಗೆ ತಿಂಡಿ ತೆಗೆದುಕೊಳ್ಳಲು ಹೋಟೆಲ್ ಬಳಿ ಇಳಿದೆವು. ಅವರು ಆರ್ಡರ್‌ ಮಾಡುತ್ತಿದ್ದರು. ನಾನು ಮಗನನ್ನು ಕರೆದುಕೊಂಡು ಬರಲು ಹೋದಾಗ ಜೋರಾಗಿ ಗುಂಡಿನ ಸದ್ದು ಕೇಳಿತು. ನಾನು ಇಬ್ಬರು ಉಗ್ರರನ್ನು ನೋಡಿದೆ. ನಾನು ತಿರುಗಿ ನೋಡುವುದರೊಳಗೆ ನನ್ನ ಗಂಡನ ಹಣೆಗೆ ಹೊಡೆದಿದ್ದರು ಎಂದು ಮೃತ ಮಂಜುನಾಥ್ ಪತ್ನಿ ಪಲ್ಲವಿ ನಡೆದ ಘಟನೆ ನೆನದು ಬಿಕ್ಕಳಿಸಿ ಅತ್ತರು.

ಗಂಡನ ದೇಹ ರಕ್ತ ಆಗಿತ್ತು, ಉಸಿರು ನಿಂತು ಹೋಗಿತ್ತು, ಗುಂಡು ಹೊಡೆದವನು ಅಲ್ಲೇ ಹೋಗುತ್ತಿದ್ದ. ಅವನನ್ನು ಕರೆದು ಗಂಡನನ್ನು ಸಾಯಿಸಿದ ಮೇಲೆ ನಮ್ಮನ್ನು ಯಾಕೆ ಬಿಟ್ಟೆ ಎಂದು ಕಿರುಚಿದೆವು. ಆಗ ಅವನು ‘ಮೋದಿ ಹತ್ತಿರ ಹೇಳು’ ಅಂದ. ಗಂಡಸರನ್ನು ಟಾರ್ಗೆಟ್ ಮಾಡಿ ಹಣೆಗೆ ಹೊಡೆದಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸೆಕ್ಯೂರಿಟಿ ಇರಲಿಲ್ಲ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಘಟನಾ ನಡೆದ ಸ್ಥಳ ಸುಲಭದ ದಾರಿಯಾಗಿರಲಿಲ್ಲ ಎಂದರು.

ರಕ್ಷಿಸಿದ ಮುಸ್ಲಿಂ ರನ್ನು ಜೀವಮಾನದಲ್ಲಿ ಮರೆಯಲ್ಲ:

ಸ್ಥಳೀಯರು(ಮುಸ್ಲಿಂರು) ನಮ್ಮ ರಕ್ಷಣೆಗೆ ಬಂದರು. ಒಬ್ಬರು ನನ್ನ ಮಗನನ್ನು ಬೆನ್ನ ಮೇಲೆ ಹೊತ್ತುಕೊಂಡು ಬಂದರು. ಇನ್ನೊಬ್ಬರು ನನ್ನನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದರು. ಉಗ್ರಗಾಮಿಗಳು ಅವರನ್ನು ಸಹ ಕೊಲ್ಲಬಯಸಿದ್ದರಂತೆ, ಅದರೆ ಅವರು ತಾಬೀನ್ ಬಿಸ್ಮಿಲ್ಲಾ ಅಂತ ಹೇಳಿದ್ದಕ್ಕೆ ಸುಮ್ಮನೆ ಬಿಟ್ಟರಂತೆ. ನಮ್ಮ ರಕ್ಷಣೆಗೆ ದಾವಿಸಿದವರನ್ನು ಯಾವತ್ತೂ ಮರೆಯಲ್ಲ ಎಂದು ಹೇಳುತ್ತ ಪಲ್ಲವಿ ಭಾವುಕರಾದರು.

ಉಗ್ರಗಾಮಿಗಳನ್ನು ಬೇರು ಸಹಿತ ಕಿತ್ತುಹಾಕಿ

ಮಗ ಪಿಯುಸಿಯಲ್ಲಿ ಎರಡು ವರ್ಷ ಕಷ್ಟಪಟ್ಟು ಓದಿ ಒಳ್ಳೆಯ ರಿಸಲ್ಟ್ ಪಡೆದುಕೊಂಡಿದ್ದ ಖುಷಿಗೆ ಮತ್ತು ರಜೆ ಇದ್ದ ಕಾರಣ ಎಂಜಾಯ್ ಮಾಡಲು ಮೂರು ಜನ ಪ್ರವಾಸಕ್ಕೆ ಹೋಗಿದ್ದರು. ಮೊನ್ನೆವರೆಗೂ ಖುಷಿಯಾಗಿಯೇ ಇದ ಅಲ್ಲಿನ ಫೋಟೋವನ್ನು ನಮಗೆಲ್ಲ ಶೇರ್ ಮಾಡಿದ್ದರು. ತನ್ನ ಕಣ್ಣ ಮುಂದೆಯೇ ಗಂಡನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಅದನ್ನು ಪಲ್ಲವಿ ಹೇಗೆ ಎದುರಿಸಿದ್ದಾಳೆ ಎಂಬುದನ್ನು ಊಹಿಸಲೂ ಅಸಾಧ್ಯ. ಉಗ್ರಗಾಮಿಗಳನ್ನು ಬೇರು ಸಹಿತ ಕಿತ್ತುಹಾಕಬೇಕು.‌ ಈಗ ಎಲ್ಲವೂ ಸರಿಹೋಗಿದೆ ಎಂದು ಸುಮ್ಮನಾಗಬಾರದು ಎಂದು ಮಂಜುನಾಥ್‌ರಾವ್‌ ಪತ್ನಿ ಪಲ್ಲವಿ ಅವರ ಅಕ್ಕ ವಿಜಯಾ ಒತ್ತಾಯಿಸಿದರು.