ಸಾರಾಂಶ
ನವದೆಹಲಿ: 26 ಪ್ರವಾಸಿಗರ ಬಲಿ ಪಡೆದ ಕಾಶ್ಮೀರದ ಪಹಲ್ಗಾಂ ದಾಳಿ ಹೇಗೆ ನಡೆದಿತ್ತು ಎಂಬ ಚಿತ್ರಣ ಇದೀಗ ಬಯಲಾಗಿದೆ.
ದಾಳಿ ನಡೆದ ಬೈಸರಣ್ ಹುಲ್ಲುಗಾವಲು ಪ್ರದೇಶಕ್ಕೆ ಪಕ್ಕದಲ್ಲೇ ಇದ್ದ ಪೈನ್ ಅರಣ್ಯಗಳಿಂದ 5 ಜನರ ಉಗ್ರರ ಗುಂಪೊಂದು ಏಕಾಏಕಿ ಪ್ರವಾಸಿಗರು ಇದ್ದ 3 ವಿವಿಧ ಸ್ಥಳಗಳತ್ತ ಪ್ರತ್ಯೇಕವಾಗಿ ಧಾವಿಸಿತು.
ಬಳಿಕ ಅಲ್ಲಿ ಪುರುಷರನ್ನು ಮುಂದೆ ಕರೆದು, ಹಿಂದೂ ಮತ್ತು ಮುಸ್ಲಿಮರನ್ನು ಪ್ರತ್ಯೇಕವಾಗಿ ಸಾಲು ಮಾಡಿತು. ಎಲ್ಲರ ಬಳಿಯೂ ಕಲ್ಮಾ ಹೇಳಲು ಸೂಚಿಸಿದರು. ಯಾರು ಕಲ್ಮಾ ಹೇಳಲಿಲ್ಲವೋ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದರು. ಮತ್ತೊಂದು ಉಗ್ರರ ತಂಡ ಪ್ರವಾಸಿಗರ ಹೆಸರು ಕೇಳಿ ಅವರ ಗುರುತಿನ ಚೀಟಿ ಪರಿಶೀಲಿಸಿತು. ಜೊತೆಗೆ ಅವರ ವಸ್ತ್ರಗಳನ್ನು ಕಳಚಿ ಅವರು ಮುಸ್ಲಿಂ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಗುಂಡು ಹಾರಿಸಿತು.
ಮೂರು ಸ್ಥಳಗಳ ಪೈಕಿ ಕೆಲವು ಕಡೆ ಸತತ 10 ನಿಮಿಷ ಗುಂಡು ಹಾರಿಸಿದರು. ಮೊದಲ ಗುಂಡಿನ ದಾಳಿ ನಡೆದಿದ್ದು ಮಧ್ಯಾಹ್ನ 1.50ರ ವೇಳೆಗೆ. ಆದರೆ ಆ ಕುರಿತ ಮೊದಲ ಮಾಹಿತಿ ಭದ್ರತಾ ಪಡೆಗಳಿಗೆ ರವಾನೆಯಾಗಿದ್ದು 2.30ರ ವೇಳೆಗೆ. ಅದಕ್ಕೂ ಮೊದಲು ಸ್ಥಳೀಯ ಪೋನಿ ಸೇವೆ ನೀಡುವವರಿಗೆ ಮೊದಲು ಸಂದೇಶ ರವಾನೆಯಾಗಿ ಅವರು ಹಲವು ಪ್ರವಾಸಿಗರನ್ನು ರಕ್ಷಿಸಿ ಕರೆತಂದರು. ಇನ್ನೊಂದೆಡೆ ವಾಹನ ಚಲಿಸಲು ಸಾಧ್ಯವಾಗದ ಪ್ರದೇಶಕ್ಕೆ ಭದ್ರತಾ ಪಡೆಗಳು ಓಡೋಡಿ ಬರುವ ಹೊತ್ತಿಗೆ ಸಾಕಷ್ಟು ಸಮಯವಾಗಿತ್ತು. ಹೀಗಾಗಿ ತೀವ್ರವಾಗಿ ಗಾಯಗೊಂಡಿದ್ದ ಕೆಲವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸುವುದು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಇಂದು ಕಾಶ್ಮೀರಕ್ಕೆ ರಾಹುಲ್, ಸೇನಾ ಮುಖ್ಯಸ್ಥ ದ್ವಿವೇದಿ
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶುಕ್ರವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿಯವರು ಪಹಲ್ಗಾಂ ದಾಳಿಯ ಗಾಯಾಳುಗಳ ಆರೋಗ್ಯ ವಿಚಾರಿಸಲು ಅನಂತ್‌ನಾಗ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಭೇಟಿ ನೀಡಲಿದ್ದಾರೆ. ಉಪೇಂದ್ರ ದ್ವಿವೇದಿಯವರು ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದು, ಸ್ಥಳೀಯ ಸೇನಾಧಿಕಾರಿಗಳಿಂದ ಕಣಿವೆ ಮತ್ತು ನಿಯಂತ್ರಣ ರೇಖೆಯುದ್ದಕ್ಕೂ ಕೈಗೊಂಡ ಭದ್ರತಾ ವ್ಯವಸ್ಥೆಗಳ ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ.