ಸಾರಾಂಶ
ಶಿವಮೊಗ್ಗ : ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3.30ಕ್ಕೆ ಇಲ್ಲಿನ ತುಂಗಾ ನದಿ ದಂಡೆಯಲ್ಲಿರುವ ರೋಟರಿ ಚಿತಾಗಾರದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಪುತ್ರ ಅಭಿಜಯ್ ಅವರು ಬ್ರಾಹ್ಮಣ ಸಂಪ್ರದಾಯದಂತೆ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಇದಕ್ಕೂ ಮೊದಲು ಮಂಜುನಾಥ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ನಗರಕ್ಕೆ ತರಲಾಯಿತು. ನಗರದ ಹಳೆ ಬಸ್ ನಿಲ್ದಾಣದಿಂದ ವಿಶ್ವ ಹಿಂದೂಪರಿಷತ್, ಬಜರಂಗದಳದ ಕಾರ್ಯಕರ್ತರ ನೇತೃತ್ವದಲ್ಲಿ ಬೈಕ್ ರ್‍ಯಾಲಿಯಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ವಿಜಯನಗರ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಪಾರ್ಥಿವ ಶರೀರದೊಂದಿಗೆ ಅವರ ಪುತ್ರ ಅಭಿಜಯ್ ಮತ್ತು ಪತ್ನಿ ಪಲ್ಲವಿ ಆ್ಯಂಬುಲೆನ್ಸ್ ನಲ್ಲಿ ಜೊತೆಗಿದ್ದರು.
ನಿವಾಸದಲ್ಲಿ ಮಂಜುನಾಥ್ ಅವರ ತಾಯಿ ಮೃತದೇಹದ ದರ್ಶನ ಮಾಡಿದ ಬಳಿಕ ಕೆಲವು ವಿಧಿ-ವಿಧಾನಗಳನ್ನು ಪೂರೈಸಿ, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಈ ವೇಳೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಗಣ್ಯರು, ಅಧಿಕಾರಿಗಳು, ಹಿಂದೂಪರ ಸಂಘಟನೆಗಳ ಪ್ರಮುಖರು, ಎಲ್ಲಾ ಪಕ್ಷದ ಪ್ರಮುಖರು ಅಂತಿಮ ದರ್ಶನ ಪಡೆದು ಪುಷ್ಪನಮನ ಸಲ್ಲಿಸಿದರು.
ಮಂಜುನಾಥ್ ಅವರ ಮೃತದೇಹಕ್ಕೆ ಅವರ ನಿವಾಸದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಕುಟುಂಬಸ್ಥರು ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಂತಿಮ ಯಾತ್ರೆ ನಡೆಸಲಾಯಿತು. ಪುಷ್ಪಾಲಂಕೃತ ವಾಹನದಲ್ಲಿ ಮೃತದೇಹವನ್ನು ಮೆರವಣಿಗೆ ಮೂಲಕ ರೋಟರಿ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಬಳಿಕ, ಶಿವಮೊಗ್ಗ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಿಂದ ಸರ್ಕಾರಿ ಗೌರವ ನೀಡಲಾಯಿತು. ನಂತರ, ಗುಂಡಾಭಟ್ಟರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನಡೆದವು. ಪುತ್ರ ಅಭಿಜಯ್ ಕಣ್ಣೀರಿಡುತ್ತಲೇ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ಪಲ್ಲವಿ ಸೇರಿದಂತೆ ಕುಟುಂಬಸ್ಥರ ದುಃಖ ಮಡುಗಟ್ಟಿತ್ತು.
ಅರ್ಧ ದಿನ ಶಿವಮೊಗ್ಗ ಬಂದ್
ಮೃತರ ಗೌರವಾರ್ಥ ಶಿವಮೊಗ್ಗದಲ್ಲಿ ಅರ್ಧ ದಿನ ಸ್ವಯಂ ಘೋಷಿತ ಬಂದ್ ನಡೆಸಲಾಯಿತು. ವ್ಯಾಪಾರಸ್ಥರು ತಮ್ಮ ವಾಣಿಜ್ಯ ವಹಿವಾಟು ಬಂದ್ ಮಾಡಿ ಸಹಾನುಭೂತಿ ವ್ಯಕ್ತಪಡಿಸಿದರು. ಅಂತಿಮಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಕೇಸರಿ ಬಾವುಟ ಹಿಡಿದು ಭಾರತ್ ಮಾತಾ ಕೀ ಜೈ, ಮಂಜುನಾಥ್ ಅಮರ್ ರಹೇ ಘೋಷಣೆ ಮೊಳಗಿಸುತ್ತಾ ರೋಟರಿ ಚಿತಾಗಾರದವರೆಗೂ ಸಾಗಿದರು.
ರಕ್ಷಿಸಿದ ಮುಸ್ಲಿಮರನ್ನು ಮರೆಯಲ್ಲ: ಪಲ್ಲವಿ
ಸ್ಥಳೀಯರು (ಮುಸ್ಲಿಂರು) ನಮ್ಮ ರಕ್ಷಣೆಗೆ ಬಂದರು. ಒಬ್ಬರು ನನ್ನ ಮಗನನ್ನು ಬೆನ್ನ ಮೇಲೆ ಹೊತ್ತುಕೊಂಡು ಬಂದರು. ಇನ್ನೊಬ್ಬರು ನನ್ನನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದರು. ಉಗ್ರಗಾಮಿಗಳು ಅವರನ್ನು ಸಹ ಕೊಲ್ಲಬಯಸಿದ್ದರಂತೆ, ಅದರೆ, ಅವರು ತಾಬೀನ್ ಬಿಸ್ಮಿಲ್ಲಾ ಅಂತ ಹೇಳಿದ್ದಕ್ಕೆ ಸುಮ್ಮನೆ ಬಿಟ್ಟರಂತೆ. ನಮ್ಮ ರಕ್ಷಣೆಗೆ ದಾವಿಸಿದವರನ್ನು ಯಾವತ್ತೂ ಮರೆಯಲ್ಲ ಎಂದು ಹೇಳುತ್ತ ಪಲ್ಲವಿ ಭಾವುಕರಾದರು.

;Resize=(128,128))
;Resize=(128,128))
;Resize=(128,128))
;Resize=(128,128))