ಗೋವು ರಕ್ಷಿಸಿದರೆ ಮನುಕುಲದ ಉಳಿವು: ಭಕ್ತಿಭೂಷಣ ದಾಸ್‌

| Published : Jan 30 2025, 12:33 AM IST

ಸಾರಾಂಶ

ಗುರುಕುಲ ಮತ್ತು ಗೋಕುಲ ಮತ್ತೆ ಸ್ಥಾಪನೆ ಮಾಡಬೇಕಿದೆ. ಮೆಕಾಲೆ ಗುರುಕುಲ ನಾಶ ಮಾಡಿದ. ರಾಸಾಯನಿಕ ಗೊಬ್ಬರದ ಮೂಲಕ ಗೋ ಆಧರಿತ ಕೃಷಿ ನಾಶ ಮಾಡಿದರು.

ಯಲ್ಲಾಪುರ: ಗೋವಿನ ರಕ್ಷಣೆ ಆಗದೇ ಮನುಕುಲದ, ಧರ್ಮದ ರಕ್ಷಣೆ ಆಗಲಾರದು. ಭಗವಂತ ಅನೇಕ ಲೀಲೆಗಳನ್ನು ಗೋವಿನೊಂದಿಗೆ ಮಾಡಿದ. ಶುದ್ಧ ನೀರು, ಗಾಳಿ ಆಹಾರ ಉಳಿಯಬೇಕಾದರೆ ಗೋ ರಕ್ಷಣೆ ಆಗಬೇಕು ಎಂದು ಬಂಟ್ವಾಳದ ರಾಧಾಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಭಕ್ತಿಭೂಷಣ ದಾಸ್ ತಿಳಿಸಿದರು.ಪಟ್ಟಣದ ಎಪಿಎಂಸಿ ಬಳಿಯ ಶಕ್ತಿಗಣಪತಿ ದೇವಸ್ಥಾನದ ಆವರಣದಲ್ಲಿ ನಂದಿರಥ ಯಾತ್ರೆಯ ಮೆರವಣಿಗೆಯ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಗುರುಕುಲ ಮತ್ತು ಗೋಕುಲ ಮತ್ತೆ ಸ್ಥಾಪನೆ ಮಾಡಬೇಕಿದೆ. ಮೆಕಾಲೆ ಗುರುಕುಲ ನಾಶ ಮಾಡಿದ. ರಾಸಾಯನಿಕ ಗೊಬ್ಬರದ ಮೂಲಕ ಗೋ ಆಧರಿತ ಕೃಷಿ ನಾಶ ಮಾಡಿದರು. ಮೊದಲು ಗೋವಿನ ರಕ್ಷಣೆ ಆದರೆ ಗುರುಕುಲ ಬಂದೇ ಬರುತ್ತದೆ. ಗೋವಿನ ರಕ್ಷಣೆ ಮಾಡಿದವ ದಾನವನಾಗಲು ಸಾಧ್ಯವಿಲ್ಲ. ಗೋಶಾಲೆಗೆ ಹೋಗಿ ಗೋವಿನ ಸಾಂಗತ್ಯ ಮಾಡುವ ಗೋ ಕಟ್ಲಿಂಗ್ ಥೆರಪಿ ಎಂದು ವಿದೇಶಗಳಲ್ಲಿ ಜನಪ್ರಿಯವಾಗುತ್ತದೆ. ಗೋ ಸಾಂಗತ್ಯದಿಂದ ಮಾನಸಿಕ ನೆಮ್ಮದಿ ದೊರೆತು ಆರೋಗ್ಯ ಸುಧಾರಿಸುತ್ತದೆ ಎಂದರು.ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್. ಭಟ್ಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋವಿನ ಉತ್ಪನ್ನ ಶರೀರ ಮತ್ತು ಪ್ರಕೃತಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಗೋವಿನ ಪ್ರತಿ ಹೆಜ್ಜೆಯಲ್ಲಿ ಮಹತ್ವ ಪಡೆದಿದೆ. ಪಂಚಗವ್ಯ, ಪಂಚಾಮೃತದಿಂದ ದೇಹದ ಆರೋಗ್ಯ ವೃದ್ಧಿಸುತ್ತದೆ. ಕೃಷಿಯಲ್ಲಿ ಗೋವಿನ ಉಪಯೋಗ ಸಾಕಷ್ಟಿದೆ ಎಂದರು.ಡಿ. ಶಂಕರ ಭಟ್ಟ ಮಾತನಾಡಿ, ಗೋವಿನ ಸದುಪಯೋಪಯೋಗ ಪಡೆದುಕೊಂಡು ಗೋರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು.ವಿದ್ವಾನ್ ಮಹೇಶ್ ಭಟ್ಟ ಇಡಗುಂದಿ ರಚಿಸಿದ ಗೋಮಾತ್ರಕಷ್ಠಕಂ ಲೋಕಾರ್ಪಣೆ ಮಾಡಿದರು. ಗೋವರ್ಧನ ಗೋಶಾಲೆಯ ಕಾರ್ಯಾಧ್ಯಕ್ಷ ರಾಮಕೃಷ್ಣ ಕವಾಳೆ, ಸುಮೀತಕುಮಾರ ಶರ್ಮಾ ವೇದಿಕೆಯಲ್ಲಿದ್ದರು. ಪಲ್ಲವಿ ಭಟ್ಟ ಕವಾಳೆ ಅವರ ಗೋವಿನ ಕುರಿತಾದ ಗಾಯನಕ್ಕೆ ಚಂದ್ರಕಲಾ ಭಟ್ಟ ಅರ್ಥ ಹೇಳಿದರು.

ಮಹಾಬಲೇಶ್ವರ ಭಟ್ಟ ಸಂಗಡಿಗರು ವೇದಘೋಷ ಮಾಡಿದರು. ಗೋಸೇವಾ ಗತಿವಿದಿಯ ಪ್ರಮುಖ ಗಣಪತಿ ಭಟ್ಟ ಕೋಲಿಬೇಣ ಸ್ವಾಗತಿಸಿದರು. ರಾಮಕೃಷ್ಣ ಭಟ್ಟ ಕೌಡಿಕೇರೆ ನಿರೂಪಿಸಿದರು. ಅನಂತ ಗಾಂವ್ಕರ್ ವಂದಿಸಿದರು.ಅಂಬೇಡ್ಕರ್ ಸರ್ಕಲ್ ಮರುನಾಮಕರಣ ಭರವಸೆ

ಶಿರಸಿ: ನಗರದ ಐದು ರಸ್ತೆ ಸರ್ಕಲ್‌ನ್ನು ಅಂಬೇಡ್ಕರ್ ಸರ್ಕಲ್ ಆಗಿ ಮರುನಾಮಕರಣ ಮಾಡಿಕೊಡುವ ಬಗ್ಗೆ ಸಹಾಯಕ ಆಯುಕ್ತರು ಭರವಸೆ ನೀಡಿದ್ದು, ಈ ಬಗ್ಗೆ ಎರಡು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ಭೀಮ ಘರ್ಜನೆ ಸಂಘಟನೆ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಅಂಬೇಡ್ಕರ ಸರ್ಕಲ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೬ ಅಡಿ ಎತ್ತರದ ಪ್ರತಿಮೆ ನಿರ್ಮಿಸುವ ಮತ್ತು ಐದು ರಸ್ತೆ ಎನ್ನುವ ಹೆಸರಿನ ಬದಲು ಅಂಬೇಡ್ಕರ ಸರ್ಕಲ್ ಎಂದು ಅಧಿಕೃತವಾಗಿ ನಾಮಕರಣ ಮಾಡುವಂತೆ ಸಾಕಷ್ಟು ಬಾರಿ ಮನವಿ ನೀಡಲಾಗಿತ್ತು. ಮನವಿಗೆ ಸ್ಪಂದಿಸಿರುವ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ. ಅವರು ಮರುನಾಮಕರಣ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಇದರಿಂದ ಸಂಘಟನೆ ಪ್ರಯತ್ನಕ್ಕೆ ಜಯ ಸಿಕ್ಕಂತಾಗಿದೆ ಎಂದರು.

ಸಚಿವ ಮಹಾದೇವಪ್ಪ ಶಿರಸಿಗೆ ಆಗಮಿಸಲಿದ್ದು, ಬೃಹತ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಸಂಬಂಧ ಚರ್ಚಿಸಲಾಗುವುದು. ಮಹಾಕುಂಭಮೇಳದಲ್ಲಿ ಅಖಂಡ ಹಿಂದು ರಾಷ್ಟ್ರದ ಸಂವಿಧಾನ ಸಿದ್ಧಪಡಿಸಲಾಗಿದ್ದು, ಇದು ಅಂಬೇಡ್ಕರ್ ಸಿದ್ಧಪಡಿಸಿದ ಸಂವಿಧಾನಕ್ಕೆ ಅಪಮಾನವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸಬೇಕು. ಹಿಂದು ರಾಷ್ಟ್ರ ಸಂವಿಧಾನ ರಚಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೊಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಅಮಿತ್ ಜೋಗಳೇಕರ್, ಪುನಿತ್ ಮರಾಠೆ, ಅಕ್ಷಯ ಧೋತ್ರೆ, ರಾಜೇಶ ದೇಶಭಾಗ, ಹರ್ಷ ಬಿ., ರಾಜೇಶ ಬಿ., ಶಿವರಾಜ ಹಾವೇರಿ, ಪ್ರಶಾಂತ ದಾವಣಗೆರೆ ಮತ್ತಿತರರು ಇದ್ದರು.