ಸಾರಾಂಶ
ಶಿರಸಿ: ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ನಿಧನರಾದ ಹಿನ್ನೆಲೆಯಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಶಾಸಕ ಭೀಮಣ್ಣ ನಾಯ್ಕ ಸಭೆಯಲ್ಲಿ ಭಾಗಿಯಾಗಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಗೌರವ ಸಲ್ಲಿಸಲಾಯಿತು.ಬಳಿಕ ಮಾತನಾಡಿದ ಶಾಸಕ ಭೀಮಣ್ಣ, ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರನ್ನು ಕಳೆದುಕೊಂಡಿದ್ದೇವೆ. ನಾನೊಬ್ಬ ಭಾರತೀಯನಾಗಿ ಅವರ ಸೇವೆಯನ್ನು ನೆನೆಯಬೇಕು. ಯಾವುದೇ ರಾಜ್ಯದಲ್ಲೂ ಯಾವುದೇ ಸರ್ಕಾರ ಇದ್ದಾಗಲೂ ಕೇಂದ್ರದ ಆರ್ಥಿಕ ಶಕ್ತಿ ನೀಡಿದ್ದಾರೆ. ತಾರತಮ್ಯ ನೀತಿ ಎಂದಿಗೂ ಅನುಸರಿಸಿಲ್ಲ ಎಂದರು.
ಮನಮೋಹನ್ ಸಿಂಗ್ ಅವರು ರೈತ ಸಂಕಷ್ಟದಲ್ಲಿದ್ದಾಗ ₹೭೨ ಸಾವಿರ ಕೋಟಿ ಸಾಲ ಮನ್ನಾ ಮಾಡಿ ರೈತರಿಗೆ ಶಕ್ತಿ ತುಂಬಿದ್ದಾರೆ. ದೇಶಕ್ಕೆ ಆರ್ಥಿಕ ಭದ್ರತೆ ನೀಡಿ ಉತ್ತಮ ರೀತಿಯಲ್ಲಿ ನಡೆಸಿದ ಕೀರ್ತಿ ಅವರದ್ದಾಗಿದ್ದು, ಅವರು ಇಂದಿನ ರಾಜಕೀಯ ನಾಯಕರಿಗೆ, ಯುವ ಪೀಳಿಗೆಗೆ ಆದರ್ಶ ಎಂದರು.ಈ ವೇಳೆ ಪ್ರಮುಖರಾದ ಜಗದೀಶ ಗೌಡ, ಎಸ್.ಕೆ. ಭಾಗ್ವತ್, ಅಬ್ಬಾಸ್ ತೋನ್ಸೆ, ಗಣಪತಿ ನಾಯ್ಕ, ಶ್ರೀಪಾದ ಹೆಗಡೆ, ಅಮರ ನೆರಲಕಟ್ಟಿ, ಪ್ರಸನ್ನ ಶೆಟ್ಟಿ ಇತರರು ಇದ್ದರು.
ದೇಶದ ಆರ್ಥಿಕ ಪ್ರಗತಿಗೆ ಸಿಂಗ್ ಕೊಡುಗೆ ಅಪಾರ: ದೇಶಪಾಂಡೆಡಾ. ಮನಮೋಹನ್ ಸಿಂಗ್ ಅವರ ನಿಧನದ ಆಘಾತಕಾರಿ ಸುದ್ದಿ ತಿಳಿದು ಅಪಾರ ದುಃಖವಾಗಿದೆ. ಭಾರತದ ಮಾಜಿ ಪ್ರಧಾನಮಂತ್ರಿಯಾಗಿ, ದೃಷ್ಟಿಯುಳ್ಳ ನಾಯಕನಾಗಿ ಮತ್ತು ಗಣ್ಯ ಅರ್ಥಶಾಸ್ತ್ರಜ್ಞನಾಗಿ ದೇಶದ ಸೇವೆಗೆ ತಮ್ಮ ಜೀವನ ಸಮರ್ಪಿಸಿದ್ದರು. ಭಾರತದ ಆರ್ಥಿಕ ಪ್ರಗತಿಗೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ರಾಜ್ಯ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸಂತಾಪ ವ್ಯಕ್ತಪಡಿಸಿದ್ದಾರೆ.ದೇಶದ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ಪ್ರಧಾನಿಯಾಗಿ ಮತ್ತು ಆರ್ಥಿಕ ತಜ್ಞರಾಗಿ ಸಿಂಗ್ ಅವರು ಕೈಗೊಂಡ ನಿರ್ಧಾರಗಳು ಹಾಗೂ ಅವರ ದೂರದೃಷ್ಟಿಯ ಆಲೋಚನೆಗಳು ಶ್ಲಾಘನೀಯ. ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ ಎಂದು ಹೇಳಿದ್ದಾರೆ.ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆಯಿಂದ ಉಂಟಾಗಿರುವ ಶೂನ್ಯವನ್ನು ಭರ್ತಿ ಮಾಡುವುದು ಅಸಾಧ್ಯ. ಭಗವಂತನು ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಿಂಗ್ ನಿಧನ, ದಾಂಡೇಲಿಯಲ್ಲಿ ಶ್ರದ್ಧಾಂಜಲಿ ಸಭೆ:ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಕೋರಿ ಕಾಂಗ್ರೆಸ್ ವತಿಯಿಂದ ದಾಂಡೇಲಿಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.ಆರಂಭದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ಗೌರವವದೊಂದಿಗೆ ನುಡಿ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಈ ದೇಶ ಕಂಡ ಮಹಾನ್ ಅರ್ಥಶಾಸ್ತ್ರಜ್ಞರಾಗಿ, ದೇಶದ ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ದೇಶಕ್ಕೆ ಸೇವೆ ಮತ್ತು ಕೊಡುಗೆ ಅಪಾರವಾಗಿದೆ. ಅವರು ಜಾರಿಗೆ ತಂದ ಆರ್ಥಿಕ ನೀತಿಗಳು ದೇಶದ ಆರ್ಥಿಕ ಕ್ಷೇತ್ರಕ್ಕೆ ಮಹತ್ವದ ಅಡಿಪಾಯವಾಗಿದೆ ಎಂದರು.
ಕಾಂಗ್ರೆಸ್ ಪ್ರಮುಖರಾದ ತಸ್ವೀರ್ ಸೌದಾಗರ, ರವಿ ನಾಯ್ಕ, ಕೀರ್ತಿ ಗಾಂವಕರ, ಯಾಸ್ಮೀನ್ ಕಿತ್ತೂರ, ಸರಸ್ವತಿ ರಜಪೂತ, ಮಜೀದ ಸನದಿ, ದಿವಾಕರ ನಾಯ್ಕ, ಅರ್ಜೆಕರ, ಪಕ್ಷದ ಪದಾಧಿಕಾರಿಗಳು, ಸದಸ್ಯರು ಉಪಸ್ಥತರಿದ್ದರು. ಕೀರ್ತಿ ಗಾಂವಕರ ಕಾರ್ಯಕ್ರಮ ನಿರೂಪಿಸಿದರು.