ಮನಮೋಹನ್‌ ಸಿಂಗ್ ದೇಶದ ಅತ್ಯಮೂಲ್ಯ ಆಸ್ತಿ

| Published : Dec 29 2024, 01:18 AM IST

ಸಾರಾಂಶ

ಆರ್ಥಿಕ ಸುಧಾರಣೆಯಲ್ಲಿ ಕ್ರಾಂತಿ ಉಂಟು ಮಾಡಿದವರು, ಈ ದೇಶ ಕಂಡಂತಹ ಅಪರೂಪದ ರಾಜಕಾರಣಿಗಳು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಲೋಕಸಭಾ ಸದಸ್ಯ ಶ್ರೇಯಸ್ ಎಂ.ಪಟೇಲ್ ತಿಳಿಸಿದರು. ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂತಾಪ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಆರ್ಥಿಕ ಸುಧಾರಣೆಯಲ್ಲಿ ಕ್ರಾಂತಿ ಉಂಟು ಮಾಡಿದವರು, ಈ ದೇಶ ಕಂಡಂತಹ ಅಪರೂಪದ ರಾಜಕಾರಣಿಗಳು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಲೋಕಸಭಾ ಸದಸ್ಯ ಶ್ರೇಯಸ್ ಎಂ.ಪಟೇಲ್ ತಿಳಿಸಿದರು.

ಪಟ್ಟಣದ ಜಯಲಕ್ಷ್ಮಿ ಮಿಲ್ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದರು. ಹಿಂದುಳಿದ ವರ್ಗದವರು ಸೇರಿದಂತೆ ಆರ್ಥಿಕವಾಗಿ ಸಂಕಷ್ಟದಲ್ಲಿರುದವರು, ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವವರಿಗೆ ನೆರವಾಗುವ ಆಹಾರ ಭದ್ರತಾ ಕಾಯ್ದೆ ಹಾಗೂ ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹಲವಾರು ಜನಪ್ರಿಯ ಯೋಜನೆಗಳನ್ನು ಯುಪಿಎ( ಕಾಂಗ್ರೆಸ್) ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದು ದೇಶದ ಕೋಟ್ಯಂತರ ಜನಸಾಮಾನ್ಯರ ನಿರಾಳ ಬದುಕಿಗೆ ಸೌಲಭ್ಯ ಕಲ್ಪಿಸುವ ಮೂಲಕ ಶಾಶ್ವತವಾಗಿ ಅವರ ಹೆಸರು ಮತ್ತು ಅವರ ಯೋಜನೆಗಳು ಉಳಿಯುವಂತೆ ಮಾಡಿದರು. ಮನಮೋಹನ್ ಸಿಂಗ್ ಅವರಂತಹ ಆರ್ಥಿಕ ತಜ್ಞರು ನಮ್ಮ ದೇಶದಲ್ಲಿ ಮತ್ತೆ ಹುಟ್ಟಿ ಬರುವುದು ಅಸಾಧ್ಯ. ಇವರ ಮಾರ್ಗದರ್ಶನದಲ್ಲಿ ನಾವುಗಳೆಲ್ಲರೂ ಸಾಗುವುದರ ಮೂಲಕ ಅವರ ಆದರ್ಶ, ತತ್ವ, ಸಿದ್ಧಾಂತವನ್ನು ನಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಅವರು ತೋರಿದ ದಾರಿಯಲ್ಲಿ ಸಾಗಬೇಕಿದೆ ಎಂದರು, ಸಿಂಗ್‌ ನಮ್ಮ ದೇಶದ ಅತ್ಯಮೂಲ್ಯ ಆಸ್ತಿ ಎಂದು ಕಂಬನಿ ಮಿಡಿದರು.

ಬ್ಲಾಕ್ ಕಾಂಗ್ರೆಸ್ ಮಾ.ಅಧ್ಯಕ್ಷ ವಿ.ಕೆ.ನಾರಾಯಣ್, ತಾಪಂ ಮಾಜಿ ಅಧ್ಯಕ್ಷ ಬಸವರಾಜು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿ, ಗೌರವ ನಮನ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರಸನ್ನ, ಪುರಸಭಾ ಸದಸ್ಯ ಬೈರಶೆಟ್ಟಿ, ಮಾಜಿ ಸದಸ್ಯ ರಾಘವೇಂದ್ರ, ಓಲೆ ಕುಮಾರ್, ಮುಖಂಡರಾದ ಶಿವಕುಮಾರ್, ಪ್ರಸನ್ನ ಕುಮಾರ್, ಮಿರ್ಜಾ ಅಲಿಮದತ್, ರಂಗಸ್ವಾಮಿ, ಕೆ.ಕೆ.ಲೋಕೇಶ್, ಸುರೇಶ್, ಸುರೇಶ್, ಸುದರ್ಶನ್ ಬಾಬು, ಹೊನ್ನಾವರ ಕೃಷ್ಣೇಗೌಡ, ಇತರರು ಇದ್ದರು.