ಮನ್ಮುಲ್ ಚುನಾವಣೆ: ಎರಡು ನಿರ್ದೇಶಕ ಸ್ಥಾನಗಳಿಗೆ ನಾಲ್ವರ ಪೈಪೋಟಿ..!

| Published : Jan 31 2025, 12:46 AM IST

ಮನ್ಮುಲ್ ಚುನಾವಣೆ: ಎರಡು ನಿರ್ದೇಶಕ ಸ್ಥಾನಗಳಿಗೆ ನಾಲ್ವರ ಪೈಪೋಟಿ..!
Share this Article
  • FB
  • TW
  • Linkdin
  • Email

ಸಾರಾಂಶ

ಮನ್ಮುಲ್ ಚುನಾವಣೆಯ ಅಖಾಡ ರಂಗೇರಿದ್ದು, ಕೆ.ಆರ್.ಪೇಟೆ ತಾಲೂಕಿನ ಎರಡು ನಿರ್ದೇಶಕ ಸ್ಥಾನಗಳಿಗೆ ಬಿರುಸಿನ ಪೈಪೋಟಿ ನಡೆಯುತ್ತಿದೆ. ತಾಲೂಕಿನಿಂದ ಎರಡು ಸ್ಥಾನಗಳಿಗೆ ಹಾಲಿ ನಿರ್ದೇಶಕ ಹಾಗೂ ಶಾಸಕ ಎಚ್.ಟಿ.ಮಂಜು, ನಾಟನಹಳ್ಳಿ ಬೋರ್‌ವೆಲ್ ಮಹೇಶ್, ಹಾಲಿ ನಿರ್ದೇಶಕ ಡಾಲು ರವಿ ಮತ್ತು ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಸೇರಿ ಒಟ್ಟು ನಾಲ್ವರು ಕಣದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮನ್ಮುಲ್ ಚುನಾವಣೆಯ ಅಖಾಡ ರಂಗೇರಿದ್ದು, ತಾಲೂಕಿನ ಎರಡು ನಿರ್ದೇಶಕ ಸ್ಥಾನಗಳಿಗೆ ಬಿರುಸಿನ ಪೈಪೋಟಿ ನಡೆಯುತ್ತಿದೆ. ತಾಲೂಕಿನಿಂದ ಎರಡು ಸ್ಥಾನಗಳಿಗೆ ಹಾಲಿ ನಿರ್ದೇಶಕ ಹಾಗೂ ಶಾಸಕ ಎಚ್.ಟಿ.ಮಂಜು, ನಾಟನಹಳ್ಳಿ ಬೋರ್‌ವೆಲ್ ಮಹೇಶ್, ಹಾಲಿ ನಿರ್ದೇಶಕ ಡಾಲು ರವಿ ಮತ್ತು ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಸೇರಿ ಒಟ್ಟು ನಾಲ್ವರು ಕಣದಲ್ಲಿದ್ದಾರೆ.

ತಾಲೂಕಿನಲ್ಲಿ ಒಟ್ಟು 253 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇದರಲ್ಲಿ 204 ಸಂಘಗಳ ತಲಾ ಒಬ್ಬ ಪ್ರತಿನಿಧಿ ಮತದಾನದ ಹಕ್ಕು ಹೊಂದಿದ್ದಾರೆ. ಡೆಲಿಗೇಟ್ಸ್ ಆಯ್ಕೆ ಗೊಂದಲ ಮತ್ತಿತರ ಕಾರಣಗಳಿಂದ 49 ಸಹಕಾರ ಸಂಘಗಳು ಮತದಾನದ ಹಕ್ಕಿನಿಂದ ವಂಚಿತವಾಗಿವೆ.

ಶಾಸಕ ಎಚ್.ಟಿ.ಮಂಜು ಮತ್ತು ಡಾಲು ರವಿ ಹಾಲಿ ಮನ್ಮುಲ್ ನಿರ್ದೇಶಕರಾಗಿದ್ದು, ಮರು ಆಯ್ಕೆ ಬಯಸಿ ಅಖಾಡಕ್ಕಿಳಿದಿದ್ದಾರೆ. ಎಂ.ಬಿ.ಹರೀಶ್ ಈ ಹಿಂದೆ ಮನ್ಮುಲ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ನಾಟನಹಳ್ಳಿ ಮಹೇಶ್ ಚುನಾವಣಾ ಕ್ಷೇತ್ರಕ್ಕೆ ಹೊಸ ಮುಖ. ಪ್ರಸಕ್ತ ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಮಹೇಶ್ ಜೊತೆಗೂಡಿ ಜೆಡಿಎಸ್- ಬಿಜೆಪಿ ಮೈತ್ರಿ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಮತಯಾಚನೆ ಮಾಡುತ್ತಿದ್ದಾರೆ. ಡಾಲು ರವಿ ಮತ್ತು ಎಂ.ಬಿಹರೀಶ್ ಜೆಡಿಎಸ್ ಬಂಡಾಯ ಅಭ್ಯರ್ಥಿಗಳಾಗಿ ಒಗ್ಗೂಡಿ ಮತಬೇಟೆ ನಡೆಸುತ್ತಿದ್ದಾರೆ.

ಪ್ರಸಕ್ತ ಚುನಾವಣಾ ಕಣದಲ್ಲಿ ನಾಲ್ವರು ಅಭ್ಯರ್ಥಿಗಳೂ ಜೆಡಿಎಸ್ ಪಕ್ಷಕ್ಕೆ ಸೇರಿದವರು. ಬಿಜೆಪಿ ಮೈತ್ರಿ ಧರ್ಮ ಪಾಲಿಸಿ ತನ್ನ ಅಭ್ಯರ್ಥಿಗಳನ್ನು ಹಾಕಿಲ್ಲ. ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಗಳನ್ನು ಹಾಕದೆ ಡಾಲು ರವಿ ಮತ್ತು ಎಂ.ಬಿ.ಹರೀಶ್ ಅವರಿಗೆ ಬೆಂಬಲ ನೀಡುತ್ತಿದೆ. ಡಾಲು ರವಿ ಮೂಲತ: ಕಾಂಗ್ರೆಸ್ಸಿಗರು. ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಅವರ ಜೊತೆಯಲ್ಲಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಶಾಸಕ ಎಚ್.ಟಿ.ಮಂಜು ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಬಂಡಾಯದ ಕಹಳೆ ಮೊಳಗಿಸಿ ಎಂ.ಬಿ.ಹರೀಶ್ ಜೊತೆಗೂಡಿ ರವಿ ಕಣಕ್ಕಿಳಿದಿದ್ದಾರೆ. ಎಂ.ಬಿ. ಹರೀಶ್ ಕೂಡ ಜೆಡಿಎಸ್ ಪಕ್ಷ ತ್ಯಜಿಸದಿದ್ದರೂ ಕಾಂಗ್ರೆಸ್ ಸಖ್ಯ ಬೆಳೆಸಿ ಚುನಾವಣೆ ಗೆಲ್ಲುವ ತವಕದಲ್ಲಿದ್ದಾರೆ.

ಮನ್ಮುಲ್ ಹಾಲಿ ನಿರ್ದೇಶಕರಾಗಿರುವ ಶಾಸಕ ಎಚ್.ಟಿ.ಮಂಜು ಮತ್ತು ಡಾಲು ರವಿ ಇಬ್ಬರೂ ಹಾಲು ಉತ್ಪಾದಕರ ಸಹಕಾರ ಸಂಘಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತಾಲೂಕಿನಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಇಬ್ಬರೂ ಪೂರಕವಾಗಿ ಕೆಲಸ ಮಾಡಿದ್ದಾರೆ.

ಇದೇ ಆಧಾರದ ಮೇಲೆ ಇಬ್ಬರೂ ತಮ್ಮ ಗೆಲುವಿನ ಜೊತೆಗೆ ತಮ್ಮ ಜೊತೆಗಾರರ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಎಚ್.ಟಿ.ಮಂಜು ಕ್ಷೇತ್ರದ ಶಾಸಕರಾಗಿರುವುದರಿಂದ ಅವರು ಗೆಲ್ಲಲೇ ಬೇಕಾದ ಒತ್ತಡವಿದೆ. ಶಾಸಕರ ಜೊತೆ ಅವರ ಜೊತೆಗಾರ ನಾಟನಹಳ್ಳಿ ಮಹೇಶ್ ಅವರನ್ನೂ ಗೆಲ್ಲಿಸಿಕೊಂಡು ಬರಲೇಬೇಕಾದ ಅನಿವಾರ್ಯತೆ ಶಾಸಕರ ಮೇಲಿದೆ. ಶಾಸಕರ ಬಣದ ಗೆಲುವಿಗೆ ತಡೆಯಾಗಿರುವ ಹರೀಶ್ ಮತ್ತು ಡಾಲು ರವಿ ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲಲು ಹೋರಾಟ ಮಾಡುತ್ತಿದ್ದಾರೆ.