ಮನ್‌ಮುಲ್ ಚುನಾವಣೆ: ಹಳೇ ಹುಲಿಗಳ ಹೊಸ ಕದನ...!

| Published : Jan 12 2025, 01:19 AM IST

ಸಾರಾಂಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಫೆ.೨ರಂದು ನಿಗದಿಯಾಗಿದ್ದು, ಬಹುತೇಕ ಹಳೇ ಹುಲಿಗಳೇ ಚುನಾವಣಾ ಸಮರಾಂಗಣದಲ್ಲಿ ಹೋರಾಟಕ್ಕಿಳಿದಿದ್ದಾರೆ. ಕೆಲ ಶಾಸಕರ ಸಂಬಂಧಿಗಳೂ ಸೇರಿ ಕೆಲವು ಹೊಸಬರೂ ಹಳಬರ ವಿರುದ್ಧ ತೊಡೆ ತಟಿ ನಿಂತಿದ್ದಾರೆ. ಜಿಲ್ಲೆಯೊಳಗಿನ ರಾಜಕೀಯ ಚಿತ್ರಣವನ್ನು ನೋಡಿದರೆ ಕಾಂಗ್ರೆಸ್-ಜೆಡಿಎಸ್ ನಡುವೆಯೇ ತೀವ್ರ ಸಮರ ಏರ್ಪಟ್ಟಿರುವುದು ಕಂಡುಬರುತ್ತಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಫೆ.೨ರಂದು ನಿಗದಿಯಾಗಿದ್ದು, ಬಹುತೇಕ ಹಳೇ ಹುಲಿಗಳೇ ಚುನಾವಣಾ ಸಮರಾಂಗಣದಲ್ಲಿ ಹೋರಾಟಕ್ಕಿಳಿದಿದ್ದಾರೆ. ಕೆಲ ಶಾಸಕರ ಸಂಬಂಧಿಗಳೂ ಸೇರಿ ಕೆಲವು ಹೊಸಬರೂ ಹಳಬರ ವಿರುದ್ಧ ತೊಡೆ ತಟಿ ನಿಂತಿದ್ದಾರೆ. ಜಿಲ್ಲೆಯೊಳಗಿನ ರಾಜಕೀಯ ಚಿತ್ರಣವನ್ನು ನೋಡಿದರೆ ಕಾಂಗ್ರೆಸ್-ಜೆಡಿಎಸ್ ನಡುವೆಯೇ ತೀವ್ರ ಸಮರ ಏರ್ಪಟ್ಟಿರುವುದು ಕಂಡುಬರುತ್ತಿದೆ.

ಐದು ವರ್ಷಗಳ ಆಡಳಿತ ಮಂಡಳಿಯ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ೧೨ ಸ್ಥಾನಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಜ.೧೮ ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಅಖಾಡದಲ್ಲಿ ಕೆ.ಆರ್.ಪೇಟೆ ಶಾಸಕ ಎಚ್.ಟಿ. ಮಂಜು, ಮನ್‌ಮುಲ್ ಹಾಲಿ ಅಧ್ಯಕ್ಷ ಬೋರೇಗೌಡ, ಮಾಜಿ ಅಧ್ಯಕ್ಷರಾದ ಬಿ.ಆರ್.ರಾಮಚಂದ್ರು, ಎಂ.ಬಿ.ಹರೀಶ್, ಕದಲೂರು ರಾಮಕೃಷ್ಣ, ಹಾಲಿ ನಿರ್ದೇಶಕರಾಗಿರುವ ಎಸ್.ಪಿ.ಸ್ವಾಮಿ, ರೂಪಾ, ಯು.ಸಿ.ಶಿವಕುಮಾರ್, ಎಂ.ಎಸ್.ರಘುನಂದನ್, ವಿಶ್ವನಾಥ್, ಲಕ್ಷ್ಮೀನಾರಾಯಣ ಸೇರಿದಂತೆ ಹಲವು ಹಳೆಯ ಹುಲಿಗಳು ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಅಖಾಡಕ್ಕಿಳಿದಿದ್ದಾರೆ.

ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಅಣ್ಣನ ಮಗ ಶಿವಕುಮಾರ್ ಹಾಗೂ ಮದ್ದೂರು ಕ್ಷೇತ್ರದ ಶಾಸಕ ಕದಲೂರು ಉದಯ್ ಸಂಬಂಧಿ ಹರೀಶ್‌ ಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಕೂಡ ಹಳೆಯ ಹುಲಿಗಳೆದುರು ಕಾದಾಟಕ್ಕಿಳಿಯುವುದಕ್ಕೆ ವೇದಿಕೆ ಸಜ್ಜುಗೊಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ಪಕ್ಷದ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಾದರೂ ಚುನಾವಣೆ ಎದುರಿಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಕೆ.ಆರ್.ಪೇಟೆ:

ಕೆ.ಆರ್.ಪೇಟೆ ತಾಲೂಕಿನ ಎರಡು ಸ್ಥಾನಗಳಿಗೆ ಶಾಸಕ ಎಚ್.ಟಿ.ಮಂಜು, ಮಹೇಶ್ ನಾಟನಹಳ್ಳಿ ಅವರು ಒಗ್ಗೂಡಿ ಚುನಾವಣೆ ತಾಲೀಮು ನಡೆಸುತ್ತಿದ್ದರೆ, ಇವರಿಗೆ ಎದುರಾಗಿ ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಮತ್ತು ನಿರ್ದೇಶಕ ಡಾಲು ರವಿ ಕೂಡ ಪೈಪೋಟಿ ನಡೆಸಿದ್ದಾರೆ. ಎಂ.ಬಿ.ಹರೀಶ್ ಮತ್ತು ಡಾಲು ರವಿ ಜೆಡಿಎಸ್ ಪಕ್ಷದಲ್ಲೇ ಇದ್ದಾರೆ. ಆದರೆ, ಭಿನ್ನಮತದಿಂದಾಗಿ ಹಾಲಿ ಶಾಸಕರ ವಿರುದ್ಧ ಸೆಟೆದು ನಿಂತಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳದಿದ್ದರೂ ಕಾಂಗ್ರೆಸ್‌ನವರ ಬೆಂಬಲ ಪಡೆದುಕೊಂಡು ಹಾಲಿ ಶಾಸಕರಿಗೆ ಮುಖಭಂಗ ಉಂಟುಮಾಡಲು ಟೊಂಕಕಟ್ಟಿ ನಿಂತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಶಾಸಕರಾಗಿರುವ ಎಚ್.ಟಿ.ಮಂಜು ಕೂಡ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಮಹೇಶ್ ನಾಟನಹಳ್ಳಿ ಅವರನ್ನು ಜೊತೆಗೂಡಿಸಿಕೊಂಡು ಮತಬೇಟೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಮನ್‌ಮುಲ್ ಅಖಾಡ ರೋಚಕತೆಯಿಂದ ಕೂಡಿದೆ. ಹಳೆಯ ಹುಲಿಗಳಿಗೆ ಚುನಾವಣಾ ಹೋರಾಟ ನಡೆಸಿ ಅಭ್ಯಾಸವಿದೆ. ಇದರ ನಡುವೆ ಹೊಸಬರು ಯಾರನ್ನು ಮಣಿಸಿ ಮನ್‌ಮುಲ್ ಗದ್ದುಗೆ ಹಿಡಿಯುವರು ಎನ್ನುವುದಷ್ಟೇ ಕುತೂಹಲ.

ಮಳವಳ್ಳಿ:

ಮಳವಳ್ಳಿ ತಾಲೂಕಿನ ಒಂದು ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಕೃಷ್ಣೇಗೌಡ, ಜೆಡಿಎಸ್‌ನಿಂದ ಹಾಲಿ ನಿರ್ದೇಶಕ ವಿಶ್ವನಾಥ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ವಿಷಕಂಠ ಎಂಬುವರು ಕಣಕ್ಕಿಳಿಯಲು ಮುಂದಾಗಿದ್ದಾರೆ. ಜೆಡಿಎಸ್‌ನಿಂದ ವಿಶ್ವನಾಥ್ ಅವರಿಗೆ ಎರಡು ಬಾರಿ ಅವಕಾಶ ದೊರಕಿದ್ದು, ಈ ಬಾರಿ ತಮಗೇ ಅವಕಾಶ ನೀಡುವಂತೆ ವಿಷಕಂಠ ಅವರು ದಳಪತಿಗಳಿಗೆ ದುಂಬಾಲು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀರಂಗಪಟ್ಟಣ:

ಶ್ರೀರಂಗಪಟ್ಟಣ ತಾಲೂಕಿನ ೧ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಹಾಲಿ ಅಧ್ಯಕ್ಷ ಬೋರೇಗೌಡ ಮತ್ತೊಮ್ಮೆ ಚುನಾವಣೆ ಎದುರಿಸುವುದಕ್ಕೆ ಸಜ್ಜಾಗಿದ್ದಾರೆ. ಇವರಿಗೆ ಎದುರಾಗಿ ಸದ್ಯಕ್ಕೆ ಜೆಡಿಎಸ್ ಮತ್ತು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಇದು ಬೋರೇಗೌಡರಿಗೆ ವರದಾನವಾಗಿ ಪರಿಣಮಿಸಿದೆ. ಈಗಾಗಲೇ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಬೆಂಬಲದಿಂದ ಮನ್‌ಮುಲ್ ಅಧ್ಯಕ್ಷರಾಗಿ ಎರಡು ಬಾರಿ ಆಯ್ಕೆಯಾಗಿರುವ ಬೋರೇಗೌಡರು ಮತ್ತೊಮ್ಮೆ ಚುನಾವಣೆ ಎದುರಿಸುವುದಕ್ಕೆ ತೊಡೆ ತಟ್ಟಿ ಅಖಾಡಕ್ಕಿಳಿದಿದ್ದಾರೆ.

ಪಾಂಡವಪುರ:

ಪಾಂಡವಪುರ ತಾಲೂಕಿನ ಒಂದು ಸ್ಥಾನಕ್ಕೆ ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಸಹೋದರನ ಮಗ ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದಿಂದ ಕಾಡೇನಹಳ್ಳಿ ರಾಮಚಂದ್ರು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸಿ.ಎಸ್.ಪುಟ್ಟರಾಜು ಕೃಪಾಕಟಾಕ್ಷದಿಂದ ಗೆಲುವು ಸಾಧಿಸುತ್ತಿದ್ದ ಕಾಡೇನಹಳ್ಳಿ ರಾಮಚಂದ್ರು ಅವರು ಕಳೆದ ವಿಧಾನಸಭಾ ಚುನಾವಣೆಯಿಂದ ಪುಟ್ಟರಾಜು ಅವರೊಂದಿಗೆ ವೈಮನಸ್ಸಿನಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಜಿಗಿದಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧೆಗೆ ಸಿದ್ಧರಾಗಿರುವ ಶಿವಕುಮಾರ್‌ಗೆ ಚಿಕ್ಕಪ್ಪ ಸಿ.ಎಸ್.ಪುಟ್ಟರಾಜು ಬೆಂಬಲವಿರುವುದರಿಂದ ಫುಲ್ ಜೋಶ್‌ನಿಂದಲೇ ಚುನಾವಣೆ ತಾಲೀಮು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಂಡ್ಯ:

ಮಂಡ್ಯ ತಾಲೂಕಿನ ೩ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದಿಂದ ಯು.ಸಿ.ಶಿವಕುಮಾರ್, ಕೆಬ್ಬಳ್ಳಿ ರಾಜು, ಹೆಮ್ಮಿಗೆ ಕಾಳೇಗೌಡ, ಜೆಡಿಎಸ್‌ನಿಂದ ಬಿ.ಆರ್.ರಾಮಚಂದ್ರ, ಎಂ.ಎಸ್.ರಘುನಂದನ್ ಹಾಗೂ ಕನ್ನಲಿ ವಿಜಯ್ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಯು.ಸಿ.ಶಿವಕುಮಾರ್ ಪ್ರತ್ಯೇಕವಾಗಿ ತಮ್ಮೊಬ್ಬರ ಗೆಲುವನ್ನೇ ಕೇಂದ್ರೀಕರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆನ್ನಲಾಗಿದ್ದು, ಕೆಬ್ಬಳ್ಳಿ ರಾಜು ಮತ್ತು ಹೆಮ್ಮಿಗೆ ಕಾಳೇಗೌಡ ಅವರೂ ಕೂಡ ಒಗ್ಗಟ್ಟಾಗಿ ಚುನಾವಣೆ ಎದುರಿಸದೆ ಪ್ರತ್ಯೇಕವಾಗಿಯೇ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆನ್ನಲಾಗಿದೆ. ಆದರೆ, ಜೆಡಿಎಸ್‌ನಲ್ಲಿ ಬಿ.ಆರ್.ರಾಮಚಂದ್ರು, ಎಂ.ಎಸ್.ರಘುನಂದನ್, ಕನ್ನಲಿ ವಿಜಯ್ ಮೂವರೂ ಒಗ್ಗಟ್ಟಿನಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿದ್ದಾರೆ.

ನಾಗಮಂಗಲ:

ಸಚಿವ ಎನ್.ಚಲುವರಾಯಸ್ವಾಮಿ ಅವರ ತವರು ಕ್ಷೇತ್ರ ನಾಗಮಂಗಲ ತಾಲೂಕಿನ ೨ ನಿರ್ದೇಶಕ ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಮನ್‌ಮುಲ್ ನಾಮನಿರ್ದೇಶಿತ ಸದಸ್ಯ ಲಕ್ಷ್ಮೀನಾರಾಯಣ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ನಿಂದ ನೆಲ್ಲೀಗೆರೆ ಬಾಲು, ದೇವೇಗೌಡ, ಫೈಟರ್ ರವಿ ಅವರು ಸ್ಪರ್ಧಿಸುವರೆಂಬ ಮಾತುಗಳು ಕೇಳಿಬರುತ್ತಿವೆ. ಮಾಜಿ ಶಾಸಕ ಕೆ.ಸುರೇಶ್‌ಗೌಡರೊಂದಿಗಿನ ಭಿನ್ನಮತದಿಂದಾಗಿ ಜೆಡಿಎಸ್ ಅಭ್ಯರ್ಥಿಗಳಲ್ಲಿ ಪ್ರಬಲ ಪೈಪೋಟಿ ವ್ಯಕ್ತವಾಗುತ್ತಿಲ್ಲವೆನ್ನಲಾಗಿದೆ. ಇದು ಕಾಂಗ್ರೆಸ್ ಅಭ್ಯರ್ಥಿಗಳಾಗಿರುವ ಅಪ್ಪಾಜಿಗೌಡ ಮತ್ತು ಲಕ್ಷ್ಮೀನಾರಾಯಣ ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿಕೊಡಬಹುದೆಂದು ಹೇಳಲಾಗುತ್ತಿದೆ.

ಮದ್ದೂರು:

ಮದ್ದೂರು ತಾಲೂಕಿನ ೨ ನಿರ್ದೇಶಕಕ ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಕದಲೂರು ರಾಮಕೃಷ್ಣ, ಶಾಸಕ ಕೆ.ಎಂ.ಉದಯ್ ಸಂಬಂಧಿ ಹರೀಶ್‌ಬಾಬು, ಜೆಡಿಎಸ್‌ನಿಂದ ಪುರಸಭೆ ಸದಸ್ಯ ಮಹೇಶ್, ಬಿಜೆಪಿಯಿಂದ ಹಾಲಿ ನಿರ್ದೇಶಕರಾಗಿರುವ ಎಸ್.ಪಿ.ಸ್ವಾಮಿ ಮತ್ತು ರೂಪಾ ಅಖಾಡದಲ್ಲಿದ್ದಾರೆ.

ಕದಲೂರು ರಾಮಕೃಷ್ಣ ಈಗಾಗಲೇ ಮನ್‌ಮುಲ್ ಅಧ್ಯಕ್ಷರಾಗಿದ್ದು, ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು. ಜೆಡಿಎಸ್‌ನಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಎಸ್.ಪಿ.ಸ್ವಾಮಿ ಅವರು ನಂತರ ಶಾಸಕರಾಗಿದ್ದ ಡಿ.ಸಿ.ತಮ್ಮಣ್ಣ ವಿರುದ್ಧ ಸಿಡಿದು ಮನ್‌ಮುಲ್ ಅಧ್ಯಕ್ಷರಾಗುವ ಹಂಬಲದೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಆದರೆ, ಆ ಆಸೆ ಕೈಗೂಡಿರಲಿಲ್ಲ. ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗುವುದಕ್ಕೆ ಎಸ್.ಪಿ.ಸ್ವಾಮಿ ಪ್ರಬಲ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಎದುರಾಗಿ ಎನ್‌ಡಿಎ ಅಭ್ಯರ್ಥಿಯಾಗಲು ರೂಪಾ ಕೂಡ ಬಿಜೆಪಿ ನಾಯಕರ ಹಂತದಲ್ಲಿ ತೀವ್ರ ಲಾಭಿ ನಡೆಸುತ್ತಿದ್ದಾರೆ. ಉಭಯ ಪಕ್ಷಗಳ ನಾಯಕರು ಯಾರನ್ನು ಎನ್‌ಡಿಎ ಅಭ್ಯರ್ಥಿ ಮಾಡುವರು ಎಂಬುದನ್ನು ಕಾದುನೋಡಬೇಕಿದೆ.

ಮತದಾನ ಹಕ್ಕು ಕೊಡಿಸುವಲ್ಲೂ ತಂತ್ರಗಾರಿಕೆ

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮತದಾನದ ಹಕ್ಕನ್ನು ಕೊಡಿಸುವಲ್ಲೂ ಸಾಕಷ್ಟು ತಂತ್ರಗಾರಿಕೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಹಲವೆಡೆ ಘರ್ಷಣೆಗಳು ನಡೆದು ಕೊಲೆ ಬೆದರಿಕೆಯಂತಹ ದೂರುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿವೆ. ಜೆಡಿಎಸ್ ಪ್ರಾಬಲ್ಯವಿರುವ ಕಡೆಗಳಲ್ಲಿ ಕಾಂಗ್ರೆಸ್ಸಿಗರು ತಮ್ಮ ರಾಜಕೀಯ ಪ್ರಭಾವ ಬಳಸಿ ಕಾಂಗ್ರೆಸ್ ಸದಸ್ಯರಿಗೆ ಮತದಾನದ ಹಕ್ಕನ್ನು ಕೊಡಿಸುತ್ತಿರುವುದು. ಕೆಲವೆಡೆ ಜೆಡಿಎಸ್‌ನಲ್ಲಿರುವ ಸದಸ್ಯರನ್ನು ಕಾಂಗ್ರೆಸ್ ಕಡೆಗೆ ಸೆಳೆಯುವುದು, ಕಾಂಗ್ರೆಸ್ ಕಡೆಗಿರುವ ಸದಸ್ಯರನ್ನು ತಮ್ಮೆಡೆಗೆ ಸೆಳೆದು ಅವರಿಗೆ ಮತದಾನದ ಹಕ್ಕನ್ನು ದೊರಕಿಸುವ ಪ್ರಯತ್ನಗಳು ನಡೆಯುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿವೆ.

ಒಂದು ಮತಕ್ಕೆ ೧೩ ಲಕ್ಷ ರು.ವರೆಗೆ ನಿಗದಿ

ಮನ್‌ಮುಲ್ ಚುನಾವಣೆಯಲ್ಲಿ ಒಂದು ಮತಕ್ಕೆ ೧೩ ಲಕ್ಷ ರು.ವರೆಗೆ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಮತಗಳು ಖಚಿತವಾಗಿ ಬರಲಿವೆ ಎಂಬುದು ಗೊತ್ತಾದ ಕಡೆಗೆ ಒಂದೇ ಬಾರಿಗೆ ಹಣ ಪಾವತಿಯಾಗುತ್ತಿದ್ದರೆ, ರಾಜಕೀಯ ಪ್ರಭಾವ ಹೆಚ್ಚಾಗಿರುವ ಕಡೆ ಅಡ್ವಾನ್ಸ್ ರೂಪದಲ್ಲಿ ಸ್ವಲ್ಪ ಹಣ ಕೊಟ್ಟು ಚುನಾವಣಾ ಕಾಲಕ್ಕೆ ಪೂರ್ಣ ಪ್ರಮಾಣದಲ್ಲಿ ನೀಡುವ ಭರವಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್-ಜೆಡಿಎಸ್‌ನವರು ಕೆಲವೆಡೆ ಒಗ್ಗಟ್ಟಾಗಿ ಹೋಗಿ ಮತಬೇಟೆಯಲ್ಲಿ ತೊಡಗಿದ್ದರೆ, ಇನ್ನೂ ಕೆಲವೆಡೆ ಪ್ರತ್ಯೇಕವಾಗಿ ಓಟಿನ ಬೇಟೆಯಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ. ಮದ್ದೂರು ತಾಲೂಕು ಹೊರತುಪಡಿಸಿ ಬೇರೆಲ್ಲೂ ಎನ್‌ಡಿಎ ಅಭ್ಯರ್ಥಿ ಮಾತುಗಳು ಕೇಳಿಬರದಿರುವುದು ವಿಶೇಷ.