ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಮನ್ಮುಲ್ ಒಕ್ಕೂಟ ಹಲವು ಸವಲತ್ತು ನೀಡುತ್ತಿದೆ. ರೈತರು ಇದರ ಪ್ರಯೋಜನ ಪಡೆದು ಡೇರಿಗಳಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಸಲಹೆ ನೀಡಿದರು.ಪಟ್ಟಣದ ಮನ್ಮುಲ್ ಉಪಕಚೇರಿಯಲ್ಲಿ ರಾಸುಗಳ ಮಾಲೀಕರಿಗೆ ವಿಮೆ ಚೆಕ್, ರೈತ ಕಲ್ಯಾಣ ನಿಧಿ ಹಾಗೂ ಗುಂಪು ವಿಮಾ ಯೋಜನೆಯಡಿಯಲ್ಲಿ ರೈತರಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಒಕ್ಕೂಟ ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಮತ್ತು ಹಾಲು ಕರೆಯುವ ಯಂತ್ರಗಳಿಗೆ ಶೇ.50 ಸಬ್ಸಿಡಿ ನೀಡುತ್ತದೆ. ಜತೆಗೆ ರಾಸುಗಳ ವಿಮೆ ಹಣವನ್ನು ಶೇ.50 ರಷ್ಟು ಭರಿಸುತ್ತದೆ. ರೈತರು ಉಳಿಕೆ ಹಣವನ್ನು ಪಾವತಿಸಿ ರಾಸುಗಳನ್ನು ವಿಮೆ ವ್ಯಾಪ್ತಿಗೆ ತರಬೇಕು. ಇದರಿಂದ ರಾಸುಗಳು ಆಕಸ್ಮಿಕವಾಗಿ ಮೃತಪಟ್ಟರೆ 50 ರಿಂದ 60 ಸಾವಿರದವರೆಗೂ ವಿಮೆ ಹಣ ಸಿಗುತ್ತದೆ ಎಂದರು.ಮನ್ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಒಕ್ಕೂಟ ನೀಡುತ್ತಿರುವ ಸವಲತ್ತುಗಳ ಬಗ್ಗೆ ಡೇರಿ ಕಾರ್ಯದರ್ಶಿಗಳು ಉತ್ಪಾದಕರಿಗೆ ಮಾಹಿತಿ ನೀಡಬೇಕು. ತಾಲೂಕಿನಲ್ಲಿ 1.2 ಲಕ್ಷ ಹಾಲು ಉತ್ಪಾದಕರಿದ್ದು, ಕೇವಲ ನಾಲ್ವರು ಮಾರ್ಗ ವಿಸ್ತರಣಾಧಿಕಾರಿಗಳು ಇದ್ದಾರೆ. ಹೀಗಾಗಿ ಕಾರ್ಯದರ್ಶಿಗಳು ಒಕ್ಕೂಟದ ನೀಡುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾರ್ಗವಿಸ್ತರಾಣಾಧಿಕಾರಿಗಳಾದ ಎಚ್.ಎನ್.ಉಷಾ, ಜಗದೀಶ್, ಪ್ರಜ್ವಲ್, ನಾಗೇಂದ್ರಕುಮಾರ್, ಮಾರುಕಟ್ಟೆ ಕ್ಷೇತ್ರಾಧಿಕಾರಿ ಎಚ್.ಸಿ.ರಾಜು ಇತರರು ಇದ್ದರು.ರೋಟರಿ ಸಂಸ್ಥೆ ಸ್ಥಾಪನೆಗೆ 50 ವರ್ಷ, ಹಲವು ಜನಪರ ಕಾರ್ಯಕ್ರಮ ಆಯೋಜನೆಗೆ ಚಿಂತನೆ: ಎಂ.ಜೆ.ಸುರೇಶ್
ಕನ್ನಡಪ್ರಭ ವಾರ್ತೆ ಮಳವಳ್ಳಿರೋಟರಿ ಸಂಸ್ಥೆ ಸ್ಥಾಪನೆಗೊಂಡು 50ನೇ ವಸಂತಕ್ಕೆ ಕಾಲಿಡುತ್ತಿರುವ ಪ್ರಯುಕ್ತ ಸುವರ್ಣ ಸಂಭ್ರಮದಡಿಯಲ್ಲಿ ಸಂಸ್ಥೆಯಿಂದ ಹಲವು ಜನಪರ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಜೆ ಸುರೇಶ್ ತಿಳಿಸಿದರು.ಪಟ್ಟಣದ ರೋಟರಿ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 49 ವರ್ಷಗಳಿಂದ ಹಲವು ಆರೋಗ್ಯ ತಪಾಸಣಾ ಶಿಬಿರ, ವೃತ್ತಿಪರ ತರಬೇತಿ, ಹೃದಯಶಸ್ತ್ರ ಚಿಕಿತ್ಸೆ, ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರದ ಕೊಡುಗೆ, ಫೇಸ್‌ಮೇಕರ್ ಯಂತ್ರದ ಅಳವಡಿಕೆ ಸೇರಿ ಹಲವು ಬಗೆಯ ಜನೋಪಯೋಗಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ರೋಟರಿ ಶಾಲೆಯೂ ಕಳೆದ 50 ವರ್ಷದಿಂದ ಮೌಲ್ಯವರ್ಥಿತ ಶಿಕ್ಷಣ ನೀಡುತ್ತಾ ಬರುತ್ತಿದೆ ಎಂದರು.ಸಂಸ್ಥೆ 50 ವರ್ಷದ ಪೂರೈಸಿದ ಅಂಗವಾಗಿ ರೋಟರಿ ಕಣ್ಣಿನ ಆಸ್ಪತ್ರೆ ನಿರ್ಮಾಣ, ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನ, ಮಹಿಳೆಯರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತದೆ, ತಾಲೂಕಿನ ಹಲವು ಸರ್ಕಾರಿ ಶಾಲೆಗಳ ಅರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಜೊತೆಗೆ ಸರ್ಕಾರಿ ಶಾಲೆಗಳ ಹೆಚ್ಚು ಮಕ್ಕಳಿಗೆ ಶೌಚಾಲಯ ಕೊಠಡಿಗಳನ್ನು ಗ್ರಾಮಾಂತರ ಶಾಲೆಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಒಂದು ಸರ್ಕಾರಿ ಶಾಲೆಗೆ ಊಟ ಮಾಡಲು ಡೈನಿಂಗ್ ಹಾಲ್ ನಿರ್ಮಾಣಕ್ಕೆ ಒತ್ತು, ತಾಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಉತ್ತಮಗೊಳಿಸಲು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಭೋದನಾ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.ರೋಟರಿ ಶಾಲೆಯಲ್ಲಿ ಅರ್ಥಿಕವಾಗಿ ಹಿಂದುಳಿದ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರೋಟರಿ ಸದಸ್ಯರು ದತ್ತು ಸ್ವೀಕರಿಸಿ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದರು.ಗ್ರಾಮಾಂತರ ಪ್ರದೇಶದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡಿಕೆ ಜೊತೆಗೆ ಮಹಾನೀಯರ ಜಯಂತಿಗಳನ್ನು ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಹಿರಿಯರ ರೀತಿ ಜೀವನವನ್ನು ನಡೆಸುವ ಬಗ್ಗೆ ಪ್ರೇರಣೆ ನೀಡಲು ಉದ್ದೇಶಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರೋಟರಿ ಶಾಲೆ ಸದಸ್ಯರು ಹಾಗೂ ಪದಾಧಿಕಾರಿಗಳು ಇದ್ದರು.