ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಯತಿಕುಲ ತಿಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ಶ್ರೀ ಗುರುರಾಯರ 353ನೇ ಆರಾಧಾನಾ ಮಹೋತ್ಸವ ಹಿನ್ನೆಲೆಯಲ್ಲಿ ಬುಧವಾರ ನಡೆದ ಮಧ್ಯಾರಾಧನೆಯ ಮೆರಗು ಭಕ್ತಿಯನ್ನು ಎಲ್ಲೆಡೆ ಪಸರಿಸಿತು.
ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ತಟದ ಸು-ಸುಕ್ಷೇತ್ರವು ರಾಯರ ಆರಾಧನಾ ಮಹೋತ್ಸವದಿಂದಾಗಿ ದೀಪಾಲಂಕಾರ, ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಮಧ್ಯಾರಾಧನೆ ದಿನ ಸಂಭ್ರಮ-ಸಡಗರವು ಇನ್ನಷ್ಟು ಹೆಚ್ಚಾಗಿತ್ತು. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ರಾಯರ ದರ್ಶನ ಪಡೆದು ಪುನಿತಗೊಂಡರು.ಮಧ್ಯಾರಾಧನ ವಿಶೇಷತೆ: 353 ವರ್ಷಗಳ ಹಿಂದೆ ಶ್ರೀರಾಘವೇಂದ್ರ ಸ್ವಾಮಿಗಳ ಸಜೀವರಾಗಿ ಬೃಂದಾವನ ಪ್ರವೇಶ ಮಾಡಿದ ದಿನವನ್ನು ಶ್ರೀ ಮಠದಿಂದ ಶ್ರೀ ಗುರುರಾಯರ ಆರಾಧನಾ ಮಹೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವರ್ಷಪೂರ್ತಿ ಬೃಂದಾವನದಲ್ಲಿ ಧ್ಯಾನಾಸಕ್ತರಾಗಿರುವ ರಾಯರು ಮಧ್ಯಾರಾಧನೆ ದಿನದಂದು ಕಣ್ಣು ತೆರೆದು ಭಕ್ತರನ್ನು ಕಾಣುತ್ತಾರೆ, ಅಲ್ಲದೇ ಪೀಠಾಧಿಪತಿಗಳು ಮೂಲಬೃಂದಾವನಕ್ಕೆ ಮಹಾಪಂಚಾಮೃತಾಭಿಷೇಕ ನೆರವೇರಿಸಲಿದ್ದು, ಬೃಂದಾವನದ ನಾಲ್ಕು ಕಡೆ ಅಲಂಕಾರ, ಸುವರ್ಣ ಮೂರ್ತಿಗೆ ವಿಶೇಷ ಪೂಜೆ, ಪ್ರಾಂಗಣದಲ್ಲಿ ಸುವರ್ಣ ರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಪಂಡಿತರು ತಿಳಿಸುತ್ತಾರೆ.
ಸೇವೆಯಲ್ಲಿ ಭಕ್ತಿ: ಶ್ರೀಮಠದಲ್ಲಿ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಸಪ್ತರಾತ್ರೋತ್ಸವದಲ್ಲಿ ಸೇವಾ ಕಾರ್ಯಕರ್ತರ ಕಾರ್ಯವು ಅತ್ಯಂತ ದೊಡ್ಡದಾಗಿದೆ. ದರ್ಶನದ ಸರತಿ ಸಾಲು, ಅನ್ನಪೂರ್ಣ ಭೋಜನಾಲಯ, ಪ್ರಾಂಗಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡುವವರು ತಮ್ಮ ಸೇವೆಯಲ್ಲಿ ರಾಯರಿಗೆ ಭಕ್ತಿಯನ್ನು ತೋರುತ್ತಾರೆ. ಆರಾಧನೆಯಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಜನರಿಗೆ ಅಗತ್ಯವಾದ ಮಾರ್ಗದರ್ಶನ, ನೂಕುನುಗ್ಗಲು ಆಗದಂತೆ ಎಚ್ಚರಿಕೆ ವಹಿಸುವುದು, ಭೋಜನಾಲಯದಲ್ಲಿ ತೀರ್ಥ-ಪ್ರಸಾದ ವಿತರಣೆ, ಪರಿಮರ ಪ್ರಸಾದ ಕೌಂಟರ್‌ನಲ್ಲಿದ್ದುಕೊಂಡು ಭಕ್ತರಿಗೆ ಪ್ರಸಾದ ಕೊಡುವುದು ಸೇರಿ ಇತರೆ ಸೇವೆಯಲ್ಲಿಯೇ ರಾಯರನ್ನು ಕಂಡು ಅವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.ಭಕ್ತರ ಗಮನ ಸೆಳೆದ ಕನ್ನಡಪ್ರಭ: ಪ್ರತಿ ವರ್ಷದಂತೆ ಈ ಬಾರಿಯೂ ರಾಯರ 353ನೇ ಆರಾಧನಾ ಮಹೋತ್ಸವ ನಿಮಿತ್ತ ಕನ್ನಡಪ್ರಭ ದಿಂದ ಹೊರತಂದ ಶ್ರೀ ಗುರುರಾಜೋವಿಜಯತೇ ವಿಶೇಷ ಪುಟಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀಮಠದ ಭಕ್ತರ ಕೈಯಲ್ಲಿ ಕನ್ನಡಪ್ರಭ ಕಂಗೊಳಿಸುವುದರ ಜೊತೆಗೆ ಭಕ್ತರ ಗಮನ ಸೆಳೆಯಿತು.
ರಾಯರ ದರ್ಶನ ಪಡೆದ ನಟ ಜಗ್ಗೇಶ: ಆರಾಧನಾ ಮಹೋತ್ಸವದಲ್ಲಿ ತಪ್ಪದೇ ಪಾಲ್ಗೊಳ್ಳುವ ರಾಜ್ಯಸಭಾ ಸದಸ್ಯ ಹಾಗೂ ಚಿತ್ರನಟ ಜಗ್ಗೇಶ ಅವರು ಈ ಬಾರಿಯೂ ಸುಕ್ಷೇತ್ರ ಮಂತ್ರಾಲಯಕ್ಕೆ ಆಗಮಿಸಿ ಶ್ರೀ ಗುರುಸಾರ್ವಭೌಮರ ಮೂಲ ಬೃಂದಾವನದ ದರ್ಶನ ಪಡೆದು, ಮಂಗಳಾರತಿ ಮಾಡಿ ಭಕ್ತಿಯನ್ನು ಸಮರ್ಪಿಸಿದರು. ಸಾಮಾನ್ಯ ಭಕ್ತರಂತೆ ಬಂದಿದ್ದ ಜಗ್ಗೇಶ ಅವರು ರಾಯರ ದರ್ಶನ ಮಾಡಿ ಶ್ರೀ ಗಳಿಂದ ಆಶೀರ್ವಾದ ಪಡೆದರು.
ಇಂದು ಉತ್ತರಾರಾಧನೆ, ಮಹಾರಥೋತ್ಸವ, ಸಂಸದ ಒಡೆಯರ್ ಭಾಗಿ: ಗುರುವಾರ ಶ್ರೀ ರಾಯರ ಉತ್ತರಾರಾಧನೆ, ಮಹಾರಥೋತ್ಸವ ನಡೆಯಲಿದ್ದು, ಮೈಸೂರಿನ ಸಂಸದ, ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರು ಭಾಗಿಯಾಗಲಿದ್ದಾರೆ. ಇದೇ ಮೊದಲ ಬಾರಿಗೆ ಶ್ರೀ ಮಠಕ್ಕೆ ಆಗಮಿಸುತ್ತಿರುವ ಸಂಸದ ಒಡೆಯರ್ ಅವರಿಗೆ ರಾಯರ ಅನುಗ್ರಹ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ-ಗೌರವಿಸಲಾಗುತ್ತಿದೆ.