ಹಳೆಗನ್ನಡ ಸಾಹಿತ್ಯ, ಶಾಸನಗಳು ಹಾಗೂ ಹಸ್ತಪ್ರತಿಗಳು ನಮ್ಮ ಜ್ಞಾನದ ಅಧ್ಯಯನಕ್ಕೆ ಮೂಲ ಬೇರುಗಳಾಗಿವೆ. ಇವು ದೇಶದ ಅಮೂಲ್ಯ ಆಸ್ತಿಯಾಗಿದ್ದು, ಅವುಗಳ ಅಧ್ಯಯನ ಮತ್ತು ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಹಿರಿಯ ವಿದ್ವಾಂಸ ಡಾ. ವೀರಣ್ಣ ದಂಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ಹಳೆಗನ್ನಡ ಸಾಹಿತ್ಯ, ಶಾಸನಗಳು ಹಾಗೂ ಹಸ್ತಪ್ರತಿಗಳು ನಮ್ಮ ಜ್ಞಾನದ ಅಧ್ಯಯನಕ್ಕೆ ಮೂಲ ಬೇರುಗಳಾಗಿವೆ. ಇವು ದೇಶದ ಅಮೂಲ್ಯ ಆಸ್ತಿಯಾಗಿದ್ದು, ಅವುಗಳ ಅಧ್ಯಯನ ಮತ್ತು ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕೆಂದು ಹಿರಿಯ ವಿದ್ವಾಂಸ ಡಾ. ವೀರಣ್ಣ ದಂಡೆ ಹೇಳಿದರು.ನಗರದ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗ, ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಕ.ರಾ.ಶಿ. ಸಂಸ್ಥೆಯ ಕಲ್ಯಾಣ ಕರ್ನಾಟಕ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ 23ನೇ ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ನಮ್ಮ ನಾಡಿನ ಹಾಗೂ ವಿಶ್ವದ ಪ್ರಾಚೀನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಯಲು ಹಸ್ತಪ್ರತಿಗಳ ಅಧ್ಯಯನ ಅತ್ಯಗತ್ಯ. ಕಾವ್ಯ, ಶಾಸ್ತ್ರ, ನಾಟಕ ಸಾಹಿತ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿವರಗಳು ಸೇರಿದಂತೆ ವಿವಿಧ ಜ್ಞಾನ ಶಾಖೆಗಳ ಮಾಹಿತಿಯನ್ನು ಹಸ್ತಪ್ರತಿಗಳ ಮೂಲಕ ತಿಳಿದುಕೊಳ್ಳಬಹುದು. ಹೀಗಾಗಿ ಅವುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಹಸ್ತಪ್ರತಿಗಳನ್ನು ಉಳಿಸಿ ಬೆಳೆಸುವಲ್ಲಿ ಜನಸಾಮಾನ್ಯರ ಕೊಡುಗೆ ಮಹತ್ವದ್ದಾಗಿದೆ. ಭಾರತೀಯ ಜ್ಞಾನ ಪರಂಪರೆಯ ಅಸ್ಮಿತೆಯಾಗಿರುವ ಹಸ್ತಪ್ರತಿಗಳ ಸಂರಕ್ಷಣೆ ವಿಶೇಷವಾಗಿ ಬೀದರ್ ಜಿಲ್ಲೆಯಲ್ಲಿಯೂ ಅಗತ್ಯವಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬೀದರ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಹೇಳಿದರು.ಹಸ್ತಪ್ರತಿ ಅಧ್ಯಯನಕ್ಕೆ ಯುವಜನರು ಮುಂದಾಗಲಿ: ಅಧ್ಯಕ್ಷತೆ ವಹಿಸಿದ್ದ ಕ.ರಾ.ಶಿ. ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ. ಶೆಟೆಕಾರ ಮಾತನಾಡಿ, ಹಸ್ತಪ್ರತಿಗಳನ್ನು ಸಂಗ್ರಹಿಸಿ, ಅವುಗಳ ಅಧ್ಯಯನ ನಡೆಸುವುದರ ಜತೆಗೆ ಸಮ್ಮೇಳನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಹಸ್ತಪ್ರತಿಗಳು ಜ್ಞಾನ ಜಾಗೃತಿಯ ಮಾಧ್ಯಮ: ಸಮ್ಮೇಳನದ ಸರ್ವಾಧ್ಯಕ್ಷ ಡಾ. ನಾ. ಗೀತಾಚಾರ್ಯ ಮಾತನಾಡಿ, ಹಸ್ತಪ್ರತಿಗಳು ನಮ್ಮಲ್ಲಿ ಸಾಂಸ್ಕೃತಿಕ ಹಾಗೂ ಮಾನಸಿಕ ಜ್ಞಾನವನ್ನು ಜಾಗೃತಗೊಳಿಸುತ್ತಾ ಬಂದಿವೆ. ಇಂದಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಹಸ್ತಪ್ರತಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಹಸ್ತಪ್ರತಿ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗವು ಕಳೆದ 35 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ, ಪ್ರಾಚಾರ್ಯ ಸೋಮನಾಥ ಬಿರಾದಾರ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಮಹಾನಂದ ಮಡಕಿ ಅವರು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಅಬ್ದುಲ್ ಖದೀರ ಹಾಗೂ ಕ.ರಾ.ಶಿ. ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಗಾದಗಿ ಉಪಸ್ಥಿತರಿದ್ದರು. ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿದ ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.