ಸದ್ಧರ್ಮ ಪೀಠದಲ್ಲಿ ಹಲವು ಅಭಿವೃದ್ಧಿ ಕಾರ್ಯ

| Published : Nov 05 2023, 01:16 AM IST

ಸಾರಾಂಶ

ಕೊಟ್ಟೂರು ತಾಲೂಕಿನ ಶ್ರೀ ಸದ್ಧರ್ಮ ಪೀಠದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಪೀಠಾರೋಹಣದ ದ್ವಾದಶ ವರ್ಧಂತಿ ಆಚರಣೆ ಕಾರ್ಯಕ್ರಮ ಹಾಗೂ ನೂತನ ಪ್ರಸಾದ ನಿಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕೊಟ್ಟೂರು: ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಭಕ್ತರು ಈ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡಬೇಕಿದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಶ್ರೀ ಸದ್ಧರ್ಮ ಪೀಠದಲ್ಲಿ ನಡೆದ ಜಗದ್ಗುರುಗಳ ಪೀಠಾರೋಹಣದ ದ್ವಾದಶ ವರ್ಧಂತಿ ಆಚರಣೆ ಕಾರ್ಯಕ್ರಮ ಹಾಗೂ ನೂತನ ಪ್ರಸಾದ ನಿಲಯ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು ಮಾತನಾಡಿದರು. ಸದ್ಧರ್ಮ ಪೀಠಕ್ಕೆ ಜಗದ್ಗುರುಗಳಾಗಿ ೧೨ ವರ್ಷಗಳು ಸಂದ ಹಿನ್ನೆಲೆಯಲ್ಲಿ ಐತಿಹಾಸಿಕ ಅದ್ಧೂರಿ ಕಾರ್ಯಕ್ರಮ ಅಯೋಜಿಸುವುದು ಪೀಠದ ಭಕ್ತರ ಅಪೇಕ್ಷೆಯಾಗಿತ್ತು. ಆದರೆ ಪ್ರಸ್ತುತ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವಂತೆ ಭಕ್ತರಿಗೆ ಸೂಚಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟದಲ್ಲಿ ಆಚರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಹೇಳಿದರು.ರಾಷ್ಟ್ರದಲ್ಲಿ ಉಜ್ಜಯಿನಿ ಪೀಠದ ೨೮ ಸಾವಿರ ಶಾಖಾ ಮಠಗಳಿವೆ. ಇಂತಹ ಇತಿಹಾಸ ಇರುವ ಪೀಠದ ಸದ್ಧರ್ಮ ಪೀಠದ ಈ ಕಾರ್ಯಕ್ರಮಕ್ಕೆ ಪ್ರಧಾನಿಗಳು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಬೇಕು ಎಂಬ ಅಪೇಕ್ಷೆಯನ್ನು ಭಕ್ತರು ಹೊಂದಿದ್ದರು. ಬರಗಾಲ ಕಳೆದ ಮೇಲೆ ದ್ವಾದಶ ವರ್ಧಂತಿ ಕಾರ್ಯಕ್ರಮ ಅಯೋಜಿಸುವ ಯೋಚನೆ ಇದೆ ಎಂದರು.

ಭಕ್ತರಿಗಾಗಿ ಹೆಚ್ಚಿನ ವಸತಿ ಸೌಕರ್ಯ ಸೇರಿ ಇತರ ಸೌಲಭ್ಯ ಕಲ್ಪಿಸಲು ಗಮನ ನೀಡಲಾಗುವುದು. ಹೊಸ ಪ್ರಸಾದ ನಿಲಯ ನಿರ್ಮಿಸಿ ಅರ್ಪಿಸಲಾಗಿದೆ. ಅನಿವಾರ್ಯವಾಗಿ ಸ್ಥಗಿತವಾಗಿದ್ದ ಶ್ರೀ ಪೀಠದ ಸದ್ಧರ್ಮ ಪ್ರಭೆ ಪತ್ರಿಕೆ ಪ್ರಕಟಣೆ ಕಾರ್ಯ ಪುನರ್ ಆರಂಭಿಸಲಾಗುವುದು. ಪೀಠದ ಗೋಶಾಲೆ ನಿರ್ಮಾಣ, ಭಸ್ಮ ತಯಾರಿಕೆ ಘಟಕ ಆರಂಭಿಸಲಾಗುವುದು ಎಂದು ಶ್ರೀಗಳು ಹೇಳಿದರು.

ಕೊಟ್ಟೂರು ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಂದಗತಿಯಲ್ಲಿದ್ದ ಶ್ರೀ ಪೀಠದ ಅಭಿವೃದ್ಧಿ ಕಾರ್ಯಗಳು ದ್ವಾದಶ ವರ್ಧಂತಿ ಕಾರ್ಯಕ್ರಮದ ಮೂಲಕ ಹೆಚ್ಚು ಚುರುಕು ಪಡೆದುಕೊಂಡು ಹೊಸ ಭಾಷ್ಯ ಬರೆಯಲಿ ಮತ್ತು ಅಪವ್ಯಸಗಳು ದೂರಾಗಿ ಹೊಸ ಬೆಳವಣಿಗೆಗಳು ಕಾಣಲಿ ಎಂದು ಹೇಳಿದರು.

ಕೂಡ್ಲಿಗಿಯ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು, ನಂದಿಹಳ್ಳಿ ಶ್ರೀ ಮಹೇಶ್ವರ ಸ್ವಾಮಿಗಳು, ಮರಿಯಮ್ಮನಹಳ್ಳಿ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿಗಳು ಮಾತನಾಡಿದರು. ಯಡಿಯೂರು, ವಿಜಯಪುರ, ಕಡಗಂಚಿ, ಬೆಣ್ಣಿಹಳ್ಳಿ, ಹರಪನಹಳ್ಳಿ, ಬುಕ್ಕಸಾಗರ, ಸಂಡೂರು, ಕಾನಮಡುಗು, ತಾವರಕೆರೆ, ಹ.ಬೊ. ಹಳ್ಳಿ, ಅಡವಿಹಳ್ಳಿ ಸೇರಿ ರಾಜ್ಯದ ಹಾಗೂ ಮಹಾರಾಷ್ಟ್ರದಿಂದ ಅನೇಕ ಶಿವಾಚಾರ್ಯ ಸ್ವಾಮಿಗಳು ಇದ್ದರು. ಪೀಠದ ಜ್ಞಾನಗುರು ವಿದ್ಯಾಪೀಠ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ ಇದ್ದರು.

ಇದಕ್ಕೂ ಮೊದಲು ಜಗದ್ಗುರುಗಳ ಪೀಠಾರೋಹಣದ ದ್ವಾದಶ ಪಟ್ಟಾಧಿಕಾರದ ಪ್ರಯುಕ್ತ ಬೆಳಗಿನ ಜಾವದಲ್ಲಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳಿಗೆ, ೫೦ಕ್ಕೂ ಹೆಚ್ಚು ಶಿವಾಚಾರ್ಯರು ಸೇರಿಕೊಂಡು ಮಂಗಳ ಸ್ನಾನ, ವಿಶೇಷ ಮರುಳಸಿದೇಶ್ವರ ಸ್ವಾಮಿಗೆ ಪೂಜೆ, ರುದ್ರಹೋಮ, ಸಿಂಹಾಸನಾರೋಹಣ, ಕಿರೀಟಧಾರಣೆ ಸೇರಿ ಎಲ್ಲ ರೀತಿಯ ಸಂಪ್ರದಾಯಗಳು ನಡೆದವು.