ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ತಂತ್ರಜ್ಞಾನದಲ್ಲಿ ವೇಗವಾಗಿ ಹೊಸ ಬದಲಾವಣೆಯಾಗುತ್ತಿದ್ದು, ಅದಕ್ಕೆ ಹೊಂದಿಕೊಂಡು ಬೆಳೆಯಬೇಕು. ಹೊಸ ತಂತ್ರಜ್ಞಾನದಿಂದ ಅನೇಕ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಮಂಗಳವಾರ ಆಯೋಜಿಸಿದ್ದ ವಸ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಉದಯೋನ್ಮುಖ ಪ್ರವೃತ್ತಿಗಳು ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಾವಕಾಶ ಕ್ಷೀಣಿಸಬಹುದೆಂಬ ತಪ್ಪು ಕಲ್ಪನೆ ಬೇಡ ಎಂದು ಹೇಳಿದರು.
ಮೊದಲು ಕಂಪ್ಯೂಟರ್ ಪರಿಚಯಿಸದಾಗಲೂ ಅನೇಕರಲ್ಲಿ ಆತಂಕವಿತ್ತು. ಮೈಸೂರು ವಿಶ್ವವಿದ್ಯಾಲಯಕ್ಕೆ ಕಂಪ್ಯೂಟರ್ ಬೇಡ ಎಂದು ಅನೇಕರು ಪ್ರತಿಭಟಿಸಿದ್ದರು. ಆದರೆ, ಕ್ರಮೇಣ ಅದು ಅನೇಕ ಉದ್ಯೋಗ ಸೃಷ್ಟಿಸಿತ್ತು. ಕೃತಕ ಬುದ್ದಿಮತ್ತೆಯೂ ಅದೇ ಹಾದಿಯಲ್ಲಿ ಸಿಗಲಿದೆ ಎಂದರು.ತಂತ್ರಜ್ಞಾನ ಹಾಗೂ ಮಾಹಿತಿ ಯುಗದಲ್ಲಿ ನಾವು ಬದುಕುತ್ತಿದ್ದು, ತಂತ್ರಜ್ಞಾನವನ್ನು ಸಮಾಜದೊಂದಿಗೆ ಹೇಗೆ ಸಮೀಕರಿಸುತ್ತೇವೆ ಎಂಬುದನ್ನು ವಸ್ತು ವಿಜ್ಞಾನ ತಿಳಿಸುತ್ತದೆ. ಉತ್ತಮ ಅಂಕ ಪಡೆದವರು ಬುದ್ಧಿವಂತ ಎಂಬ ಕಾಲವಿತ್ತು. ನಂತರ ಭಾವನಾತ್ಮಕವಾಗಿ ವ್ಯವಹರಿಸುವರಿಗೆ ಆದ್ಯತೆ ದೊರೆಯಿತು. ಪ್ರಸ್ತುತ ಕೃತಕಬುದ್ಧಿಮತ್ತೆ ಪ್ರಚಲಿತದಲ್ಲಿದೆ. ನಾವು ತಂತ್ರಜ್ಞಾನಗಳ ಹಿಂದೆ ಓಡಲು ಸಿದ್ಧರಿರಬೇಕು ಎಂದರು.
ವಿದ್ಯಾಭ್ಯಾಸದಿಂದ ಕೆಲಸ ದೊರೆಯುತ್ತದೆ ಎಂಬುದು ಸುಳ್ಳು. ಅಲ್ಲಿ ಜ್ಞಾನ ಸಂಪಾದನೆಯಷ್ಟೇ ಸಾಧ್ಯ. ನಮ್ಮಲ್ಲಿನ ಜ್ಞಾನದ ವಿಸ್ತೀರ್ಣಕ್ಕೆ ಅನುಗುಣವಾದ ಕೆಲಸ ದೊರೆಯುತ್ತದೆ. ಹೀಗಾಗಿ, ಶೈಕ್ಷಣಿಕ ಜೀವನದಲ್ಲಿ ಜ್ಞಾನ ಸಂಪಾದನೆಯ ಕಡೆಗೆ ದೃಷ್ಟಿಯಿರಲಿ ಎಂದು ಅವರು ಕಿವಿಮಾತು ಹೇಳಿದರು.ನೀರು ಶುದ್ಧೀಕರಣದಲ್ಲಿ ತಂತ್ರಜ್ಞಾನ:
ರಾಷ್ಟ್ರೀಯ ತೈವಾನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಪ್ರೊ. ವೀಸಾಂಗ್ ಹಂಗ್ ಮಾತನಾಡಿ, ನವೀನ ಮತ್ತು ಉನ್ನತೀಕರಿಸಿದ ಗ್ರಾಫಿಕ್ ತಂತ್ರಜ್ಞಾನದಿಂದ ನೀರನ್ನು ಶುದ್ಧೀಕರಣ ಮಾಡುವುದು ಸರಳ. ಇದರಿಂದ ಯಾವುದೇ ಅಡ್ಡ ಪರಿಣಾಮವಾಗಲಿ, ಹೆಚ್ಚು ಹೊರೆಯಾಗಲಿ ಆಗುವುದಿಲ್ಲ. ಹೀಗಾಗಿ ಇದು ಮುಂದುವರಿಯುತ್ತಿರುವ ಭಾರತದಂತಹ ರಾಷ್ಟ್ರಗಳಿಗೆ ಪರಿಣಾಮಕಾರಿಯಾದ ವಿಜ್ಞಾನ ಮತ್ತು ತಂತ್ರಜ್ಞಾನವಾಗಿದೆ ಎಂದು ಹೇಳಿದರು.ಉತ್ತಮ ಗ್ರಾಫಿಕ್ ನಿಂದ ನೀರನ್ನು ಶುದ್ಧೀಕರಣ ಮಾಡುವುದರಿಂದ ನೀರು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ, ಬಳಕೆಗೆ ಯೋಗ್ಯವಾಗಿರುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಇದನ್ನು ಅನುಸರಿಸಿದರೆ ತಗುಲುವ ಖರ್ಚು ಕೂಡ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಮುಂದುವರಿಯುತ್ತಿರುವ ಭಾರತದಂತಹ ಹಲವು ರಾಷ್ಟ್ರಗಳ ಕೈಗಾರಿಕೆಗಳಲ್ಲಿ ಈ ತಂತ್ರಜ್ಞಾನ ಬಳಸಬೇಕು. ಇದರಿಂದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಕಾಣಬಹುದು. ಅದು ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ತಿಳಿಸಿದರು.
ಶಾಸಕರಾದ ಕೆ. ಹರೀಶ್ ಗೌಡ, ಕೆ. ವಿವೇಕಾನಂದ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ಅಬ್ದುಲ್ ರಹಿಮಾನ್, ಐಕ್ಯೂಎಸಿ ಸಂಯೋಜಕ ಡಾ.ವಿ. ನಂದಕುಮಾರ್, ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕ ಡಾ.ಡಿ.ಕೆ. ರವಿಶಂಕರ್ ಮೊದಲಾದವರು ಇದ್ದರು.ಸಮಾಜದ ಸಮಸ್ಯೆಗಳಿಗೆ ಪರಿಹಾರವಾಗಬಲ್ಲ ಪರಿಣಾಮಕಾರಿ ಸಂಶೋಧನೆಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಹೊಸ ದೃಷ್ಠಿಕೋನದ ಸಂಶೋಧನಾ ವಿಷಯವನ್ನು ಆಯ್ಕೆ ಮಾಡಿ. ಕೌಶಲ ಹಾಗೂ ಸಂವಹನದ ಬಗ್ಗೆ ಪದವೀಧರರು ಚಿಂತಿಸಬೇಕು. ದೇಶದಲ್ಲಿ ಪದವಿ ಪಡೆದ 100ರಲ್ಲಿ 14 ಜನರಷ್ಟೇ ಉದ್ಯೋಗ ಪಡೆಯುತ್ತಿದ್ದಾರೆ. ಮುಂದುವರಿದ ದೇಶಗಳಲ್ಲಿ ಇದರ ಸಂಖ್ಯೆ ಹೆಚ್ಚಿದ್ದು, ನಮ್ಮಲ್ಲೂ ಹೆಚ್ಚಿನ ಉದ್ಯೋಗ ಸೃಷ್ಠಿಯಾಗಬೇಕಿದೆ.
- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿಎರಡು ಬಾರಿ ಕಾರ್ಯಕ್ರಮ ಉದ್ಘಾಟನೆ
ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಎರಡು ಬಾರಿ ಉದ್ಘಾಟಿಸಿದ ಪ್ರಸಂಗ ಜರುಗಿತು. ಕಾರ್ಯಕ್ರಮವು ಬೆಳಗ್ಗೆ 9.45ಕ್ಕೆ ನಿಗದಿಯಾಗಿದ್ದರೂ ಅರ್ಧ ಗಂಟೆ ತಡವಾಗಿ ಆರಂಭವಾಯಿತು. ಉದ್ಘಾಟನೆಗೂ ಮೊದಲೇ ಅತಿಥಿಗಳು ಭಾಷಣ ಮಾಡಿದರು. ಈ ಬಗ್ಗೆ ಅನೇಕರು ಅಪಸ್ವರ ಎತ್ತಿದರು. ಹೀಗಾಗಿ, ಅತಿಥಿಗಳ ಭಾಷಣ ಮುಗಿದರೂ ಶಾಸಕರು ಬರದಿದ್ದಾಗ ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ವಂದನಾರ್ಪನೆ ಮುಗಿದ ಬಳಿಕ ಆಗಮಿಸಿದ ಶಾಸಕ ಕೆ. ಹರೀಶ್ ಗೌಡ ಅವರು ಮತ್ತೊಮ್ಮೆ ಕಾರ್ಯಕ್ರಮ ಉದ್ಘಾಟಿಸಿದರು. ಇದಕ್ಕೆ ಸಭಾಂಗಣದಲ್ಲಿ ಹಲವರು ಆಕ್ಷೇಪ ವ್ಯಕ್ತಪಡಿಸಿದರು.