ಗ್ರಾಮಸಭೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲು ಕುಂದಚೇರಿ ಗ್ರಾ.ಪಂ. ನಿರ್ಧಾರ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗ್ರಾಮಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲು ಕುಂದಚೇರಿ (ಚೆಟ್ಟಿಮಾನಿ) ಗ್ರಾ.ಪಂ ನಿರ್ಧಾರ ಕೈಗೊಂಡಿದೆ. ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಗ್ರಾಮಸಭೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಶು ವೈದ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಗ್ರಾಮ ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಗೈರು ಹಾಜರಾದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿದರು. ಈ ಹಿನ್ನಲೆಯಲ್ಲಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆಯಲು ಸಭೆ ನಿರ್ಣಯ ಕೈಗೊಂಡಿತು.ಸಭೆಯಲ್ಲಿ ಹಾಜರಿದ್ದ ಅರಣ್ಯ ಇಲಾಖೆ, ಚೆಸ್ಕಾಂ, ಕಂದಾಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನೀರು ಮತ್ತು ನೈರ್ಮಲ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು. ಕೆದಂಬಾಡಿ ಕೀರ್ತಿ ಕುಮಾರ್, ಕೆದಂಬಾಡಿ ಜಯಪ್ರಕಾಶ್, ದಬ್ಬಡ್ಕ ಶ್ರೀಧರ್, ಕೇಕಡ ಇಂದುಮತಿ, ಶರತ್, ಫೈಝಲ್, ಮಹೇಶ್ ಕೆ., ವೇಣುಗೋಪಾಲ್, ಕೀರ್ತಿ ಉತ್ತಪ್ಪ, ಕೆದಂಬಾಡಿ ರಘು, ನೇತ್ರಾವತಿ ಎಂ.ಎನ್, ಅಮೆ ಹೇಮಾವತಿ, ಕಾವೇರಮ್ಮ, ಅಮೆ ಮಂಜುನಾಥ್, ಸುಳ್ಯಕೋಡಿ ರಾಧ, ರಿಯಾಜ್, ಮಾಜಿ ಅಧ್ಯಕ್ಷರಾದ ಲಲಿತಾ ಜಯ ಮತ್ತಿತರರು ಗ್ರಾ.ಪಂ ವ್ಯಾಪ್ತಿಯಲ್ಲಿ ಮುಂದೆ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯ ಗಮನ ಸೆಳೆದರು. ಗ್ರಾ.ಪಂ ಅಧ್ಯಕ್ಷ ಪಿ.ಬಿ.ದಿನೇಶ್, ಸದಸ್ಯರಾದ ಕೆ.ಯು.ಹಾರಿಸ್ ಪದಕಲ್ಲು, ವಿಶು ಪ್ರವೀಣ್ ಕುಮಾರ್, ಬಸಪ್ಪ ಹಾಗೂ ಅಭಿವೃದ್ಧಿ ಅಧಿಕಾರಿ ಹರೀಶ್ ಅವರು ಗ್ರಾಮಸ್ಥರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು.ಅಧ್ಯಕ್ಷ ಪಿ.ಬಿ.ದಿನೇಶ್ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಬದ್ಧರಾಗಿರುವುದಾಗಿ ತಿಳಿಸಿದರು. ಪಿಡಿಓ ಹರೀಶ್ ಸ್ವಾಗತಿಸಿ, ವಂದಿಸಿದರು. ನಾಡಗೀತೆಯೊಂದಿಗೆ ಸಭೆ ಆರಂಭಗೊಂಡಿತು. ನಿಧನ ಹೊಂದಿದವರಿಗೆ ಮೌನಾಚರಣೆಯ ಮೂಲಕ ಸಭೆ ಸಂತಾಪ ಸೂಚಿಸಿತು. ವಿವಿಧ ಇಲಾಖಾ ಅಧಿಕಾರಿಗಳು, ಗ್ರಾ.ಪಂ ಪ್ರತಿನಿಧಿಗಳು, ನೋಡಲ್ ಅಧಿಕಾರಿ, ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.