ಬಹು ಜನರೇ ಭಾರತದ ದೇಶದ ಅತಿ ದೊಡ್ಡ ಆಸ್ತಿ: ರಾಧಾಕೃಷ್ಣ

| Published : Oct 13 2025, 02:00 AM IST

ಸಾರಾಂಶ

ಚಿಕ್ಕಮಗಳೂರುಬಹು ಜನರು ದೇಶದ ಆಸ್ತಿ, ದೊಡ್ಡ ಸಮುದಾಯ. ಎಲ್ಲರೂ ಒಗ್ಗೂಡಿಸಿ ದೇಶದ ಆಡಳಿತ ನಡೆಸುವ ರಾಜಕೀಯ ಪ್ರಜ್ಞೆ ಹೆಚ್ಚಿಸಿದವರು ದಾದಾ ಸಾಹೇಬ್ ಕಾನ್ಷಿರಾಮ್‌ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಹು ಜನರು ದೇಶದ ಆಸ್ತಿ, ದೊಡ್ಡ ಸಮುದಾಯ. ಎಲ್ಲರೂ ಒಗ್ಗೂಡಿಸಿ ದೇಶದ ಆಡಳಿತ ನಡೆಸುವ ರಾಜಕೀಯ ಪ್ರಜ್ಞೆ ಹೆಚ್ಚಿಸಿದವರು ದಾದಾ ಸಾಹೇಬ್ ಕಾನ್ಷಿರಾಮ್‌ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಾಕೃಷ್ಣ ಹೇಳಿದರು.ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಸಹೋದರತ್ವ ಸಮಿತಿ ಮಾಸಿಕ ಸಭೆ ಹಾಗೂ ದಾದಾ ಸಾಹೇಬ್ ಕಾನ್ಷಿರಾಮ್ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿ ಬಹು ಜನರಿಗೆ ರಾಜಕೀಯ ಪ್ರಜ್ಞೆ ಹೆಚ್ಚಿಸಿದ ಕಾನ್ಷಿರಾಮ್ ಪಾತ್ರ ಸ್ಮರಣೀಯ. ದೇಶಾಡಳಿತ ನಡೆಸುವ ಮಾರ್ಗ ತೋರಿದ ರಾಜಕೀಯ ದಾರ್ಶನಿಕ ಕಾನ್ಷಿರಾಮ್ ಅವರನ್ನು ಮರೆಯಲಾಗದು. ಮನುವಾದಿ ಗಳು ದೇಶವನ್ನು ಆಳುತ್ತಾ ಬಹುಜನರನ್ನು ತುಳಿಯುತ್ತಿದ್ದಾರೆ. ಹೀಗಾಗಿ ಬಹುಜನರ ಕೈಗೆ ಅಧಿಕಾರದ ಚುಕ್ಕಾಣಿ ಸಿಗಬೇಕಿದೆ ಎಂದರು.

ಅಸ್ಪೃಶ್ಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಆಳುವ ವರ್ಗದವರನ್ನಾಗಿ ಮಾಡಿದ ಶ್ರೇಯಸ್ಸು ಕಾನ್ಷಿರಾಮ್ ಅವರಿಗೆ ಸಲ್ಲುತ್ತದೆ. ಅಲ್ಲದೇ ಮಾಯಾವತಿ ಅವರನ್ನು ಮೂರು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ, ಉತ್ತರ ಪ್ರದೇಶದಲ್ಲಿ ಬಡವರಿಗೆ ಭೂಮಿ, ಸಾಲಸೌಲಭ್ಯ ಕಲ್ಪಿಸಿದವರು ಎಂದು ಹೇಳಿದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಭಾರತೀಯರ ಬದುಕಿನಲ್ಲಿ ಭದ್ರವಾಗಿ ಬೆಸೆದು ಕೊಂಡಿರುವ ಪುರೋಹಿತ ಶಾಹಿಯನ್ನು ಬುಡ ಸಹಿತ ನಾಶಗೊಳಿಸಿ, ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿಸುವುದು ಕಾನ್ಷಿರಾಮ್ ಗುರಿಯಾಗಿತ್ತು. ಶೋಷಿತ ಸಮಾಜ ಆಳುವ ಸಮಾಜ ವಾಗುವುದರಿಂದ ಮಾತ್ರ ಜಾತಿ ರಹಿತ ಸಮಾಜ ಸೃಷ್ಟಿ ಮಾಡಬಹುದು ಎಂದು ಸಾರಿದ್ದರು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಎಸ್ಪಿ ತಾಲೂಕು ಅಧ್ಯಕ್ಷ ಎಚ್.ಕುಮಾರ್ ಮಾತನಾಡಿ, ಕಾನ್ಷಿರಾಮ್ ಬಿಎಸ್ಪಿಯನ್ನು ಮೂರನೇ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿಸಿದರು. ತಮಗೆ ಒಲಿದ ಹಲವಾರು ಹುದ್ದೆಗಳನ್ನು ಬದಿಗಿರಿಸಿದವರು. ಅಲ್ಲದೇ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಬಹುದಾದ ಸದಾವಕಾಶ ತಳ್ಳಿ ಹಾಕಿ ಮಾಯಾವತಿ ಅವರನ್ನು ನಾಯಕಿಯನ್ನಾಗಿ ಸೃಷ್ಟಿಸಿದವರು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಹೋದರತ್ವ ಸಮಿತಿ ಕಾರ್ಯದರ್ಶಿ ಕೆ.ಎಸ್.ಮಂಜುಳಾ, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿಗಳಾದ ಆರ್.ವಸಂತ್, ಸಿದ್ದಯ್ಯ, ಖಜಾಂಚಿ ಟಿ.ಎಚ್.ರತ್ನ, ಅಸ್ಮಾ ಪರ್ವೀನ್, ಕಲಾವತಿ, ಲಕ್ಷ್ಮಣ್ ಉಪಸ್ಥಿತರಿದ್ದರು.

12 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಬಿಎಸ್ಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾದಾ ಸಾಹೇಬ್ ಕಾನ್ಷಿರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೆ.ಟಿ. ರಾಧಾಕೃಷ್ಣ, ಕೆ.ಬಿ. ಸುಧಾ, ಎಚ್‌.ಕುಮಾರ್‌, ಮಂಜುಳಾ ಇದ್ದರು.