ಕೇಂದ್ರ ಸರ್ಕಾರದಿಂದ ರೈತರಿಗೆ ಹಲವು ಯೋಜನೆಗಳು

| Published : Apr 19 2024, 01:03 AM IST

ಸಾರಾಂಶ

ಕೇಂದ್ರ ಸರ್ಕಾರ ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಆದರೆ ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಂ.ರುದ್ರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೇಂದ್ರ ಸರ್ಕಾರ ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಆದರೆ ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಂ.ರುದ್ರೇಶ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ರೈತರಿಗೆ ಏನೂ ಮಾಡಿಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಆದರೆ, ಕಳೆದ ೧೦ ವರ್ಷಗಳ ಅವಧಿಯಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕೇಂದ್ರದ ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿದರು.

ಪಿಎಂ ಕಿಸಾನ್ ಸಮ್ಮಾನ್‌ನಲ್ಲಿ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ ೬ ಸಾವಿರ ರು. ನೀಡುತ್ತದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ೪ ಸಾವಿರ ಸೇರಿಸಿ ಒಟ್ಟು ೧೦ ಸಾವಿರ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ೪ ಸಾವಿರ ಅನ್ನು ನಿಲ್ಲಿಸಿ, ಗೃಹಲಕ್ಷ್ಮಿಗೆ ನೀಡುತ್ತಿದ್ದಾರೆ ಎಂದರು,ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಕೂಡ ನಿಲ್ಲಿಸಲಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಟಿಸಿ ಹಾಕಿಸಿಕೊಳ್ಳಲು ಈ ಹಿಂದೆ ೨೫ ಸಾವಿರ ಕಟ್ಟಬೇಕಿತ್ತು. ಆದರೆ, ಈಗ ೧.೫೦ ಲಕ್ಷದಿಂದ ೩ ಲಕ್ಷದ ವರೆಗೂ ಕಟ್ಟಬೇಕಿದೆ. ಸರಿಯಾಗಿ ಮೂರು ಪೇಸ್ ವಿದ್ಯುತ್ ಕೊಡುತ್ತಿಲ್ಲ. ರೈತರು ರಾತ್ರಿಯಿಡಿ ನಿದ್ದೆ ಬಿಟ್ಟು ನೀರು ಹಾಯಿಸಬೇಕಿದೆ. ಉಚಿತ ವಿದ್ಯುತ್ ಹೆಸರಿನಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷದವರು ಸಂವಿಧಾನದ ಬದಲಾವಣೆ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈಗಾಗಲೇ ನೀಡಿರುವ ಗ್ಯಾರಂಟಿಯನ್ನೇ ನೀಡಲು ಸಾಧ್ಯವಾಗಿಲ್ಲ. ೧ ಲಕ್ಷ ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು. ಬಿಜೆಪಿ ಸೋಲಿಸಿ ಎಂದು ಕೆಲ ರೈತ ಸಂಘಟನೆಗಳು ನಿರ್ಣಯ ಕೈಗೊಂಡಿರುವುದು ಕೆಲ ಕಾಂಗ್ರೆಸ್ ನಾಯಕರ ಮೇಲಿನ ಭಯದಿಂದ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೊಮರನಪುರ ಚಂದ್ರಶೇಖರ್, ಮುಖಂಡರಾದ ಹನುಮಂತಶೆಟ್ಟಿ, ಬಸವಣ್ಣ, ಮಲ್ಲೇಶ್, ಕಾಡಹಳ್ಳಿ ಕುಮಾರ್ ಇದ್ದರು.ಹಿಂದೂ ಯುವಕರ ಮೇಲಿನ ಹಲ್ಲೆಗೆ ಖಂಡನೆ

ಬೆಂಗಳೂರಿನಲ್ಲಿ ಹಿಂದೂ ಹುಡುಗರ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿರುವುದನ್ನು ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಂ.ರುದ್ರೇಶ್ ಖಂಡಿಸಿದರು. ನಾವು ಭಾರತದಲ್ಲಿ ಬದುಕುತ್ತಿದ್ದೇವೋ ಇಲ್ಲವೋ ತಿಳಿಯುತ್ತಿಲ್ಲ. ಬೆಂಗಳೂರಿನಲ್ಲಿ ರಾಮ ನವಮಿ ಆಚರಿಸಿ ತೆರಳುತ್ತಿದ್ದ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿ ಅಲ್ಲಾ ಎಂದು ಘೋಷಣೆ ಕೂಗುವಂತೆ ಥಳಿಸಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ. ಹಿಂದುಗಳ ರಕ್ಷಣೆಗೆ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.