ಸಾರಾಂಶ
ಬ್ಯಾಡಗಿ: ಕಳೆದ ರಾತ್ರಿ ಸುರಿದ ಮಳೆಗೆ ಜಲಾವೃತಗೊಂಡಿರುವ ತಾಲೂಕಿನ ಶಿಡೇನೂರ, ಮಾಸಣಗಿ ಹಿರೇನಂದಿಹಳ್ಳಿ, ಕೆರೂಡಿ ಇನ್ನಿತರ ಗ್ರಾಮಗಳಿಗೆ ತಹಸೀಲ್ದಾರ್ ಫೈರೋಜ್ ಶಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿನ್ನೆ ಸಂಜೆಯಿಂದ ರಾತ್ರಿಯವರೆಗೆ ಸುರಿದ ಮಳೆಗೆ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಹರಿದಿವೆ. ಕೋಡಿಯ ಎರಡೂ ಭಾಗದಲ್ಲಿ ಸಾಕಷ್ಟು ನೀರು ಹರಿದಿದ್ದು ಬಹಳಷ್ಟು ಕಡೆಗಳಲ್ಲಿ ಅನಾಹುತ ಕಲ್ಪಿಸಿದೆ.ಅಳಲು ತೋಡಿಕೊಂಡ ರೈತರು: ಈ ವೇಳೆ ಮಾತನಾಡಿದ ಕಿರಣ ಗಡಿಗೋಳ, ಅತೀಯಾದ ಮಳೆಯಿಂದ ರೈತರ ಶ್ರಮವೆಲ್ಲವೂ ವ್ಯರ್ಥವಾಗಿದೆ. ಪ್ರಸಕ್ತ ವರ್ಷ ಕೃಷಿ ಮೇಲಿನ ವೆಚ್ಚವೂ ಮರಳದಂತಾಗಿದೆ. ಅತೀವೃಷ್ಟಿ, ಅನಾವೃಷ್ಟಿ ಹಾಗೂ ಅವೈಜ್ಞಾನಿಕ ಬೆಲೆ, ವಿಮೆ ಪರಿಹಾರದಲ್ಲಿ ವಿಳಂಬ ಇನ್ನಿತರ ಕಾರಣಗಳಿಂದ ದೇಶದಲ್ಲಿ ಶೇ.70ರಷ್ಟಿದ್ದ ರೈತರು ಶೇ.47 ಬಂದು ನಿಂತಿವೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನೂ ನೋಡಿಯೂ ಸುಮ್ಮನಿರುವುದು ಎಷ್ಟರಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದರಲ್ಲದೇ ಸರ್ಕಾರಕ್ಕೆ ಆತ್ಮ ಗೌರವಿದ್ದಿದ್ದರೆ ರೈತರಿಗೆ ಸ್ಥಳದಲ್ಲೇ ಪರಿಹಾರ ನೀಡುವಂತೆ ಆಗ್ರಹಿಸಿದರು.
ಇದ್ದಲ್ಲೇ ಕೊಳೆಯುತ್ತಿವೆ ಬೆಳೆಗಳು:ಕಳೆದ 2023-24ನೇ ಸಾಲಿನಲ್ಲಿ ಭೀಕರ ಬರಗಾಲ ಅನುಭವಿಸಿದ್ದೇವೆ, ಸದರಿ ವರ್ಷವನ್ನು ಸರ್ಕಾರ ಬರಗಾಲವೆಂದು ಘೋಷಣೆ ಮಾಡಿದೆ. ಆದರೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಯೋಜನೆಯಡಿ, ಪ್ರತಿ ಹೆಕ್ಟೇರ್‌ಗೆ ರು. 34 ಸಾವಿರ ಸರ್ಕಾರ ನೀಡಬೇಕಾಗಿತ್ತು. ಆದರೆ ಕೇವಲ 2500 ರು. ನೀಡಿದ್ದಾರೆ. ಪ್ರಸಕ್ತ ವರ್ಷ ಅತೀವೃಷ್ಟಿಯಿಂದ ಇದ್ದಲ್ಲೇ ಬೆಳೆಗಳು ಕೊಳೆಯುತ್ತಿವೆ. ಹೀಗಿದ್ದರೂ ಪರಿಹಾರ ಬಂದಿಲ್ಲ. ತಾಲೂಕಿನ 21 ಪಂಚಾಯತಿ ಪೈಕಿ 6 ಪಂಚಾಯತಿಗೆ ಮಾತ್ರ ಬೆಳೆ ವಿಮೆ ಕೊಟ್ಟು ಇನ್ನುಳಿದ ಕಡೆಗಳಲ್ಲಿ ಹೆಚ್ಚಿನ ಇಳುವರಿ ಬಂದಿದೆ ಎಂದು ಸುಳ್ಳು ಲೆಕ್ಕ ತೋರಿಸಿ ವಿಮಾ ಕಂಪನಿ ರೈತರಿಗೆ ಮೋಸವೆಸಗಿದ್ದು ಕೂಡಲೇ ಬೆಳೆನಷ್ಟ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.ಸರ್ಕಾರಕ್ಕೆ ವರದಿ ಸಲ್ಲಿಸುವೆ: ಮಳೆಯಿಂದಾದ ಅನಾಹುತಗಳ ವರದಿಯನ್ನು ಸರ್ಕಾರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದೇನೆ. ಬೆಳೆಹಾನಿಯ ಕುರಿತು ತ್ರಿಮ್ಯನ್ ಕಮಿಟಿಯ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕೋಡಿಯ ಎರಡೂ ಪ್ರದೇಶದಲ್ಲಿನ ರೈತರು ಏಕಾಏಕಿ ಹೊಲಗಳಿಗೆ ಪ್ರವೇಶಿಸಿದಂತೆ ಎಚ್ಚರಿಕೆ ನೀಡಿದ ಅವರು, ಪ್ರಾಣಾಪಾಯಕ್ಕೆ ಒದಗಿ ಬರುವಂತಹ ಬೋರವೆಲ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಶಿವರಾಜ ಬನ್ನಿಹಟ್ಟಿ, ಚಂದ್ರಪ್ಪ ದೇಸಾಯಿ, ನಾಗಪ್ಪ ಸಪ್ಪಣ್ಣನವರ, ಬಸವರಾಜ ಕುಮ್ಮೂರ, ನಾಗಪ್ಪ ಕಾರಗಿ, ಬಸವರಾಜ ಕಡ್ಡೇರ, ನಾಗಪ್ಪ ಭಾವಿಕಟ್ಟಿ, ಮಲ್ಲಿಕಾರ್ಜುನ ದುರ್ಗದ, ಬಸವರಾಜ ಹುಲ್ಲತ್ತಿ, ಪರಮೇಶಪ್ಪ ಕೋಡಿಗಡ್ಡಿ, ಈರನಗೌಡ ತೆವರಿ, ರುದ್ರಪ್ಪ ಹಲಗಣ್ಣನವರ ಸೇರಿದಂತೆ ಇನ್ನಿತರರಿದ್ದರು.