ಸಾರಾಂಶ
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಸೈಬರ್ ಅಪರಾಧದ ವಿರುದ್ಧ ಯುವ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾನುವಾರ 5 ಕಿ.ಮೀ. ಮ್ಯಾರಥಾನ್ ಆಯೋಜಿಸಲಾಗಿತ್ತು.
ರಾಜಾನುಕುಂಟೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ಈ ಮ್ಯಾರಥಾನ್ ಅನ್ನು ನಾಯಕ ನಟರಾದ ಧೃವ ಸರ್ಜಾ, ಶ್ರೀಮುರುಳಿ, ಅಕುಲ್ ಬಾಲಾಜಿ, ನಾಯಕಿ ಮಾನ್ವಿತ್ ಕಾಮತ್, ಸ್ಫೂರ್ತಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಫಿಟ್ ಆಗಿರಲು ಮಾದಕ ವಸ್ತುಗಳಿಂದ ದೂರವಿರಬೇಕು. ಸೈಬರ್ ಅಪರಾಧಗಳ ಬಗ್ಗೆ ಎಚ್ಚರವಹಿಸಬೇಕು. ಕ್ರೀಡೆ, ಓಟ, ಆಟಗಳಲ್ಲಿ ಪಾಲ್ಗೊಂಡು ದೇಹವನ್ನು ಸದೃಢವಾಗಿ ಇರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಸೈಬರ್ ಅಪರಾಧದ ಪಿಡುಗು ಯುವಜನತೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಯುವ ಜನರು ಈ ಸೈಬರ್ ಅಪರಾಧಗಳ ಬಗ್ಗೆ ಎಚ್ಚರದಿಂದ ಇರಬೇಕು. ಯುವಜನತೆ ಈ ಮಾದಕಸ್ತುಗಳಿಂದ ದೂರು ಇರಬೇಕು ಎಂದು ಕರೆ ನೀಡಿದರು.
ಮ್ಯಾರಥಾನ್ ಆಯೋಜನೆಗೆ ಮೆಚ್ಚುಗೆ:
ಪ್ರೆಸಿಡೆನ್ಸಿ ವಿವಿ ಕುಲಪತಿ ಡಾ.ನಿಸ್ಸಾರ್ ಅಹ್ಮದ್ ಮಾತನಾಡಿ, ರಾಜ್ಯ ಪೊಲೀಸರು ಈ ಮ್ಯಾರಥಾನ್ ಮೂಲಕ ಮಾದಕ ವಸ್ತು ಹಾಗೂ ಸೈಬರ್ ಅಪರಾಧದ ಬಗ್ಗೆ ವಿದ್ಯಾರ್ಥಿಗಳನ್ನು ಜಾಗೃತಗೊಳಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮ್ಯಾರಥಾನ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಉಪಾಧ್ಯಕ್ಷ ಸುಹೇಲ್ ಅಹಮ್ಮದ್ ಮಾತನಾಡಿ, ಮಾದಕವಸ್ತು ಮತ್ತು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮ್ಯಾರಥಾನ್ ಆಯೋಜಿಸಲು ನಮ್ಮ ವಿವಿ ಕ್ಯಾಂಪಸ್ ಆಯ್ಕೆ ಮಾಡಿದ ರಾಜ್ಯ ಪೊಲೀಸರಿಗೆ ಧನ್ಯವಾದ ಹೇಳಿದರು. ಅಂತೆಯೆ ಈ ಜಾಗೃತಿ ಮ್ಯಾರಥಾನ್ ಉದ್ಘಾಟಿಸಿದ ಚಿತ್ರ ನಟ-ನಟಿಯರಿಗೆ ಕೃತಜ್ಞತೆ ಸಲ್ಲಿಸಿದರು.