ಹೊಸಪೇಟೆ: ನಗರದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವತಿಯಿಂದ ನಮ್ಮ ಪೊಲೀಸ್ ​ ನಮ್ಮ ಹೆಮ್ಮೆ’, ಫಿಟ್ನೆಸ್ ಫಾರ್ ಆಲ್’ ಹಾಗೂ ಡ್ರಗ್ಸ್ ಫ್ರೀ ಕರ್ನಾಟಕ’ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಜನಜಾಗೃತಿಯ ಮ್ಯಾರಾಥಾನ್‌ ಓಟದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಜ್ಜೆ ಹಾಕಿ ಮ್ಯಾರಾಥಾನ್‌ ಓಟಕ್ಕೆ ಉತ್ತಮ ಸ್ಪಂದನೆ ದೊರೆಯಿತು.

10 ಕಿ. ಮೀಟರ್ ಓಟ ತುಂಗಭದ್ರಾ ಜಲಾಶಯದ ವೈಕುಂಠ ಅತಿಥಿ ಗೃಹದಿಂದ ಆರಂಭಗೊಂಡರೆ, 5 ಕಿಲೋ ಮೀಟರ್ ಓಟ ಟಿ.ಬಿ.ಡ್ಯಾಂ ಪ್ರವೇಶ ದ್ವಾರದಿಂದ

ಆರಂಭಗೊಂಡಿತು.ತುಂಗಭದ್ರಾ ಜಲಾಶಯದಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಸಾಯಿ ಬಾಬಾ ದೇವಸ್ಥಾನದ ಸರ್ಕಲ್, ಬಸವೇಶ್ವರ ಸರ್ಕಲ್, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ಬಾಬು ಜಗಜೀವನರಾಂ ಸರ್ಕಲ್, ಖಾನ್‌ಸಾಬ್ ಬಿಲ್ಡಿಂಗ್ ಮಾರ್ಗವಾಗಿ ಡಾ.ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪಿ ಮುಕ್ತಾಯಗೊಂಡಿತು.

ವಿಜಯನಗರ ಜಿಲ್ಲೆಯ ಪೊಲೀಸರು, ಗೃಹರಕ್ಷಕರು, ಎನ್‌ಸಿಸಿ ಕ್ಯಾಡೆಟ್‌ಗಳು ಹಾಗೂ ವಿವಿಧ ಪದವಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾರಾಥಾನ್‌ಲ್ಲಿ ಭಾಗವಹಿಸಿದ್ದರು.

ಪಕ್ಕದ ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳೂ ಮ್ಯಾರಾಥಾನ್ ಗಾಗಿ ಆಗಮಿಸಿದ್ದು, 5 ಹಾಗೂ 10 ಕಿ.ಮೀ. ವಿಭಾಗದಲ್ಲಿ ಉತ್ಸಾಹದಿಂದ ಓಡಿ ಗಮ್ಯಸ್ಥಾನವನ್ನು ತಲುಪಿದರು.


ವಿಜೇತರ ವಿವರ:

5 ಕಿ.ಮೀ. ಪುರುಷರ ವಿಭಾಗದಲ್ಲಿ ತಿಪ್ಪೇಶ್ ಯಾದವ್ (ಪ್ರಥಮ), ಬಸವರಾಜ ಹಿರೆಮಠ (ದ್ವಿತೀಯ), ಚೇತನ್ (ತೃತೀಯ) ಹಾಗೂ 10 ಕಿ.ಮೀ ವಿಭಾಗದಲ್ಲಿ ಚಂದ್ರಶೇಖರ ಬಸವರಾಜ (ಪ್ರಥಮ), ಗೋವಿಂದರಾಜ್ (ದ್ವಿತೀಯ), ಜಿ. ವಿನಯ್ (ತೃತೀಯ) ಸ್ಥಾನಗಳಿಸಿದರು.

ಮಹಿಳೆಯರ 5 ಕಿ.ಮೀ. ಓಟದಲ್ಲಿ ಸುವರ್ಣ (ಪ್ರಥಮ), ಕೆ. ಕವಿತಾ (ದ್ವಿತೀಯ), ಗೋಪಿಕ ಟಿ.ಬಿ (ತೃತೀಯ) ಮತ್ತು 10 ಕಿ.ಮೀ. ಓಟದಲ್ಲಿ ಉಷಾ ರೋಹಿಣಿ (ಪ್ರಥಮ), ಸೌಮ್ಯ (ದ್ವಿತೀಯ), ಗೋಪಿಕಾ ಮೂರನೇ ಸ್ಥಾನದಲ್ಲಿ ಗುರಿ ತಲುಪಿದರು.

ವಿಜೇತರಿಗೆ ಕ್ರಮವಾಗಿ ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 5 ಸಾವಿರ ರೂ. ಹಾಗೂ ತೃತೀಯ ಬಹುಮಾನ 3 ಸಾವಿರ ರೂ. ಹಾಗೂ ಪದಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ ರಾಜಶೇಖರ, ಸಿ.ಜಿ.ಎಂ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸುಬ್ರಮಣ್ಯಂ, ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ ನಾಗಲಾಪುರ, ಎಸ್ಪಿ ಜಾಹ್ನವಿ, ಹೆಚ್ಚುವರಿ ಎಸ್ಪಿ ಮಂಜುನಾಥ ಬಿ., ಡಿವೈಎಸ್ಪಿ ಡಾ. ಟಿ ಮಂಜುನಾಥ, ಮಲ್ಲೇಶ್ ಡೊಡ್ಡಮನಿ, ಸಂತೋಷ ಚೌವ್ಹಾಣ್, ಎಸ್‌ಬಿಐ ಲೀಡ್ ಬ್ಯಾಂಕ್ ವ್ಯವಸ್ಥಾಪಕ ವಿರೇಂದ್ರ ಕುಮಾರ್, ಮರಿಯಮ್ಮನಹಳ್ಳಿ ಮುಖ್ಯ ಕಾರ್ಯದರ್ಶಿ ಸೂರ್ಯನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.