ಸಾರಾಂಶ
ಶಿರಸಿ: ಮಾ. ೧೯ರಿಂದ ಆರಂಭವಾಗುವ ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾ ಸಂಪ್ರದಾಯದ ಕೊನೆಯ ಹಂತದ ಆಚರಣೆಯಂತೆ ಬುಧವಾರ ಮುಂಜಾನೆ ಅಂಕೆ ಹಾಕುವ, ಕಂಕಣ ಕಟ್ಟುವ, ಮೇಟಿ ದೀಪ ಬೆಳಗಿದ ನಂತರ ಪಟ್ಟದ ಕೋಣನೊಡನೆ ಶ್ರೀದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ತಂದು ಗರ್ಭಗುಡಿಯ ಬಾಗಿಲನ್ನು ಮುಚ್ಚುವ ಕಾರ್ಯ ನಡೆಯಿತು.
ಮಂಗಳವಾರ ರಾತ್ರಿ 5ನೇ ಹಾಗೂ ಕೊನೆಯ ಹೊರಬೀಡಾದ ಅಂಕೆಯ ಹೊರಬೀಡು ಮುಗಿಸಿ ಬೆಳಗ್ಗೆ ಹಿಂತಿರುಗಿದ ಶ್ರೀದೇವಿಯ ಉತ್ಸವ ಮೂರ್ತಿಯೊಡನೆ, ಶ್ರೀದೇವಿಯ ಪಟ್ಟದ ಕೋಣವನ್ನು ದೇವಸ್ಥಾನದಿಂದ ಕರೆದುಕೊಂಡು ಜಾತ್ರಾ ಮಂಟಪಕ್ಕೆ ತರಲಾಯಿತು.ಅಲ್ಲಿನ ಜಾತ್ರಾ ಗದ್ದುಗೆಯಲ್ಲಿನ ಮಂಟಪದಲ್ಲಿ ಶ್ರೀದೇವಿಯ ಉತ್ಸವ ಮೂರ್ತಿಯ ಎದುರು ಬಾಬದಾರ ಮನೆತನದ ಪ್ರಮುಖರಿಗೆ, ಆಡಳಿತ ಮಂಡಳಿ ಧರ್ಮದರ್ಶಿಗಳಿಗೆ ಶ್ರೀದೇವಿಯ ಗಂಡನ ಮನೆಯ ವಿಧಿವಿಧಾನ ನಡೆಸುವ ಅಸಾದಿ ಬಾಬದಾರ ಮನೆತನದವರು ಜಾತ್ರಾ ಕಂಕಣ ಕಟ್ಟಿದರು. ನಂತರ ಜಾತ್ರಾ ಸಂಪ್ರದಾಯದಂತೆ ಎಲ್ಲ ಬಾಬದಾರ ಕುಟುಂಬದವರು, ಆಡಳಿತ ಮಂಡಳಿ ಧರ್ಮದರ್ಶಿಗಳು ಮೇಟಿ ಬಾಬದಾರ ಕುಟುಂಬದವರು ಜಾತ್ರಾ ಉತ್ಸವದ ತಮ್ಮ ಮನೆತನ ಸೇವೆ ನೆರವೇರಿಸಲು ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿರುವ ಮಾರಿಕಾಂಬಾ ಕಲ್ಯಾಣ ಮಂಟಪಕ್ಕೆ ತೆರಳಿ, ಅಲ್ಲಿ ಅವರಿಂದಲೂ ಕಂಕಣ ಕಟ್ಟಿಸಿಕೊಂಡು, ಅವರನ್ನು ಸಾಂಪ್ರದಾಯಿಕವಾಗಿ ಗೌರವಾದರ ಸಹಿತ ಜಾತ್ರಾ ಮಂಟಪಕ್ಕೆ ಕರೆತರಲಾಯಿತು. ಮಂಟಪದಲ್ಲಿ ಅಸಾದಿ ಬಾಬದಾರ ಮನೆತನದವರಿಂದ ಬರೆಯಲಾದ ಅಂಕೆಯ ರಂಗ ಮಂಡಲಕ್ಕೆ ದೀಪ ಬೆಳಗಿ, ಪೂಜಿಸಿ, ಶ್ರೀದೇವಿಯ ಉತ್ಸವ ಮೂರ್ತಿಗೆ ಪೂಜೆಗೈದು, ಆರತಿ ಬೆಳಗಿ, ಆ ಆರತಿಯ ಜ್ಯೋತಿಯಿಂದಲೇ ಮೇಟಿ ದೀಪ ಹಚ್ಚಿದರು. ನಂತರ ಪಟ್ಟದ ಕೋಣನಿಗೆ ಜಾತ್ರಾ ಕಂಕಣವನ್ನು ಕಟ್ಟಲಾಯಿತು.
ಬುಧವಾರ ಬೆಳಗಿದ ಮೇಟಿ ದೀಪವನ್ನು ಜಾತ್ರೆಯ ಅಂತ್ಯದ ವರೆಗೆ ಜೋಪಾನ ಮಾಡುವ ಹೊಣೆ ಮೇಟಿ ಬಾಬದಾರರದ್ದಾಗಿದ್ದು, ಮೇಟಿ ದೀಪವನ್ನು ಮೇಟಿ ಬಾಬದಾರರು ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿರುವ ಮಾರಿಕಾಂಬಾ ಕಲ್ಯಾಣಮಂಟಪಕ್ಕೆ ಸಂಪ್ರದಾಯದಂತೆ ತಲುಪಿಸಲಾಯಿತು.ಜಾತ್ರಾ ಗದ್ದುಗೆಗೆ ಶ್ರೀದೇವಿಯ ಆಗಮನದ ವರೆಗೆ ಮೇಟಿ ದೀಪವನ್ನು, ಮೇಟಿ ಬಾಬದಾರರ ಸುಪರ್ದಿಯಲ್ಲಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿರುವ ಮಾರಿಕಾಂಬಾ ಕಲ್ಯಾಣಮಂಟಪದಲ್ಲಿ ಇಡಲಾಗುತ್ತದೆ. ರಥೋತ್ಸವ ಮೂಲಕ ಜಾತ್ರೆ ಸ್ಥಳಕ್ಕೆ ಶ್ರೀದೇವಿಯು ರಥದಿಂದ ಇಳಿದು ಜಾತ್ರಾ ಗದ್ದುಗೆಗೆ ಏರುವ ಮೊದಲು ಜಾತ್ರಾ ಮಂಟಪಕ್ಕೆ ಮೇಟಿ ದೀಪವನ್ನು ಮರಳಿ ತರಲಾಗುತ್ತದೆ.
ಅಂಕೆ ಹಾಕಿದ ನಂತರ ಶ್ರೀದೇವಿಯ ಉತ್ಸವ ಮೂರ್ತಿಯು ಪಟ್ಟದ ಕೋಣನೊಡನೆ ಹೊರಟು ಮಾರಿಕಾಂಬಾ ದೇವಿಯ ಸಹೋದರಿಯರಾದ ಶ್ರೀಮರ್ಕಿ- ದುರ್ಗಿ ದೇವಿಯರ ದೇವಸ್ಥಾನಕ್ಕೆ ತಲುಪಿ, ಅಲ್ಲಿಂದ ಶ್ರೀಮರ್ಕಿ- ದುರ್ಗಿ ದೇವಿಯರನ್ನು ಜತೆಗೂಡಿಸಿಕೊಂಡು ಮಾರಿಕಾಂಬಾ ದೇವಾಲಯಕ್ಕೆ ಮರಳುವ ದೇವಸ್ಥಾನದ ಜಾತ್ರಾ ಸಂಪ್ರದಾಯ ನಡೆಯಿತು. ಮಾರಿಕಾಂಬಾ ದೇವಿಯ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ನೇರವಾಗಿ ಗರ್ಭಗೃಹವನ್ನು ಪ್ರವೇಶಿಸುತ್ತಿದ್ದಂತೆ ಗರ್ಭಗೃಹದ ಬಾಗಿಲನ್ನು ಮುಚ್ಚಲಾಯಿತು.ಮಾ. ೧೯ರಂದು ರಾತ್ರಿ ಜರುಗುವ ಶ್ರೀದೇವಿ ಮಾರಿಕಾಂಬೆಯ ಜಾತ್ರಾ ಕಲ್ಯಾಣೋತ್ಸವದಲ್ಲಿ ಮತ್ತು ಮಾ. ೨೦ರಂದು ರಥೋತ್ಸವದಲ್ಲಿ ಆಗಮಿಸಿ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡು ಹಾಗೂ ೨೧ ರಿಂದ ೨೭ರ ಬೆಳಗ್ಗೆ ೧೦.೧೫ರ ವರೆಗೆ ೮ ದಿನಗಳ ಕಾಲ ಜಾತ್ರಾ ಗದ್ದುಗೆಯಲ್ಲಿ ಮಾರಿಕಾಂಬೆಯ ದರ್ಶನ ದೊರೆಯಲಿದೆ.
ಮಾರಿಕಾಂಬಾ ದೇವಿಯು ಗರ್ಭಗುಡಿಯಲ್ಲಿ ಭಕ್ತರಿಗೆ ಪುನಃ ದರ್ಶನ ನೀಡುವುದು, ಪೂಜೆ ಸ್ವೀಕರಿಸುವುದು ಯುಗಾದಿಯ ದಿನ. ಜಾತ್ರೆಯ ಈ ವಿಧಿ ವಿಧಾನಗಳ ಆಚರಣೆಯಲ್ಲಿ ಶ್ರೀದೇವಿಯ ಧರ್ಮದರ್ಶಿ ಮಂಡಳದ ಸದಸ್ಯರು, ಬಾಬದಾರ ಪ್ರಮುಖರಾದ ಅಜಯ ನಾಡಿಗ, ವಿಜಯ ನಾಡಿಗ, ಜಗದೀಶ ಗೌಡ, ಬಸವರಾಜ ಚಕ್ರಸಾಲಿ, ಇತರ ಬಾಬದಾರ ಕುಟುಂಬದವರು, ಪರಿಚಾರಕರು, ನೌಕರರು ಹಾಗೂ ಇತರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.