‍‍‍ಮಾರಿಕಾಂಬಾ ಜಾತ್ರೆ ವೆಬ್‌ಸೈಟ್ ಬಿಡುಗಡೆ

| Published : Mar 19 2024, 12:45 AM IST

ಸಾರಾಂಶ

www.sirsipolice.in ಎಂಬ ವೆಬ್‌ಸೈಟ್‌ನ್ನು ತಯಾರಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ.

ಶಿರಸಿ: ರಾಜ್ಯ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಜಾತ್ರೆಯ ಮಾಹಿತಿ ಹಾಗೂ ರಸ್ತೆ ಸಂಚಾರ ಮತ್ತು ವಾಹನ ನಿಲುಗಡೆ ಪ್ರದೇಶಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ಒಳಗೊಂಡ ಪೊಲೀಸ್ ಇಲಾಖೆಯ ವೆಬ್‌ಸೈಟ್‌ನ್ನು ಸಹಾಯಕ ಆಯುಕ್ತೆ ಅಪರ್ಣ ರಮೇಶ ಮತ್ತು ಡಿಎಸ್‌ಪಿ ಎಂ.ಎಸ್. ಪಾಟೀಲ ಬಿಡುಗಡೆಗೊಳಿಸಿದರು.

ಜಾತ್ರೆಗೆ ಬರುವ ಭಕ್ತಾದಿಗಳಿಗೆ ಜಾತ್ರೆಯ ಮಾಹಿತಿ ಹಾಗೂ ರಸ್ತೆ ಸಂಚಾರ ಮತ್ತು ವಾಹನ ನಿಲುಗಡೆ ಪ್ರದೇಶಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯೊಂದಿಗೆ "www.sirsipolice.in " ಎಂಬ ವೆಬ್‌ಸೈಟ್‌ನ್ನು ತಯಾರಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ. ಈ ವೆಬ್‌ಸೈಟ್‌ನಲ್ಲಿ ಜಾತ್ರಾ ಸಂಭಂದಿತ ಎಲ್ಲ ಮಾಹಿತಿಗಳು ಲಭ್ಯವಿರುತ್ತದೆ. ವಾಹನ ನಿಲುಗಡೆ ಪ್ರದೇಶಗಳಲ್ಲಿ ವಾಹನ ನಿಲುಗಡೆ ಲಭ್ಯವಿರುವ ಸ್ಥಾನಗಳ ಬಗ್ಗೆ ವಾಸ್ತವಿಕ ಮಾಹಿತಿ ನೀಡಲಿದೆ.

ನಂತರ ಮಾಧ್ಯಮದವರಿಗೆ ಡಿಎಸ್‌ಪಿ ಎಂ.ಎಸ್. ಪಾಟೀಲ ಮಾಹಿತಿ ನೀಡಿ, ಖಾಸಗಿ ಬಸ್‌ಗಳಿಗೆ ಪೊಲೀಸ್ ಗ್ರೌಂಡ್(ಹುಬ್ಬಳ್ಳಿ ರಸ್ತೆ-ಶಿರಸಿ) ವ್ಯವಸ್ಥೆ ಮಾಡಲಾಗಿದೆ. ಶಿವಾಜಿ ಚೌಕ್‌(ರಾಯರ ಪೇಟೆ ರಸ್ತೆಯ ಬಲಭಾಗ), ಐದು ರಸ್ತೆ(ಲಕ್ಷ್ಮಿ ಟಾಕೀಸ್ ಪಕ್ಕ), ಹೊಸ ಬಸ್ ನಿಲ್ದಾಣ, ಉಡುಪಿ ಹೋಟೆಲ್ ಹಿಂಭಾಗ(ಟೆಲಿಫೋನ್ ಕಚೇರಿ ಹತ್ತಿರ), ಕಾಮತ್ ಹೋಟೆಲ್ ಕೆಳಭಾಗ ಎಡಕ್ಕೆ ಹುಬ್ಬಳ್ಳಿ ರಸ್ತೆ ಮೋಚಿಗಲ್ಲಿಯವರೆಗೆ, ಕೊಟೆಕೆರೆ ಕ್ರಾಸ್ ಕರಿಗುಂಡಿ ರಸ್ತೆ, ಬಾರಕೂರ ಚೌಕ್‌/ಸಿಪಿ ಬಜಾರ್, ದೇವಿಕೆರೆ(ಅಶ್ವತ್ಥ ಕಟ್ಟೆ ಹತ್ತಿರ), ರಾಮನಬೈಲ್ ಬನವಾಸಿ ರಸ್ತೆ, ಜಗದಂಬಾ ವೃತ್ತ(ಗಾರ್ಡನ್ ಒಳಗೆ) ಆಟೋಗಳ ನಿಲ್ದಾಣಕ್ಕೆ ಅವಕಾಶ ನೀಡಲಾಗಿದೆ. ಕೋಟೆಕೆರೆ ಕ್ರಾಸ್, ಝೂ ವೃತ್ತ, ರಾಮನಬೈಲ್(ಬನವಾಸಿ ರಸ್ತೆ) ಟೆಂಪೋ ನಿಲ್ದಾಣ ಮತ್ತು ವ್ಯಾಯಾಮ ಶಾಲೆ(ಪಿಕಪ್ ಪಾಯಿಂಟ್), ರಾಯಪ್ಪ ಹುಲೆಕಲ್ ಶಾಲೆ(ಡ್ರಾಪಿಂಗ್ ಪಾಯಿಂಟ್), ಹೊಸ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ನಿಲುಗಡೆಯಾಗಲಿದೆ ಎಂದರು.

ಭದ್ರತೆ, ಸುರಕ್ಷತೆಗಾಗಿ ವಿಶೇಷ ತಂಡಗಳು:

ಜಾತ್ರಾ ಗದ್ದುಗೆ, ರಥೋತ್ಸವ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆಗಾಗಿ ಓಬವ್ವ ಮತ್ತು ಕಮಾಂಡೋ ಪಡೆ ರಚಿಸಲಾಗಿದ್ದು, ಓಬವ್ವ ಪಡೆಯಲ್ಲಿ ೨೦ ಮಹಿಳಾ ಸಿಬ್ಬಂದಿ ಮತ್ತು ಕಮಾಂಡೋ ಪಡೆಯಲ್ಲಿ ೨೦ ಪುರುಷ ಸಿಬ್ಬಂದಿ ಇರಲಿದ್ದಾರೆ. ೧೦ ಪುರುಷ ಪೊಲೀಸ್ ತಂಡದ ಆಂಟಿ ಡೆಮೊಸ್ಟ್ರೇಷನ್ ಸಡ್, ಜನಸಂದಣಿ ಪ್ರದೇಶದಲ್ಲಿ ಹಿರಿಯ ನಾಗರಿಕರ ಸಹಾಯ ರಕ್ಷಣೆಗಾಗಿ ಸಿನಿಯರ್ ಸಿಟಿಜನ್ ರೆಸ್ಕ್ಯೂ ಟೀಮ್, ಜನಸಂದಣಿ ಪ್ರದೇಶದಲ್ಲಿ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗಾಗಿ ೧೨ ಜನ ವಿಶೇಷ ನುರಿತ ಪೊಲೀಸ್ ಸಿಬ್ಬಂದಿ ತಂಡದ ಚಿಲ್ಡ್ರನ್ ಮತ್ತು ವುಮೆನ್ಸ್ ರೆಸ್ಕ್ಯೂ ಟೀಮ್, ೧೨ ಜನ ವಿಶೇಷ ಪೊಲೀಸರ ತಂಡವು ಮೆಡಿಕಲ್ ಎಮರ್ಜೆನ್ಸಿ ಅಸಿಸ್ಟನ್ಸ್ ಟೀಮ್, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಪೊಲೀಸ್ ತಂಡ, ೪೦ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ನುರಿತ ಅಪರಾಧ ಪತ್ತೆದಳ, ನಗರದಾದ್ಯಂತ ಜನಸಂದಣಿ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ನುರಿತ ತಂಡ ನಿಗಾ ವಹಿಸಲು ಸಿಸಿ ಟಿವಿ ಮೊನಿಟ್ರಿಂಗ್ ಟೀಮ್, ಲೈಫ್‌ಗಾರ್ಡ್ ಟೀಮ್, ೮ ನುರಿತ ಸಿಬ್ಬಂದಿ ತಂಡವು ಟ್ರಾಫಿಕ್ ನಿಯಂತ್ರಣ ಮಾಡಲಾಗಿದೆ. ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸ್ಕೌ ಸೆನ್ಟ್ರಿ ಟೀಮ್, ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಬಿಡ್ಕಿಬೈಲ್, ಡ್ರೈವರ್‌ಕಟ್ಟೆ, ಶಿವಾಜಿ ಚೌಕ, ದೇವಿಕೆರೆ, ಕೋಟೆಕೆರೆ, ಐದುವೃತ್ತದಲ್ಲಿ ವಾಚ್ ಟಾವರ್, ಜಾತ್ರೆಗೆ ಬರುವ ಸಾರ್ವಜನಿಕರಿಗೆ ಮಾಹಿತಿ- ಸಹಾಯ ನೀಡಲು ಬಿಡ್ಕಿಬೈಲ್, ಕೋಟೆಕರೆ, ದೇವಿಕೆರೆ, ಐದುವೃತ್ತ, ವೀರಭದ್ರಗಲ್ಲಿಯಲ್ಲಿ ಪೊಲೀಸ್ ಹೆಸ್ಪ್‌ಲೈನ್ ಕೇಂದ್ರ ತೆರೆಯಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಿಪಿಐ ಶಶಿಕಾಂತ ವರ್ಮ, ನಗರಠಾಣೆ ಪಿಎಸ್‌ಐ ನಾಗಪ್ಪ ಬಿ., ಮಾರುಕಟ್ಟೆ ಠಾಣೆ ಪಿಎಸ್‌ಐ ರತ್ನಾ ಕೆ. ಇದ್ದರು.