ರಾಮುಲು ವಿರುದ್ಧ ತಿಪ್ಪೇಸ್ವಾಮಿ ಮತ್ತೆ ಬಂಡೆದ್ದು ಸ್ಪರ್ಧೆ

| Published : Mar 18 2024, 02:50 PM IST

Thippeswami and Ramulu
ರಾಮುಲು ವಿರುದ್ಧ ತಿಪ್ಪೇಸ್ವಾಮಿ ಮತ್ತೆ ಬಂಡೆದ್ದು ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಬಳಿಕ ಇದೀಗ ಬಳ್ಳಾರಿಯಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ಶುರುವಾಗಿದೆ. ಮೊಳಕಾಲ್ಮುರು ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲುಗೆ ಇನ್ನಿಲ್ಲದಂತೆ ಕಾಡಿದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಇದೀಗ ಲೋಕಸಭೆ ಚುನಾವಣೆಯಲ್ಲೂ ಮಾಜಿ ಸಚಿವ ವಿರುದ್ಧ ತೊಡೆತಟ್ಟಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶಿವಮೊಗ್ಗ ಬಳಿಕ ಇದೀಗ ಬಳ್ಳಾರಿಯಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ಶುರುವಾಗಿದೆ. ಮೊಳಕಾಲ್ಮುರು ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲುಗೆ ಇನ್ನಿಲ್ಲದಂತೆ ಕಾಡಿದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಇದೀಗ ಲೋಕಸಭೆ ಚುನಾವಣೆಯಲ್ಲೂ ಮಾಜಿ ಸಚಿವ ವಿರುದ್ಧ ತೊಡೆತಟ್ಟಲು ಮುಂದಾಗಿದ್ದಾರೆ. 

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಬಳ್ಳಾರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದೆ. ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು, ಬಸವರಾಜ ಬೊಮ್ಮಾಯಿ ಅವರ ಜೊತೆ ಈ ಕುರಿತು ಚರ್ಚಿಸಿಯೂ ಇದ್ದೆ. 

ಶ್ರೀರಾಮಲು ಅವರು ಯಡಿಯೂರಪ್ಪ ಬಳಿ ಕರೆದೊಯ್ದು ಚರ್ಚಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಈಗ ಅವರೇ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯವರು ನನ್ನನ್ನು ಕೇಳದೆ ರಾಮುಲುಗೆ ಹೆಂಗ್ರೀ ಟೆಕೆಟ್ ಕೊಟ್ರು ಎಂದು ತಿಪ್ಪೇಸ್ವಾಮಿ ಭಾನುವಾರ ಮಾಧ್ಯಮಗಳ ಮುಂದೆ ಆಕ್ರೋಶ ಹೊರಹಾಕಿದ್ದಾರೆ.

ಬಳ್ಳಾರಿಯಲ್ಲಿ ನಮ್ಮ ಸಮುದಾಯದ ಜನ ಹೆಚ್ಚಿದ್ದಾರೆ. ನಮಗೆ ಒಂದು ಅವಕಾಶ ಮಾಡಿ ಕೊಡಿ ಎಂದು ಕೇಳಿದ್ದೆ. ನನ್ನನ್ನು ಒಂದು ಮಾತೂ ಕೇಳದೆ ಶ್ರೀರಾಮುಲುಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಹಾಗಾಗಿ ನಾನು ಪಕ್ಷೇತರನಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಹಿಂದೊಮ್ಮೆ ಬಿಜೆಪಿಯಿಂದ ಸಿಡಿದು ಹೊರ ಬಂದಿದ್ದ ಶ್ರೀರಾಮಲು ತಮ್ಮದೇ ಆದ ಬಿಎಸ್‌ಆರ್ ಪಕ್ಷ ಕಟ್ಟಿದ್ದರು. ಆಗ ಬಿಎಸ್‌ಆರ್ ಪಕ್ಷದಿಂದ 2013ರಲ್ಲಿ ಗೆದ್ದು ಮೊಳಕಾಲ್ಮುರು ಶಾಸಕರಾಗಿದ್ದ ತಿಪ್ಪೇಸ್ವಾಮಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

2018ರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರಾದರೂ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿತು. ಈ ವೇಳೆ ರಾಮುಲು ವಿರುದ್ಧ ತೊಡೆತಟ್ಟಿದ್ದ ತಿಪ್ಪೇಸ್ವಾಮಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲುಂಡಿದ್ದರು.

ಬಳಿಕ ಕಾಂಗ್ರೆಸ್‌ನತ್ತ ಮುಖ ಮಾಡಿದರಾದರೂ ತಿಪ್ಪೇಸ್ವಾಮಿ ಅವರಿಗೆ 2023ರ ಚುನಾವಣೆಯಲ್ಲಿ ಅಲ್ಲೂ ಟಿಕೆಟ್ ಸಿಗಲಿಲ್ಲ. ಈ ಸಂದರ್ಭ ಬಳಸಿಕೊಂಡಿದ್ದ ಶ್ರೀರಾಮುಲು, ತಿಪ್ಪೇಸ್ವಾಮಿ ನಿವಾಸಕ್ಕೆ ತೆರಳಿ ಬಿಜೆಪಿ ಟಿಕೆಟ್ ಕೊಡಿಸಿ ಕಾಂಗ್ರೆಸ್‌ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ವಿರುದ್ಧ ಕಣಕ್ಕಿಳಿಸಿದ್ದರು. 

ಅಚ್ಚರಿ ಎಂದರೆ ರಾಮಲು ಹಾಗೂ ತಿಪ್ಪೇಸ್ವಾಮಿ ಇಬ್ಬರೂ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದರು. ಇದೀಗ ಲೋಕಸಭೆ ಚುನಾವಣೆ ಎದುರಾಗಿದ್ದು, ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಮತ್ತೆ ತೊಡೆ ತಟ್ಟಿದ್ದಾರೆ.