ಸಾರಾಂಶ
ಕಾರ್ತಿಕೋತ್ಸವದಲ್ಲಿ ಅಸಂಖ್ಯಾತ ಭಕ್ತರು ಭಾಗಿ..
ಕನ್ನಡಪ್ರಭ ವಾರ್ತೆ ಕಲಾದಗಿ
ಪ್ರಸಿದ್ಧ ಪವಮಾನ ಕ್ಷೇತ್ರವಾದ ಸಮೀಪದ ತುಳಸಿಗೇರಿಯಲ್ಲಿನ ಶ್ರೀ ಹನುಮಂತದೇವರ ಮರಿ ಕಾರ್ತಿಕೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.ಇಲ್ಲಿ ನಡೆದ ಕಾರ್ತಿಕೋತ್ಸವದಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡು ಸರತಿ ಸಾಲಿನಲ್ಲಿ ನಿಂತು ಹನುಮಂತ ದೇವರಿಗೆ ಗೋಪಾಳ ತುಂಬಿಸಿ ಭಕ್ತಿ ಬಾವ ಮೆರೆದರು.
ಕಳೆದ ಶನಿವಾರ ನಡೆದ ಮೊದಲ ಕಾರ್ತಿಕೋತ್ಸವದಲ್ಲಿ ಕಾಣದ ಭಕ್ತಸಮೂಹ ಇಂದು ಹೆಚ್ಚಾಗಿ ಕಂಡು ಬಂತು. ಬೆಳಗಿನಿಂದಲೇ ಹನುಮಪ್ಪನ ಭಕ್ತರು ಕಾಲ್ನಡಿಗೆಯ ಮೂಲಕ ಗೋವಿಂದಾ ಗೋವಿಂದಾ ಎಂದು ನಾಮಸ್ಮರಣೆ ಮಾಡುತ್ತಾ ತೆರಳುತ್ತಿದ್ದರು. ಹಾಗೆಯೇ ಬಂಡಿಗಳನ್ನು ಸಿಂಗರಿಸಿ ಎತ್ತುಗಳಿಗೆ ಬಣ್ಣ ಹಚ್ಚಿ ಕೊಡುಗಳಿಗೆ ರಿಬ್ಬನ್ ಕಟ್ಟಿಕೊಂಡು ಹಾ ಹರ್ ಹರ್ ಎಂದು ನಾ ಮುಂದು ತಾಮುಂದು ಎಂದು ಎತ್ತುಗಳನ್ನು ಓಡಿಸುತ್ತಾ ತುಳಸಿಗೇರಿ ಹನಮಪ್ಪನ ಕಡೆ ಹೋಗುತ್ತಿರುವ ರೈತಾಪಿ ವರ್ಗದವರು, ಕಳೆದ ಬಾರಿ ಅಷ್ಟಾಗಿ ಕಾಣದಿದ್ದ ಜಾತ್ರೆಯ ಆಕರ್ಷಣೆಗಳಲ್ಲೊಂದು ಅಲಂಕಾರಗೊಂಡ ಎತ್ತಿನ ಬಂಡಿಗಳ ಆಗಮನ ಒಂದಿಷ್ಟು ಹೆಚ್ಚಿನ ಸಂಖ್ಯೆಯಲ್ಲಿಯೆ ಕಂಡು ಬಂದಿದ್ದು ಮರಿಕಾರ್ತಿಕೋತ್ಸವದಲ್ಲಿ ಬಹಳಷ್ಟು ರೈತರು ಬಂಡಿಯಲ್ಲಿ ಬಂದು ಸಂಭ್ರಮಿಸಿದರು.ಜಾತ್ರೆಗೆ ಬಂದ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ತಮ್ಮ ಆಯಾಸ ಮರೆತು, ವೇಳೆಯ ಪರಿವಿಲ್ಲದೆ ಜಿಲ್ಲಾಡಳಿತದವರು ಕೆಲಸದಲ್ಲಿ ತೊಡಗಿದ್ದು, ಪೊಲೀಸ್ ಪಡೆ, ಟ್ರಾಫಿಕ್ ಪೊಲೀಸ್ ಪಡೆಯೂ ಶಿಸ್ತಿನಿಂದ ತನ್ನ ಕರ್ತವ್ಯದಲ್ಲಿ ನಿರತವಾಗಿದ್ದು ಕಂಡು ಬಂತು.