ಪಕ್ಷನಿಷ್ಠೆ ಬದಲಿಸುವ ಮರಿತಿಬ್ಬೇಗೌಡರನ್ನು ಶಿಕ್ಷಕ ಸಮುದಾಯ ತಿರಸ್ಕರಿಸಬೇಕು: ಕೆ.ಟಿ.ಶ್ರೀಕಂಠೇಗೌಡ

| Published : May 25 2024, 12:53 AM IST

ಪಕ್ಷನಿಷ್ಠೆ ಬದಲಿಸುವ ಮರಿತಿಬ್ಬೇಗೌಡರನ್ನು ಶಿಕ್ಷಕ ಸಮುದಾಯ ತಿರಸ್ಕರಿಸಬೇಕು: ಕೆ.ಟಿ.ಶ್ರೀಕಂಠೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಷತ್ತಿನಲ್ಲಿ ಮರಿತಿಬ್ಬೇಗೌಡರ ಹೋರಾಟ ಶೂನ್ಯ. ಕಣದಲ್ಲಿರುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದರನ್ನು ಬೆಂಬಲಿಸಿ ಶಿಕ್ಷಕರ ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದರೂ ಜೊತೆಗೂಡಿ ನಾನು ಹೋರಾಟ ಮಾಡುತ್ತೇನೆ. ಶಿಕ್ಷಕ ಮತದಾರರು ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದರಿಗೆ ಪ್ರಥಮ ಪ್ರಾಶಸ್ತ್ಯದ ಮತನೀಡಿ ಸಂಕಷ್ಟದ ಸನ್ನಿವೇಶದಲ್ಲಿರುವ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಗೆಲುವಿನ ಉಡುಗೊರೆ ನೀಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಮ್ಮ ಅನುಕೂಲಕ್ಕೆ ತಕ್ಕಂತೆ ಪಕ್ಷದಿಂದ ಪಕ್ಷಕ್ಕೆ ನಿಷ್ಠೆ ಬದಲಿಸುವ ಮರಿತಿಬ್ಬೇಗೌಡರನ್ನು ಶಿಕ್ಷಕ ಸಮುದಾಯ ತಿರಸ್ಕರಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮನವಿ ಮಾಡಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾರರ ಸಭೆಯಲ್ಲಿ ಮಾತನಾಡಿ, ಮರಿತಿಬ್ಬೇಗೌಡರಿಗೆ ಪರಿಷತ್ತಿನ ಸಭಾಪತಿ ಹುದ್ದೆ ನೀಡಿ ಎತ್ತರಕ್ಕೆ ಬೆಳೆಸಿ ಗೌರವದಿಂದ ನಡೆಸಿಕೊಂಡ ಜೆಡಿಎಸ್ ಅನ್ನು ಸ್ವಾರ್ಥಕ್ಕಾಗಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್‌ನಿಂದ ರಾಜಕೀಯ ಆರಂಭಿಸಿದ ನಾನು ಪಕ್ಷ ನನಗೆ ಟಿಕೆಟ್ ನಿರಾಕರಿಸಿದ್ದರೂ ನಿಷ್ಟನಾಗಿ ಉಳಿದಿದ್ದೇನೆ. ಜೆಡಿಎಸ್ ನನ್ನನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ ಕಾರಣದಿಂದ ಉತ್ತಮ ಸಂಸದೀಯ ಪಟು ಎನ್ನುವ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ನನಗೆ ಅಧಿಕಾರವಿರಲಿ ಅಥವಾ ಇಲ್ಲದಿರಲಿ ಶಿಕ್ಷಕರ ಸಮಸ್ಯೆಗೆ ನಿರಂತರ ಧ್ವನಿಯಾಗುತ್ತೇನೆ ಎಂದರು.

ಅರೆಕಾಲಿಕ ಉಪನ್ಯಾಸಕರ ಕಾಯಂ, ಗುತ್ತಿಗೆ ಶಿಕ್ಷಕರ ಕಾಯಂ, ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಿದ್ದು, ರಾಜ್ಯದ ಉದ್ಗಲಕ್ಕೂ ನೂರಾರು ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜ ನೀಡಿದ್ದು, ಸಾವಿರಾರು ಶಿಕ್ಷಕರ ನೇಮಕಾತಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಬಹುತೇಕ ಸಮಸ್ಯೆಗಳಿಗೆ ಜೆಡಿಎಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಸ್ಪಂದಿಸಿ ಕೆಲಸ ಮಾಡಿದೆ ಎಂದರು.

ಪರಿಷತ್ತಿನಲ್ಲಿ ಮರಿತಿಬ್ಬೇಗೌಡರ ಹೋರಾಟ ಶೂನ್ಯ. ಕಣದಲ್ಲಿರುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದರನ್ನು ಬೆಂಬಲಿಸಿ ಶಿಕ್ಷಕರ ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದರೂ ಜೊತೆಗೂಡಿ ನಾನು ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶಿಕ್ಷಕ ಮತದಾರರು ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದರಿಗೆ ಪ್ರಥಮ ಪ್ರಾಶಸ್ತ್ಯದ ಮತನೀಡಿ ಸಂಕಷ್ಟದ ಸನ್ನಿವೇಶದಲ್ಲಿರುವ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಗೆಲುವಿನ ಉಡುಗೊರೆ ನೀಡುವಂತೆ ಮನವಿ ಮಾಡಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದರನ್ನು ವರಿಷ್ಠರು ಅಂತಿಮಗೊಳಿಸಿದ್ದಾರೆ. ಒಮ್ಮೆ ಅವಕಾಶ ಕಲ್ಪಿಸಿ ಕೊಟ್ಟರೆ ಅವರ ಕಾರ್ಯ ಚತುರತೆಯನ್ನು ನೀವೆಲ್ಲರೂ ನೋಡಬಹುದು. ಜೂ.3ರಂದು ನಡೆಯುವ ಚುನಾವಣೆಯಲ್ಲಿ ಮೊದಲನೇ ಪ್ರಶಸ್ತ್ಯದ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದು ಕೋರಿದರು.

ನೌಕರರೊಂದಿಗೆ ನಾನು ಕೂಡ ಸದಾ ಇರುತ್ತೇನೆ. ಶಿಕ್ಷಕರ ಸಮಸ್ಯೆಗೆ ದನಿಯಾಗಿ ನಾನು ವಿವೇಕಾನಂದರೊಡನೆ ಸಮಾಲೋಚನೆ ಮಾಡಿ ಕೆಲಸ ಮಾಡಲಿದ್ದೇವೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಪರಿಹರಿಸಲು ಸಿದ್ಧವಿದ್ದೇವೆ ಎಂದು ಮನವಿ ಮಾಡಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ವಿವೇಕಾನಂದ ಮಾತನಾಡಿ, ಜೆಡಿಎಸ್ ವರಿಷ್ಠರ ಸೂಚನೆಯಂತೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಾನು ಪರಿಷತ್ ಚುನಾವಣೆಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಚುನಾವಣೆಯಲ್ಲಿ ನನ್ನ ಹೆಸರಿನ ಮುಂದೆ ಒಂದು ಎಂದು ಬರೆಯುವ ಮೂಲಕ ನನಗೆ ಒಂದು ಅವಕಾಶವನ್ನು ಮಾಡಿಕೊಡಬೇಕು ಎಂದರು.

ಶ್ರೀಕಂಠೇಗೌಡ ಹಾಗೂ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಾನು ಕೆಲಸ ಮಾಡಲು ಬದ್ಧನಾಗಿರುತ್ತೇನೆ. ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದರು.

ಈ ವೇಳೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ನಿಂಗೇಗೌಡ, ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಹೊನ್ನಯ್ಯ, ನಿವೃತ್ತ ಪ್ರಾಂಶುಪಾಲ ಮಂಚೇಗೌಡ, ಹನುಮಂತೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮು, ರಾಜೇನಹಳ್ಳಿ ಕುಮಾರಸ್ವಾಮಿ, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ತಾಲೂಕು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಿ.ಬಿ.ಸತ್ಯ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ. ಶಿವರಾಮೇಗೌಡ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ. ಬಸವರಾಜು, ಕಾರ್ಯದರ್ಶಿ ವಿಜಿನಾರಾಯಣ ಸೇರಿದಂತೆ ನೂರಾರು ಶಿಕ್ಷಕ ಮತದಾರರು ಹಾಜರಿದ್ದರು.