ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಸಂಕೇಶ್ವರ ಪಟ್ಟಣದ ದುರದುಂಡೇಶ್ವರ ತರಕಾರಿ ಮಾರುಕಟ್ಟೆ ಸ್ಥಗಿತಗೊಳಿಸಿ ಕರ್ನಾಟಕದ ಆದಾಯಕ್ಕೆ ಖೋತಾ ಆಗುವಂತೆ ನಿರ್ಧಾರ ಕೈಗೊಂಡಿರುವ ಹುಕ್ಕೇರಿ ತಾಲೂಕು ಆಡಳಿತದ ಕ್ರಮ ಖಂಡಿಸಿ ಅ.15ರಂದು ಸಂಕೇಶ್ವರ ಬಂದ್‌ಗೆ ಕರೆ ನೀಡಲಾಗಿದೆ.ಪಟ್ಟಣದಲ್ಲಿ ಭಾನುವಾರ ಕರ್ನಾಟಕ ರಕ್ಷಣಾ ವೇದಿಕೆ, ನಾಗರಿಕ ಸಲಹಾ ಸಮಿತಿ, ವಿವಿಧ ವ್ಯಾಪಾರಸ್ಥರ ಸಂಘಟನೆಗಳ ಸಭೆಯಲ್ಲಿ ದುರದುಂಡೇಶ್ವರ ತರಕಾರಿ ಮಾರುಕಟ್ಟೆ ಸ್ಥಗಿತಕ್ಕೆ ತಾಲೂಕು ಮತ್ತು ಜಿಲ್ಲಾಡಳಿತ ತರಾತುರಿ ಮತ್ತು ಏಕಪಕ್ಷೀಯ ನಿರ್ಧಾರವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಜಂಟಿ ಸುದ್ಧಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಪ್ರಮೋದ ಹೊಸಮನಿ, ದಿಲೀಪ ಹೊಸಮನಿ, ಮಹೇಶ ಹಟ್ಟಿಹೊಳಿ ಮಾತನಾಡಿ, ತಾಲೂಕು ಆಡಳಿತ ಯಾವುದೇ ಕಾನೂನು ಬದ್ಧ ನೋಟಿಸ್ ಮತ್ತು ಮುನ್ಸೂಚನೆ ನೀಡದೇ ಸಂಕೇಶ್ವರದ ದುರದುಂಡೇಶ್ವರ ಆವರಣದ ತರಕಾರಿ ಮಾರುಕಟ್ಟೆಯನ್ನು ಏಕಾಏಕಿ ಸ್ಥಗಿತಗೊಳಿಸಿದೆ. ಇದರೊಂದಿಗೆ ಪಕ್ಕದ ನೆರೆಯ ಮಹಾರಾಷ್ಟ್ರದ ಮುತ್ನಾಳದಲ್ಲಿ ಮಾರುಕಟ್ಟೆ ಆರಂಭಕ್ಕೆ ಅಪರೋಕ್ಷ ನೆರವು ನೀಡಿ ಕರ್ನಾಟಕದ ಆದಾಯ ನಷ್ಟ ಮಾಡಲಾಗುತ್ತಿದೆ ಎಂದು ದೂರಿದರು.ತಾಲೂಕು ಆಡಳಿತದ ದಿಢೀರ್ ನಿರ್ಧಾರದಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆಯಾಗಿದೆ. ಮಹಾರಾಷ್ಟ್ರದ ಮುತ್ನಾಳದಲ್ಲಿ ಮಾರುಕಟ್ಟೆ ಇರುವುದರಿಂದ ಕರ್ನಾಟಕದ ವ್ಯಾಪಾರ-ವಹಿವಾಟು ವ್ಯವಸ್ಥೆಗೆ ಬಲವಾದ ಆರ್ಥಿಕ ಪೆಟ್ಟು ಬಿದ್ದಿದೆ. ಹಾಗಾಗಿ ಈ ಮೊದಲಿನಂತೆಯೇ ದುರದುಂಡೇಶ್ವರ ಆವರಣದಲ್ಲಿ ಪುನ: ತರಕಾರಿ ಮಾರುಕಟ್ಟೆ ಆರಂಭಿಸಬೇಕು ಎಂದವರು ಒತ್ತಾಯಿಸಿದರು.
ದುರದುಂಡೇಶ್ವರ ಮಾರುಕಟ್ಟೆ ಕುರಿತು ರೈತ ಮುಖಂಡ ಚೂನಪ್ಪ ಪೂಜೇರಿ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.ಕನ್ನಡಪರ ಹೋರಾಟಗಾರರಾದ ಗಂಗಾರಾಮ ಭೂಸಗೋಳ, ಪ್ರಮೋದ ಕೂಗೆ, ಸಂತೋಷ ಸತ್ಯನಾಯಿಕ, ಮೋಶಿನ್ ಪಠಾಣ, ವಿನಯ ಪಾಟೀಲ, ಬಸವರಾಜ ಲೋಳಸೂರ, ವಿನಾಯಕ ಕೋಳಿ, ರಾಬಿನ್‌ಸಿಂಗ್ ಕೌಜಲಗಿ, ಅರುಣ ಬೆಳವಿ, ವಿಲ್ಸನ್ ಕೌಜಲಗಿ, ಅಭಿ ಮುಗಳಿ, ಶಾಂತಿನಾಥ ಮಗದುಮ್ಮ, ಮಹಾಂತೇಶ ಬೇವಿನಕಟ್ಟಿ, ಸುನೀಲ ಕರೋಶಿ, ಮತ್ತಿತರರು ಇದ್ದರು.