ಬಿದಿರು ಉತ್ಪನ್ನಕ್ಕೆ ಮಾರುಕಟ್ಟೆ ಕಲ್ಪಿಸುವೆ: ಚಲುವರಾಯಸ್ವಾಮಿ

| Published : Jun 29 2024, 01:16 AM IST / Updated: Jun 29 2024, 07:18 AM IST

ಬಿದಿರು ಉತ್ಪನ್ನಕ್ಕೆ ಮಾರುಕಟ್ಟೆ ಕಲ್ಪಿಸುವೆ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಮಟ್ಟದ ಕೃಷಿ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಬಿದಿರು ಮೌಲ್ಯವರ್ಧಿತ ವಸ್ತುಗಳ ಪ್ರದರ್ಶನ ಕಾರ್ಯಾಗಾರ

 ಬೆಂಗಳೂರು : ಪ್ಲಾಸ್ಟಿಕ್‌, ಲೋಹಕ್ಕೆ ಪರ್‍ಯಾಯವಾಗಿರುವ ಬಿದಿರು ಕೃಷಿ ಉತ್ಪನ್ನಗಳಿಗೆ ಬೇಡಿಕೆಯೊಂದಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಜಿಲ್ಲೆ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಅರಿವು ಮೂಡಿಸಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಶುಕ್ರವಾರ ಕೃಷಿ ಇಲಾಖೆ ಸಭಾಂಗಣದಲ್ಲಿ ಬಿದಿರು ಸೊಸೈಟಿ ಆಫ್‌ ಇಂಡಿಯಾ, ಕೃಷಿ ಇಲಾಖೆ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ‘ರಾಜ್ಯಮಟ್ಟದ ಕೃಷಿ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಬಿದಿರು ಮೌಲ್ಯವರ್ಧಿತ ವಸ್ತುಗಳ ಪ್ರದರ್ಶನ ಕಾರ್ಯಾಗಾರ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿದಿರು ಅತೀ ಕಡಿಮೆ ವ್ಯಾಪ್ತಿಯ ಪ್ರದೇಶದಲ್ಲಿ ಬೆಳೆದು, ಹೆಚ್ಚಿನ ಆದಾಯ ಕೊಡುವ ಕೃಷಿಯಾಗಿದೆ. ವೇಗವಾಗಿ ಬೆಳೆಯುವುದರ ಜತೆಗೆ ಪರಿಸರ, ಆರ್ಥಿಕ ಮತ್ತು ಜೀವನ ಭದ್ರತೆ ಒದಗಿಸಲು ಸಹಾಯಕವಾಗಿದೆ. ಬಿದಿರಿನಿಂದ ತಯಾರಿಸಿದ ಉತ್ಪನ್ನ, ಪ್ಲೈವುಡ್ ಮತ್ತು ಪೀಠೋಪಕರಣಗಳಂತಹ ವಿವಿಧ ಕೈಗಾರಿಕಾ ಕಚ್ಚಾ ವಸ್ತುಗಳು ದೀರ್ಘ ಬಾಳಿಕೆ ಬರುತ್ತವೆ. ಅಲ್ಲದೇ ಪೇಪರ್ ತಯಾರಿಕೆ, ಆಹಾರೋದ್ಯಮ ಮತ್ತು ಇಂಧನ ತಯಾರಿಕೆಗೂ ಬಿದಿರು ಬಳಸಲಾಗುತ್ತಿದೆ. ಇದರಿಂದ ರೈತರು ಲಾಭಗಳಿಸಲು ಸಾಧ್ಯ ಎಂದರು.

ಕಾರ್ಯಾಗಾರದಲ್ಲಿ ಬಿದಿರು ಹಾಗೂ ಕಟ್ಟಿಗೆ ಪುಡಿಯನ್ನು ಬಳಸಿ ತಯಾರಿಸಿದ ಪರಿಸರ ಸ್ನೇಹಿ ಬಿದಿರು ಪೆಲೆಟ್ಸ್ (ಉರುವಲು ಕಟ್ಟಿಗೆ), ಬಿದಿರು ಖುರ್ಚಿ, ಟೇಬಲ್‍ಗಳು, ಆಭರಣ ಉತ್ಪನ್ನಗಳು, ಅಲಂಕಾರಿಕ ಲ್ಯಾಂಪ್‍ಗಳು, ಸಂಗೀತ ಪರಿಕರಗಳು, ಗಾಂಧೀಜಿ ಸೇರಿದಂತೆ ನಾನಾ ಗಣ್ಯ ವ್ಯಕ್ತಿಗಳ ಬಿದಿರಿನ ಕಲಾಕೃತಿಗಳು ಹಾಗೂ ಇತರೆ ಅಲಂಕಾರಿಕ ವಸ್ತುಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷೆ ಸಿ.ಎನ್‌.ನಂದಿನಿಕುಮಾರಿ, ಕೃಷಿ ಇಲಾಖೆ ನಿರ್ದೇಶಕ ಡಾ। ಜಿ.ಟಿ.ಪುತ್ರ, ಕೃಷಿ ಆಯುಕ್ತ ವೈ.ಎಸ್‌.ಪಾಟೀಲ್‌, ಕೃಷಿ ಅರಣ್ಯ ರೈತರ ಸಂಸ್ಥೆಯ ಅಧ್ಯಕ್ಷ ಅಜಯ್‌ ಮಿಶ್ರಾ ಉಪಸ್ಥಿತರಿದ್ದರು.