ನಮ್ಮ ದೇಶದ ಸಂಸ್ಕೃತಿಯಲ್ಲಿರುವ ಭದ್ರ ಬುನಾದಿ, ಅರ್ಥೈಸಿಕೊಳ್ಳುವ ಹೊಂದಾಣಿಕೆ, ಕುಟುಂಬ ನಿರ್ವಹಣೆಯ ಜವಾಬ್ದಾರಿತನವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಸಮಾಜದಲ್ಲಿ ಮಾದರಿಯಾಗಿ ಬದುಕಿ ಮಕ್ಕಳನ್ನು ಸರಿದಾರಿಯಲ್ಲಿ ನಡೆಸಬೇಕೆಂದರೆ ಜೀವನದ ಬಂಡಿಯಲ್ಲಿ ಎರಡು ಗಾಲಿಗಳು ಅಷ್ಟೇ ಮುಖ್ಯವಾಗಿರುತ್ತವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮದುವೆ ಎಂಬುದು ಪ್ರತಿಷ್ಠೆಯಾಗಬಾರದು. ಅದು ಸಂಸ್ಕಾರವಾಗಿ ನಮ್ಮ ಬದುಕನ್ನು ಮುನ್ನಡೆಸುವ ಶಕ್ತಿಯಾಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸರಳ ಸಾಮೂಹಿಕ ವಿವಾಹ ಹಾಗೂ ವಿವಾಹವಾಗಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಹಿರಿಯ ದಂಪತಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ನಮ್ಮ ಪ್ರಜ್ಞೆ ಮತ್ತಷ್ಟು ಎತ್ತರಕ್ಕೆ ಹೋಗುವ ಹೋಲಿಕೆ ಇರಬೇಕೇ ಹೊರತು ನಮ್ಮನ್ನು ಕೆಳಗೆ ಎಳೆತಂದು ನಮ್ಮ ಸಂಸಾರದ ತೇರು ದಾರಿ ತಪ್ಪದಂತೆ ನೋಡಿಕೊಂಡರೆ ಬದುಕು ಬಹಳ ಸುಂದರವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.

ಮದುವೆಗೋಸ್ಕರ ಲಕ್ಷಾಂತರ ರು.ಗಳ ಸಾಲ ಮಾಡಿ ನಂತರದಲ್ಲಿ ಎಲ್ಲರೂ ಕೈಬಿಟ್ಟ ಮೇಲೆ ನಿಮ್ಮ ಬದುಕನ್ನು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಸಾಲ ಮಾಡಿದ ಘಳಿಗೆ ದುಸ್ಥರವಾಗುತ್ತದೆ. ಎಷ್ಟೇ ಅನ್ಯೋನ್ಯವಾದ ಪ್ರೀತಿ ತೋರುವ ಬಂಧುಗಳು ಜೊತೆಯಲ್ಲಿದ್ದರೂ ಕೂಡ ಭೌತಿಕವಾಗಿ ಸಾಕಷ್ಟು ಹೊರೆ ಬಿದ್ದಾಗ ಸಹಜವಾಗಿ ಪ್ರೀತಿ ಹಳಸುತ್ತದೆ ಎಂದರು.

ಭೂಮಿಗೆ ಬಿತ್ತುವ ಯಾವುದೇ ಬೀಜವನ್ನು ಸಮ ಪ್ರಮಾಣದಲ್ಲಿ ಬಿತ್ತಿದರೆ ಅಂತಹ ಬೀಜ ಒಡೆದು ಮೊಳಕೆಯಾಗಿ ಗಿಡವಾಗಿ ಹೂವು ಹಣ್ಣು ಕೊಡುತ್ತದೆ. ಬಿತ್ತುವ ಬೀಜದ ಮೇಲೆ ಅಧಿಕ ಮಣ್ಣು ಬಿದ್ದರೆ ಮಣ್ಣಿನ ಹೊರೆಯನ್ನು ತಡೆಯಲಾಗದೆ ಮೊಳಕೆ ಒಡೆಯದೆ ಮಣ್ಣಿನಲ್ಲಿ ಬೀಜ ಕೊಳೆತು ಹೋಗುತ್ತದೆ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ವ್ಯಕ್ತಿಯ ಬದುಕು ಕೂಡ ಅದೇ ರೀತಿ. ಬದುಕು ಇರುವುದೇ ಜ್ಞಾನವನ್ನು ಪಡೆದು ನಮ್ಮನ್ನು ನಾವು ಸುಜ್ಞಾನದ ಕಡೆಗೆ ಕೊಂಡೊಯ್ಯಲು. ಅಂತಹ ಹೊತ್ತಿನಲ್ಲಿ ಅಜ್ಞಾನದಿಂದ ಸಾಲ, ಪ್ರತಿಷ್ಠೆ ಮತ್ತು ಅಹಂನ ಹೊರೆಗಳನ್ನು ಮೈಮೇಲೆ ಹಾಕಿಕೊಂಡರೆ ಕೊನೆಗೆ ನಮ್ಮನ್ನು ಮೇಲೆತ್ತಲು ಯಾರೂ ಬರುವುದಿಲ್ಲ. ಹಾಗಾಗಿ ಸರಿಯಾದ ಬದುಕನ್ನು ಕಟ್ಟಿಕೊಳ್ಳಬೇಕೆಂದರೆ ನಮ್ಮ ದೇಹ ಹಾಗೂ ಬದುಕು ಸದಾಕಾಲ ಹಗುರವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಈ ವರ್ಷದಿಂದ ವಧು ವರರಿಗೆ ತರಬೇತಿ:

ಮದುವೆ ನಂತರ ವಧು ವರರಿಗೆ ದೇಹ ಮತ್ತು ಬದುಕು ಹೊರೆಯಾಗಬಾರದೆಂಬ ಕಾರಣಕ್ಕೆ ಈ ವರ್ಷದಿಂದ ಮದುವೆಗೂ ಮುನ್ನ ವಧು ವರರಿಗೆ ಸೂಕ್ತ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ. ಮದುವೆ ನಂತರ ಜನ್ಮಕೊಟ್ಟ ಮಕ್ಕಳಿಗೆ ಯಾವ ರೀತಿ ಪೋಷಣೆ ಮಾಡಿ ಉತ್ತಮ ಸಂಸ್ಕಾರ ನೀಡಬೇಕೆಂಬುದಕ್ಕೆ ಮತ್ತೊಂದು ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದರು.

ಸತಿ ಮತ್ತು ಪತಿಯ ನಡುವೆ ಜೀವನದಲ್ಲಿ ತಾಳ್ಮೆ ಅತಿ ಮುಖ್ಯವಾಗಿರಬೇಕು. ಸಂಸಾರದಲ್ಲಿ ಯಾವುದೇ ಸಣ್ಣ ಪುಟ್ಟ ವಿಚಾರ ಬಂದರೂ ಸಹ ಇಬ್ಬರೂ ತಾಳ್ಮೆ ಕಳೆದುಕೊಳ್ಳದೆ ಅನ್ಯೋನ್ಯವಾಗಿ ಹೊಂದಾಣಿಕೆಯಿಂದ ಸುಂದರ ಬದುಕು ಸಾಗಿಸಬೇಕು. 50 ವರ್ಷ ತುಂಬಿದ ದಂಪತಿಗಳೂ ಸಹ ಈ ಕಾರ್ಯಕ್ರಮದಲ್ಲಿದ್ದು, ನೂತನ ವಧು- ವರರಿಗೆ ಇವರುಗಳ ಬದುಕು ಆದರ್ಶವಾಗಬೇಕು. ಸಂಸಾರದಲ್ಲಿ ಸಹನೆಯಿಂದ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಜೀವನ ನಡೆಸಿದರೇ ಆ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಮೂಡುತ್ತದೆ ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸಮಾಜಕ್ಕೂ ಆಡಳಿತಕ್ಕೂ ಕಂದಕವಿದ್ದರೆ ಆಡಳಿತ ಸಾರ್ಥಕತೆ ಕಾಣುವುದಿಲ್ಲ. ಸಮಾಜದಲ್ಲಿರುವ ಎಲ್ಲಾ ವಿಷಯಗಳಿಗೆ ನಾವು ಸ್ಪಂದಿಸಿ ಉತ್ತರ ಕಂಡುಕೊಳ್ಳಲು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಅದಕ್ಕೊಂದು ನಿಜವಾದ ಅರ್ಥ ಸಿಗುತ್ತದೆ ಎಂದರು.

ನಮ್ಮ ದೇಶ ಮುಂದುವರಿದ ರಾಷ್ಟ್ರವಾಗಿ ಭದ್ರಬುನಾದಿಯಾಗಬೇಕೆಂದರೆ ಆರ್ಥಿಕ ವ್ಯವಸ್ಥೆಯಷ್ಟೇ ಕೌಟುಂಬಿಕ ವ್ಯವಸ್ಥೆಯೂ ಬಹುಮುಖ್ಯ. ನಮ್ಮ ದೇಶದ ಸಂಸ್ಕೃತಿಯಲ್ಲಿರುವ ಭದ್ರ ಬುನಾದಿ, ಅರ್ಥೈಸಿಕೊಳ್ಳುವ ಹೊಂದಾಣಿಕೆ, ಕುಟುಂಬ ನಿರ್ವಹಣೆಯ ಜವಾಬ್ದಾರಿತನವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಸಮಾಜದಲ್ಲಿ ಮಾದರಿಯಾಗಿ ಬದುಕಿ ಮಕ್ಕಳನ್ನು ಸರಿದಾರಿಯಲ್ಲಿ ನಡೆಸಬೇಕೆಂದರೆ ಜೀವನದ ಬಂಡಿಯಲ್ಲಿ ಎರಡು ಗಾಲಿಗಳು ಅಷ್ಟೇ ಮುಖ್ಯವಾಗಿರುತ್ತವೆ ಎಂದು ತಿಳಿ ಹೇಳಿದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಪುಸ್ತಕ ಸಂಗ್ರಹಕಾರ ಅಂಕೇಗೌಡ, ತುರುವೇಕೆರೆ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪುಟ್ಟರಂಗ, ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ನಾಗಣ್ಣಗೌಡ ಮಾತನಾಡಿದರು.

ಈ ವೇಳೆ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶ್ರೀಮಠದ ಚೈತನ್ಯನಾಥಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಇದ್ದರು.